ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ganesh Chaturthi: ಭಕ್ತರ ಮನೆಗೆ ‘ಗೋಮಯ ಗಣೇಶ'

ಕಾಮಧೇನು ಗೋಶಾಲೆಯಿಂದ ಪರಿಸರ ಸ್ನೇಹಿ ಮೂರ್ತಿ ತಯಾರಿಕೆ
Published : 5 ಸೆಪ್ಟೆಂಬರ್ 2024, 5:45 IST
Last Updated : 5 ಸೆಪ್ಟೆಂಬರ್ 2024, 5:45 IST
ಫಾಲೋ ಮಾಡಿ
Comments

ನಾಗೋರಾ (ಜನವಾಡ): ಈ ಬಾರಿಯ ಗಣೇಶ ಚತುರ್ಥಿಗೆ ಭಕ್ತರ ಮನೆಗೆ ಪರಿಸರ ಸ್ನೇಹಿ ‘ಗೋಮಯ ಗಣೇಶ’ನೂ ಬರಲಿದ್ದಾನೆ.

ಅಂದದ, ಚೆಂದದ ವಿಘ್ನ ನಿವಾರಕನ ಮೂರ್ತಿಯನ್ನು ಬರಮಾಡಿಕೊಳ್ಳಲು ಜಿಲ್ಲೆಯ ವಿವಿಧೆಡೆಯ ಅನೇಕ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ದೂರವಾಣಿ ಕರೆ ಮಾಡಿ ಮೂರ್ತಿಗಳು ಸಿದ್ಧವಾಗಿವೆಯೇ ಎಂದು ತಯಾರಕರನ್ನು ವಿಚಾರಿಸುತ್ತಿದ್ದಾರೆ.

ಅಂದ ಹಾಗೆ ಭಕ್ತರ ಬೇಡಿಕೆಯ ಈ ಮೂರ್ತಿಗಳು ಸಿದ್ಧವಾಗುತ್ತಿರುವುದು ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಬೀದರ್ ತಾಲ್ಲೂಕಿನ ನಾಗೋರಾ ಗ್ರಾಮದ ಕಾಮಧೇನು ಗೋಶಾಲೆಯಲ್ಲಿ.

ಆಗಲೇ ಇಲ್ಲಿ ಗೋಮಯ ಏಕದಂತನ ಮೂರ್ತಿಗಳು ತಯಾರಾಗಿವೆ. ಗಣೇಶ ಚತುರ್ಥಿ ವೇಳೆಗೆ ಇನ್ನಷ್ಟು ಹೊಸ ಮೂರ್ತಿಗಳು ಈ ಸಾಲಿಗೆ ಸೇರಲಿವೆ.

‘ಈಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಉತ್ತೇಜನ ನೀಡುವ ಕೆಲಸಗಳು ಆಗುತ್ತಿವೆ. ಹೀಗಾಗಿ ಪರಿಸರ ಸ್ನೇಹಿ ಮೂರ್ತಿ ತಯಾರಿಕೆಯೊಂದಿಗೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಆಲೋಚನೆ ಗೋಶಾಲೆಗೆ ಹೊಳೆಯಿತು. ಎರಡು ವರ್ಷದಿಂದ ಗೋಶಾಲೆಯಲ್ಲಿ ಮೂರ್ತಿ ತಯಾರಿಸಲಾಗುತ್ತಿದೆ’ ಎಂದು ಗೋಶಾಲೆ ಸಂಚಾಲಕ ಶಿವಕುಮಾರ ಹಿರೇಮಠ ತಿಳಿಸಿದರು.

‘ಕಳೆದ ವರ್ಷ ಹೆಣ್ಣುಮಕ್ಕಳಿಗೆ ಮೂರ್ತಿ ತಯಾರಿಕೆ ತರಬೇತಿ ಕೊಡಲಾಗಿತ್ತು. ಮೂರ್ತಿ ಸಿದ್ಧಪಡಿಸುವ ಕೆಲಸ ಬಹಳ ಸೂಕ್ಷ್ಮವಾಗಿರುವ ಕಾರಣ ಆಗ 25 ಮೂರ್ತಿಗಳನ್ನಷ್ಟೇ ಸಿದ್ಧಪಡಿಸಲಾಗಿತ್ತು. ಈ ವರ್ಷ 130 ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಈಗಾಗಲೇ 100 ಮೂರ್ತಿಗಳು ಸಿದ್ಧವಾಗಿವೆ’ ಎಂದು ಹೇಳಿದರು.

‘ಬೀದರ್, ಭಾಲ್ಕಿ, ಹುಮನಾಬಾದ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಭಕ್ತರು ತಮಗೆ ಇಷ್ಟವಾಗುವ ಮೂರ್ತಿಗಳ ಮುಂಗಡ ಬುಕ್ಕಿಂಗ್ ಮಾಡಿಸಿದ್ದಾರೆ. ಇನ್ನು ಅನೇಕರು ಗೋಶಾಲೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ’ ಎಂದು ತಿಳಿಸಿದರು.

‘ಗೋಶಾಲೆಯಲ್ಲಿ 2 ಇಂಚಿನಿಂದ 11 ಇಂಚಿನವರೆಗಿನ ಎತ್ತರದ ಮೂರ್ತಿಗಳು ಲಭ್ಯ ಇವೆ. ಹನ್ನೊಂದು ಇಂಚಿನ ಮೂರ್ತಿ ಬೆಲೆ ₹400, ಆರು ಇಂಚಿನ ಮೂರ್ತಿ ಬೆಲೆ ₹250, ನಾಲ್ಕು ಇಂಚಿನ ಮೂರ್ತಿ ಬೆಲೆ ₹100 ಹಾಗೂ ಎರಡು ಇಂಚಿನ ಮೂರ್ತಿ ಬೆಲೆ ₹50 ಇದೆ’ ಎಂದು ವಿವರಿಸಿದರು.

ಗೋಮಯ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ವರ್ಷ 5 ಸಾವಿರ ಮೂರ್ತಿ ತಯಾರಿಕೆ ಗುರಿ ಇಟ್ಟುಕೊಳ್ಳಲಾಗಿದೆ.
ಶಿವಕುಮಾರ ಹಿರೇಮಠ, ಗೋಶಾಲೆ ಸಂಚಾಲಕ

‘ಗೋಮಯ ಗಣೇಶ ಮೂರ್ತಿಗಳು ದೇಸಿ ಹಸುವಿನ ಸಗಣಿಯಿಂದ ತಯಾರಾಗುತ್ತವೆ. ಸಗಣಿ ಹಾಗೂ ಗುವರ್ ಗಮ್ ಮಿಶ್ರಣ ಮಾಡಿ, ನಂತರ ಮಿಶ್ರಣ ಅಚ್ಚಿನಲ್ಲಿ ಹಾಕಿ ಮೂರ್ತಿ ಸಿದ್ಧಪಡಿಸಲಾಗುತ್ತದೆ. ಅನಂತರ ಚೆನ್ನಾಗಿ ಒಣಗಿಸಿ, ಮೂರ್ತಿಗೆ ನೈಸರ್ಗಿಕ ಬಣ್ಣ ಬಳಿಯಲಾಗುತ್ತದೆ’ ಎಂದು ತಿಳಿಸಿದರು.

‘ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕವಾಗಿವೆ. ಗೋಮಯ ಮೂರ್ತಿಗಳು ಪರಿಸರ ಸ್ನೇಹಿಯಾಗಿವೆ. ಇವುಗಳಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ವಿಸರ್ಜನೆ ನಂತರ ಗೊಬ್ಬರವಾಗಿ ಮಣ್ಣನ್ನು ಸೇರಿಕೊಳ್ಳುತ್ತವೆ’ ಎಂದು ಹೇಳಿದರು.

‘ಗೋಶಾಲೆಯಲ್ಲಿ ಗೋಮಯ ವಿಭೂತಿ, ಧೂಪ, ದೀಪ ಮೊದಲಾದ ಉತ್ಪನ್ನಗಳನ್ನೂ ತಯಾರಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT