ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಎಲ್ಲ ಬಡಾವಣೆಗಳಲ್ಲಿ ಸುಮಾರು 1600 ಸಿ.ಎ ನಿವೇಶನಗಳನ್ನು ಹಂಚಿದೆ. ಇಂತಹ ನಿವೇಶನಗಳನ್ನು ಯಾವ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿದೆಯೋ ಅದಕ್ಕೇ ಬಳಕೆ ಮಾಡಿಕೊಳ್ಳಬೇಕು. ಆ ಉದ್ದೇಶದ ಜೊತೆಗೆ ವಾಣಿಜ್ಯ ಚಟುವಟಿಕೆ ನಡೆಸುವುದು ಅಂದರೆ ಮಳಿಗೆ ನಿರ್ಮಿಸಿ ಅದರಿಂದ ಬಾಡಿಗೆ ಪಡೆಯುವುದು ಶೆಡ್ ಇತ್ಯಾದಿಗಳಿಂದ ಬಾಡಿಗೆ ತೆಗೆದುಕೊಳ್ಳುವುದು ಅಕ್ರಮವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಬಿಡಿಎ ನಿರ್ಧರಿಸಿದೆ. ‘ಇತ್ತೀಚಿನ ದಿನಗಳಲ್ಲಿ ಸಿ.ಎ ನಿವೇಶನಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದು ಬಿಡಿಎ ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಇವುಗಳನ್ನು ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ. ನಾಗರಿಕರು ನೀಡುವ ದೂರಿನನ್ವಯವೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.