ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ದುಬಾರಿಯಾಯ್ತು ಬಾಡಿಗೆ ಮನೆ: ಮಧ್ಯಮ ವರ್ಗಕ್ಕೆ ಹೊರೆ

Published 21 ಜೂನ್ 2024, 8:01 IST
Last Updated 21 ಜೂನ್ 2024, 8:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಬಾಡಿಗೆ ದರವೂ ಗಗನಕ್ಕೇರಿದೆ.

ನಿರೀಕ್ಷೆಯಂತೆ ನಿರ್ಮಿಸಿರುವ ಮನೆಗಳು ಸಿಕ್ಕರೂ ಬಾಡಿಗೆ ದರ ಭರಿಸಲು ಆಗದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಮನೆ ಚೆನ್ನ. ಆದರೆ ಬಾಡಿಗೆ ದುಬಾರಿಯಾಯ್ತು ಎಂಬ ನಿರಾಶೆಯೇ ಬಹುತೇಕರಲ್ಲಿದೆ.

ಕೈಗಾರಿಕಾ ವಲಯ ಸ್ಥಾಪನೆ, ಉದ್ಯೋಗ ಅರಸಿ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಹೆಚ್ಚಿದ ವಲಸೆ, ಬದಲಾದ ಜನರ ಜೀವನಶೈಲಿಯ ಪರಿಣಾಮವೇ ಇದಕ್ಕೆ ಕಾರಣ ಎಂಬುದು ರಿಯಲ್‌ ಎಸ್ಟೇಟ್‌ ಕ್ಷೇತ್ರದವರ ಅಭಿಪ್ರಾಯ.

‘ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬಾಡಿಗೆ ಮನೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಮೂರ್ನಾಲ್ಕು ವರ್ಷಗಳಲ್ಲಿ ಮನೆಗಳ ಬಾಡಿಗೆ ದುಪ್ಪಟ್ಟಾಗಿದ್ದು, ನೆರೆಯ ಮೈಸೂರು ನಗರಕ್ಕೆ ಸರಿಸಮನಾಗಿದೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಬ್ರೋಕರ್ ಕೃಷ್ಣಮೂರ್ತಿ.

ದರ ಎಷ್ಟು: ಮೂರು ವರ್ಷಗಳ ಹಿಂದೆ ₹3 ರಿಂದ ₹4 ಸಾವಿರದ ಆಸುಪಾಸಿನಲ್ಲಿದ್ದ ಸಿಂಗಲ್‌ ಬೆಡ್‌ರೂಂ ಮನೆ ಬಾಡಿಗೆ ಪ್ರಸ್ತುತ ₹ 6 ರಿಂದ ₹ 7 ಸಾವಿರಕ್ಕೆ ಮುಟ್ಟಿದೆ. ₹ 6 ಸಾವಿರದ ಒಳಗೆ ಸಿಗುತ್ತಿದ್ದ ಡಬಲ್ ಬೆಡ್‌ರೂಂ ಮನೆಯ ಬಾಡಿಗೆ ₹ 9 ರಿಂದ ₹ 12 ಸಾವಿರಕ್ಕೆ ತಲುಪಿದೆ.

‘ಎಲ್ಲ ಬಡಾವಣೆಗಳಲ್ಲೂ ಒಂದೇ ರೀತಿಯ ಬಾಡಿಗೆ ದರವಿಲ್ಲ. ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆ, ವಾಣಿಜ್ಯ ಕಟ್ಟಡಗಳು ಇರುವ ಸುತ್ತಮುತ್ತಲಿನ ಪ್ರದೇಶ, ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಎರಡು ಕೊಠಡಿಗಳ ಸುಸಜ್ಜಿತ ಮನೆಯ ಬಾಡಿಗೆ ₹ 15 ರಿಂದ ₹ 18 ಸಾವಿರದವರೆಗೂ’ ಇದೆ ಎನ್ನುತ್ತಾರೆ ಕೃಷ್ಣಮೂರ್ತಿ.

ಡಿಮ್ಯಾಂಡ್‌ ಎಲ್ಲಿ: ಜೆಎಸ್‌ಎಸ್‌ ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಅಧಿಕಾರಿಗಳ ವಸತಿ ಗೃಹಗಳು ಇರುವ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಹಳೆ ಹೌಸಿಂಗ್ ಕಾಲೊನಿಯಲ್ಲಿ ಬಾಡಿಗೆ ಮನೆಗಳು ಸಿಗುವುದೇ ಕಷ್ಟಕರ. ಸಿಕ್ಕರೂ ಮಧ್ಯಮ ವರ್ಗದವರ ಕೈಗೆಟುಕುವಂತಿಲ್ಲ.

‘ಬುದ್ಧ ನಗರ, ಸಿದ್ಧಾರ್ಥ ನಗರ, ವಿವೇಕ ನಗರ, ಕರಿನಂಜನಪುರ, ಚೆನ್ನಪುರದ ಮೊಳೆ, ರಾಮಸಮುದ್ರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಹೊಸ ಮನೆಗಳ ನಿರ್ಮಾಣ ಭರದಿಂದ ಸಾಗುತ್ತಿದ್ದರೂ ಬೇಡಿಕೆ ನೀಗಿಸುವಷ್ಟಿಲ್ಲ. ಮನೆ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿಯೇ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಬ್ರೋಕರ್ ರವಿಕುಮಾರ್‌.

ಬೇಡಿಕೆ ಹೆಚ್ಚಾಗಲು ಕಾರಣ: ಚಾಮರಾಜನಗರದಿಂದ 10 ಕಿ.ಮೀ ದೂರದಲ್ಲಿರುವ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಈಚೆಗೆ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ವಲಸೆ ಬಂದು ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾಗಲು ಕಾರಣವಂತೆ. ಕೈಗಾರಿಕಾ ಪ್ರದೇಶದಲ್ಲಿ ದುಡಿಯುವ ಕಾರ್ಮಿಕರು ನಗರಗಳಲ್ಲಿ ವಾಸ್ತವ್ಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವುದು ಮನೆಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.

ನಗರದತ್ತ ಆಕರ್ಷಣೆ: ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಲು ಹಾಗೂ ಉದ್ಯೋಗ ಅರಸಿ ಹಳ್ಳಿಗಳನ್ನು ತೊರೆದು ಪಟ್ಟಣಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕೂಡ ನಗರದಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.

ಬೇಸಗೆಯಲ್ಲಿ ಬೇಡಿಕೆ ಹೆಚ್ಚು: ‘ಸಾಮಾನ್ಯವಾಗಿ ವರ್ಗಾವಣೆಯಾಗುವ ಹಾಗೂ ಶಾಲಾ ಕಾಲೇಜುಗಳಿಗೆ ದಾಖಲಾತಿ ಆರಂಭವಾಗುವ ಮಾರ್ಚ್‌ನಿಂದ ಮೇವರೆಗೂ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಜೂನ್‌ ಬಳಿಕ ಬೇಡಿಕೆಯ ಜತೆಗೆ ಬಾಡಿಗೆ ದರವೂ ಸ್ವಲ್ಪ ಇಳಿಕೆಯಾಗುತ್ತದೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ವೃತ್ತಿಯಲ್ಲಿರುವ ಬಸವರಾಜ ನಾಯಕ್‌.

ನಗರಕ್ಕೆ ಹೊಂದಿಕೊಂಡಿರುವ ವಲಯದಲ್ಲಿ ಸುಸಜ್ಜಿತ ಬಡಾವಣೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಹೊಣೆ ಹೊತ್ತಿರುವ ಚಾಮರಾಜನಗರ–ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ (ಚುಡಾ) ಇದುವರೆಗೂ ಸ್ವಂತವಾಗಿ ಒಂದೂ ಬಡಾವಣೆ ನಿರ್ಮಿಸಿಲ್ಲ. ‌

2 ವರ್ಷಗಳಲ್ಲಿ 6 ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಿದೆ. ಹೊಸ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸಮರ್ಪಕ ಮೂಲಸೌಕರ್ಯಗಳ ಕೊರತೆಯೂ ಹೊಸ ಮನೆಗಳ ನಿರ್ಮಾಣಕ್ಕೆ ತೊಡಕಾಗಿದೆ. ಜತೆಗೆ ಕೆಲವೆಡೆ ಕಪ್ಪುಮಣ್ಣು ಪ್ರದೇಶ ಹೆಚ್ಚಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಹೊಸದಾಗಿ ಚುಡಾ ಅಧ್ಯಕ್ಷನಾಗಿದ್ದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ನಗರ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಒತ್ತು ನೀಡುವೆ.
ಮಹಮ್ಮದ್ ಅಸ್ಗರ್, ಚುಡಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT