ಬಿಜೆಪಿ, ಕಾಂಗ್ರೆಸ್ ಪ್ರಚಾರ ಜೋರು
ಹಬ್ಬದ ಮಾರನೇ ದಿನವೇ ಸಂಡೂರಿನಲ್ಲಿ ಪ್ರಚಾರದ ಅಬ್ಬರವೂ ಜೋರಾಗಿದೆ. ಬಿಜೆಪಿ ನಾಯಕರಾದ ಬಿ.ವೈ ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಸೋಮವಾರ ಪ್ರಚಾರ ನಡೆಸಿದರು. ಸಚಿವ ಕೆ.ಜೆ ಜಾರ್ಜ್ ಕ್ರೈಸ್ತ ಸಮುದಾಯದ ಮುಖಂಡರ ಸಭೆಗಳನ್ನು ನಡೆಸಿದರೆ, ಸಚಿವ ಸಂತೋಷ್ ಲಾಡ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರೊಂದಿಗೆ ಪ್ರಚಾರ ನಡೆಸಿದರು. ಬೀದರ್ ಸಂಸದ ಸಾಗರ್ ಖಂಡ್ರೆ ಅವರೂ ಇದ್ದರು. ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ‘ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೆಚ್ಚಿನ ತೆರಿಗೆ ಪಾವತಿಸುತ್ತಿದೆ. ಆದರೆ, ನಮಗೆ ಕೇಂದ್ರದಿಂದ ಸಿಗುತ್ತಿರುವುದು ಅಲ್ಪ ಪಾಲು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕೆ ಇಂಥ ಅನ್ಯಾಯ ಮಾಡಬಾರದು’ ಎಂದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರವಾಗಿ ಕೇಂದ್ರದ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಕೂಡ ಪ್ರಚಾರ ನಡೆಸಿದರು. ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ‘ವಕ್ಫ್ ಆಸ್ತಿಗಳನ್ನು ಕಾಂಗ್ರೆಸ್ ನಾಯಕರು ಅನುಭವಿಸುತ್ತಿದ್ದಾರೆ. ಅವುಗಳೂ ಹೊರಗೆ ಬರಲಿವೆ. ನಾವೇನು ಮುಸ್ಲಿಮರ ವಿರೋಧಿಗಳಲ್ಲ. ಮುಸ್ಲಿಮರ ಆಸ್ತಿಗಳಿಗೂ ವಕ್ಫ್ ಹೆಸರು ಬಂದಿದೆ. ಭಾಗ್ಯಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಕಸಿದಿದೆ’ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.