ಗಾಂಧೀಜಿ ಭೇಟಿಯ ಕುರಿತು ಬಳ್ಳಾರಿ ರೈಲು ನಿಲ್ದಾಣದಲ್ಲಿ ಹಾಕಲಾಗಿರುವ ಮಾಹಿತಿ ಫಲಕ
ಗಾಂಧೀಜಿ ಭೇಟಿಯ ಸ್ಮರಣೆಗಾಗಿ ಬಳ್ಳಾರಿಯ ರೈಲು ನಿಲ್ದಾಣದ ಎದುರು ಪ್ರತಿಮೆ ಮತ್ತು ಉದ್ಯಾನವುಳ್ಳ ಸ್ಮಾರಕ ನಿರ್ಮಾಣ ಮಾಡುವಂತೆ ಹುಬ್ಬಳ್ಳಿಯ ನೈಋತ್ಯ ರೈಲ್ವೆಗೆ ಪತ್ರ ಬರೆಯಲು 1996ರಲ್ಲಿ ನಾನು ಗಾಂಧಿ ಭವನದ ಅಧ್ಯಕ್ಷನಾಗಿದ್ದಾಗ ಅಂದಿನ ಜಿಲ್ಲಾಧಿಕಾರಿ ಮಂಜುಳಾ ಅವರಿಗೆ ಮನವಿ ಮಾಡಿದ್ದೆ. ಮಂಜುಳಾ ವಿಶೇಷ ಅಸ್ತೆ ವಹಿಸಿ ಅಧಿಕಾರಿಗಳಿಗೆ ಪತ್ರ ಬರೆದರು. ಆದರೆ ರೈಲ್ವೆ ಇಲಾಖೆ ನಮ್ಮ ಮನವಿಯನ್ನು ನಿರಾಕರಿಸಿತು. ನಿಲ್ದಾಣದಲ್ಲಿ ಒಂದು ಫಲಕವನ್ನು ಮಾತ್ರ ಹಾಕಲು ಒಪ್ಪಿತು. ಆದರೆ ಇದು ಜನರಿಗೆ ಗೊತ್ತಾಗುವುದೇ ಇಲ್ಲ. ನನ್ನ ತಂದೆ (ಟೇಕೂರು ಸುಬ್ರಹ್ಮಣ್ಯಂ) ಜೀವನಚರಿತ್ರೆಯಲ್ಲಿನ ಗಾಂಧೀಜಿ ಕುರಿತ ವಿವರಗಳುಳ್ಳ ಲ್ಯಾಮಿನೇಟ್ ಆದ ದಾಖಲೆಯನ್ನು 2021ರಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣದ ಅಂದಿನ ಸ್ಟೇಷನ್ ಮಾಸ್ಟರ್ ಶ್ರೀ.ಶೇಷಾದ್ರಿ ಅವರಿಗೆ ನೀಡಿ ಕಚೇರಿಯಲ್ಲಿ ಪ್ರದರ್ಶಿಸಲು ಕೋರಿದ್ದೆ. ಸದ್ಯ ಅವರು ದಾಖಲೆಯನ್ನೇ ಕಳೆದುಹಾಕಿದ್ದಾರೆ. ಐತಿಹಾಸಿಕ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗಿರುವ ನಿರ್ಲಕ್ಷ್ಯವನ್ನು ಇದು ತೋರಿಸುತ್ತದೆ.