ಕಾಮಗಾರಿ ಪೂರ್ಣಗೊಳಿಸಿ ಮಳಿಗೆಗಳನ್ನು ಹಸ್ತಾಂತರಿಸುವಂತೆ ಬಿಡಿಎ ಹಾಗೂ ಬಿಬಿಎಂಪಿ ಕಚೇರಿಗೆ ಅಲೆದು ಸಾಕಾಗಿದೆ. ಮಾರುಕಟ್ಟೆ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವಂತೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮನ್ನಣೆ ಸಿಕ್ಕಿಲ್ಲ. ಸುಭದ್ರ ಕಟ್ಟಡ ತೆರವುಗೊಳಿಸಿ ವ್ಯಾಪಾರಿಗಳನ್ನು ಬೀದಿಗೆ ತಳ್ಳಿಬಿಟ್ಟಿರು.
ಲಕ್ಷ್ಮಣ್, ಅಧ್ಯಕ್ಷ, ಹೂವು ಹಾಗೂ ಹಣ್ಣಿನ ವ್ಯಾಪಾರಿಗಳ ಸಂಘ
ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಮಳಿಗೆ ಸೇರುತ್ತಿತ್ತು. ಸ್ವಂತ ಖರ್ಚಿನಲ್ಲಿ ನೀರು ಒಳ ಪ್ರವೇಶಿಸದಂತೆ ಕಟ್ಟೆ ನಿರ್ಮಿಸಿಕೊಂಡಿದ್ದೇವೆ. ರಸ್ತೆಯ ದೂಳು ಅಂಗಡಿಯ ಒಳಕ್ಕೇ ಬರುತ್ತದೆ. ಮಧ್ಯಾಹ್ನ ಊಟ ಮಾಡುವುದಕ್ಕೂ ತೊಂದರೆಯಾಗಿದೆ.
ರಾಮೋಜಿರಾವ್
ತಾತ್ಕಾಲಿಕ ಶೆಡ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮನೆಯಿಂದಲೇ ಬ್ಯಾಟರಿ ಚಾರ್ಜ್ ಮಾಡಿಕೊಂಡು ಬರುತ್ತೇವೆ. ಆಕಸ್ಮಿಕವಾಗಿ ಬ್ಯಾಟರಿಯನ್ನು ರಾತ್ರಿ ಬಿಟ್ಟು ಹೋದರೆ ಅವುಗಳು ಕಳ್ಳರ ಪಾಲಾಗಿರುತ್ತವೆ.
ಮುನಿರತ್ನಮ್ಮ
ಹೂವಿನ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದೇವೆ. ಆದಷ್ಟು ಬೇಗನೇ ಬಹುಮಹಡಿ ಕಟ್ಟಡ ನಿರ್ಮಿಸಿಕೊಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಅವರಿಗೆ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ. ದೂರದ ಬಿಜೆಪಿ ಕಚೇರಿ ಬಳಿಯಿರುವ ಶೌಚಾಲಯಕ್ಕೆ ತೆರಳಬೇಕು. ಅಲ್ಲಿಗೆ ಹೋಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಆ ವೇಳೆ ಹತ್ತಾರು ಗ್ರಾಹಕರು ಬಂದು ಹೋಗಿರುತ್ತಾರೆ. ಇತ್ತ ವ್ಯಾಪಾರವೂ ನಷ್ಟವಾಗುತ್ತಿದೆ.
ಕಲಾ
ನಿರ್ಮಾಣ ಹಂತದ ಕಟ್ಟಡದಲ್ಲಿ ಕಿರಿದಾದ ಮಳಿಗೆ ನಿರ್ಮಿಸಲಾಗುತ್ತಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ವಿಸ್ತೀರ್ಣ ದೊಡ್ಡದು ಮಾಡಬೇಕು.
ಸುನಿಲ್
ಹೂವಿಗೂ ಕಳ್ಳರ ಕಾಟ
‘ತಾತ್ಕಾಲಿಕ ಮಳಿಗೆಗಳಿಗೆ ಬಾಗಿಲು ನಿರ್ಮಿಸಿಲ್ಲ. ರಾತ್ರಿ ವೇಳೆ ಕಳ್ಳರು ಹೂವು ಹಾಗೂ ಬ್ಯಾಟರಿ ಕಳವು ಮಾಡಿ ಪರಾರಿ ಆಗುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆದರೆ, ಕಳ್ಳರು ಪತ್ತೆಯಾಗುತ್ತಿಲ್ಲ. ಈಗ ಸ್ವಲ್ಪ ದೂರದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಹೂವು ವ್ಯಾಪಾರಸ್ಥರು ಹೇಳುತ್ತಾರೆ.