ಕೋವಿಡ್ ಸಂದರ್ಭ ವ್ಯಾಪಾರ ಕುಸಿದಿತ್ತು. ಇದೀಗ ಮತ್ತೆ ಕುದುರಿದ್ದು ಬೇಡಿಕೆ ಹೆಚ್ಚಾಗಿದೆ. ಸಂಸ್ಕೃತಿ ಸಂಪ್ರದಾಯ ಪಾಲನೆಯಿಂದ ಮಾತ್ರ ಬಾಗಿನ ಸಂಸ್ಕೃತಿ ಉಳಿಯುತ್ತದೆ.
ವೆಂಕಟೇಶ್ ಮೊರ ತಯಾರಕ
ತವರು ಮನೆಯ ಬಾಗಿನ ಉಡುಗೊರೆ
ಗೌರಿ ಹಬ್ಬದಂದು ಗೌರಿ ತವರಿಗೆ ಬರುತ್ತಾಳೆ. ಮರುದಿನ ಗೌರಿಯನ್ನು ಕರೆದೊಯ್ಯಲು ಗಣೇಶ ಬರುತ್ತಾನೆ ಎಂಬ ಜನಪದರ ನಂಬಿಕೆ ಇದೆ.. ಮಣ್ಣು ಇಲ್ಲವೆ ಕಲಶದ ರೂಪದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಮುತ್ತೈದೆಯರು ಶೋಡಷೋಪಚಾರ ಪೂಜೆಗಳಿಂದ ಗೌರಿಯನ್ನು ಪೂಜಿಸುತ್ತಾರೆ. ವ್ರತದ ಅಂತ್ಯದಲ್ಲಿ ನೆರೆ ಹೊರೆಯವರಿಗೆ ಬಾಗಿನ ಅರ್ಪಿಸುತ್ತಾರೆ. ಬಾಗಿನದಲ್ಲಿ ಬಳಸುವ ಮೊರವನ್ನು ಲಕ್ಷ್ಮಿ ನಾರಾಯಣರ ಪ್ರತಿರೂಪದಂತೆ ನೋಡಲಾಗುತ್ತದೆ.
ಸಿಂಗಾರಗೊಂಡ ನಗರ
ಶ್ರೀಗೌರಿ ಪೂಜೆಯ ಬಳಿಕ ಗಜಾನನ ಆಗಮನವಾಗುತ್ತಿರುವ ಹಿನ್ನೆಲೆಯಲ್ಲಿ ಯಳಂದೂರು ಪಟ್ಟಣ ಸಿಂಗಾರಗೊಳ್ಳುತ್ತಿದೆ. ಬಾಳೆ ತಳಿರು ತೋರಣ ಹೂ ಮಾಲೆಗಳು ಮನೆ ಮನವನ್ನು ಅರಳಿಸುತ್ತವೆ. ಗೌರಿ ಹಬ್ಬಕ್ಕೆ ಬೇಕಾದ ಮೊರ ಮಡಿಕೆ ಮತ್ತು ಹೊಸ ವಸ್ತ್ರ ಖರೀದಿ ಭರಾಟೆ ಹೆಚ್ಚಾಗಿದೆ. ಪೂಜೆಗೆ ಎಡೆ ಇಡುವ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ. ಹಣ್ಣು ಸಿಹಿ ವ್ಯಾಪಾರ ಜೋರಾಗಿದೆ. ಗ್ರಾಮೀಣ ಭಾಗಗಳಲ್ಲಿ ಗೌರಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು ಸಿದ್ಧತೆ ಭರದಿಂದ ಸಾಗಿದೆ. ಬಾಳೆ ಮಾವಿನ ಚಿಗುರು ಮತ್ತು ಹೂ ಬೆಲೆ ಏರಿಕೆ ಕಂಡಿದೆ. ಮೊರ ₹ 100 ಮಡಕೆ ₹80 ರಿಂದ ₹ 150 ಹಾಗೂ ಪೊರಕೆ ₹ 80 ರಿಂದ ₹ 120 ದರ ಇದೆ. ಹೂ ಹಣ್ಣು ಸಿಹಿ ಮಾರಾಟಗಾರರು ಪ್ರತ್ಯೇಕ ಮಳಿಗೆ ತೆರೆದು ಮಾರಾಟಕ್ಕಿಳಿದಿದ್ದಾರೆ.