ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಬಳಗಿ | ದಾರಿ ಯಾವುದಯ್ಯ ಶಾಲೆಗೆ?

ಮಳೆಯಾದರೆ ಪಾಲರಿಗೆ ಆತಂಕ, ಸಿಬ್ಬಂದಿ, ವಿದ್ಯಾರ್ಥಿ ಸಂಕಷ್ಟ
Published : 22 ಸೆಪ್ಟೆಂಬರ್ 2024, 5:21 IST
Last Updated : 22 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments

ಬಂಬಳಗಿ(ಜನವಾಡ): ದಾರಿ ಯಾವುದಯ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ...

ಮಳೆಯಾದಾಗಲೆಲ್ಲ ಬೀದರ್ ತಾಲ್ಲೂಕಿನ ಬಂಬಳಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಉದ್ಭವಿಸುವ ಪ್ರಶ್ನೆ ಇದು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಶಾಲೆ ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಶಾಲೆ ವರೆಗೆ ಡಾಂಬರು ಅಥವಾ ಸಿ.ಸಿ. ರಸ್ತೆ ಇಲ್ಲ. ಮಳೆಯಾದಾಗ ಕೆಸರಿನ ಕೂಪವಾಗುವ ಕಚ್ಚಾ ರಸ್ತೆಯಲ್ಲಿ ಓಡಾಟಕ್ಕೆ ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಗ್ರಾಮದ ಹೊರವಲಯದಲ್ಲಿ ಒಂಬತ್ತು ವರ್ಷಗಳ ಹಿಂದೆ ವಸತಿ ಶಾಲೆ ನಿರ್ಮಿಸಲಾಗಿದೆ. ಆದರೆ, ಶಾಲೆ ವರೆಗೆ ರಸ್ತೆ ನಿರ್ಮಾಣ ಮಾಡಲಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಾಲಕರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಮನ್ನಾಎಖ್ಖೆಳ್ಳಿಯ ಪಾಲಕ ಮುಸ್ತಾಫಾ ಅಳಲು ತೋಡಿಕೊಳ್ಳುತ್ತಾರೆ.

ಮಳೆಯಾದಾಗ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಕಾರು, ದ್ವಿಚಕ್ರ ವಾಹನಗಳು ಕೆಸರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನಡೆದುಕೊಂಡು ಶಾಲೆಯನ್ನು ತಲುಪುವುದೂ ಹರಸಾಹಸವಾಗುತ್ತದೆ ಎಂದು ಹೇಳುತ್ತಾರೆ.

ಮಳೆಗಾಲದಲ್ಲಿ ಮಕ್ಕಳನ್ನು ವಸತಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು, ಮರಳಿ ತಂದು ಬಿಡಲು, ತುರ್ತು ಸಂದರ್ಭ, ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಗೆ ಕರೆದೊಯ್ಯಲು ಬಹಳ ತೊಂದರೆಯಾಗುತ್ತಿದೆ ಎಂದು ರೇಕುಳಗಿಯ ಪಾಲಕ ಮಹಮ್ಮದ್ ಖಾಜಾ ಖುತುಬೊದ್ದೀನ್ ತಿಳಿಸಿದರು.

ಶಾಲೆವರೆಗೆ ಅಲ್ಲಲ್ಲಿ ಕೆಲ ಮನೆಗಳು ಸಹ ನಿರ್ಮಾಣಗೊಂಡಿದೆ. ಆ ಮನೆಯವರೂ ಮಳೆಗಾಲದಲ್ಲಿ ಹೈರಾಣಾಗುವಂತಾಗಿದೆ ಎಂದು ಹೇಳುತ್ತಾರೆ.

ವಸತಿ ಶಾಲೆಯಲ್ಲಿ ವಿವಿಧ ಗ್ರಾಮಗಳ 300 ಮಕ್ಕಳು ಇದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಂಖ್ಯೆ 30 ಇದೆ. ರಸ್ತೆಗಾಗಿ ಅನೇಕ ಬಾರಿ ಸಂಬಂಧಪಟ್ಟವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ತಿಳಿಸುತ್ತಾರೆ.

ಈಗಲಾದರೂ ಸಂಬಂಧಪಟ್ಟವರು ಈ ಕಡೆ ಗಮನ ಹರಿಸಬೇಕು. ಶಾಲೆ ವರೆಗೆ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಇರುವ ಶಾಲೆ ಶಾಲೆಯಲ್ಲಿ 300 ವಿದ್ಯಾರ್ಥಿಗಳ ಅಧ್ಯಯನ ರಸ್ತೆ ಬೇಡಿಕೆಗೆ ಸಿಗದ ಸ್ಪಂದನೆ

ಬಂಬಳಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೆ ಕೆಕೆಆರ್‌ಡಿಬಿ ಅನುದಾನದಲ್ಲಿ ರಸ್ತೆ ನಿರ್ಮಿಸಿ ಕೊಡಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
ಅವಿನಾಶ ಎಂ.ಎ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT