ಚಾಮರಾಜನಗರ: ‘ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆಯುವ, ಕೊಡುವ ವ್ಯವಸ್ಥೆ ಇಲ್ಲ. ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾತಿಗೆ ಹಾಗೂ ಸ್ಕ್ಯಾನಿಂಗ್‌ನಂತಹ ಕೆಲವು ಸೇವೆಗಳಿಗೆ ಕನಿಷ್ಠ ಶುಲ್ಕ ಪಡೆಯಲಾಗುತ್ತದೆ. ಅದು ಬಿಟ್ಟು, ಚಿಕಿತ್ಸೆ, ಔಷಧಿಗೆ ದುಡ್ಡು ಕೊಡಬೇಕಾಗಿಲ್ಲ. ವೈದ್ಯರು, ಸಿಬ್ಬಂದಿ ಕೇಳಿದರೆ ನೇರವಾಗಿ ನನಗೆ ಕರೆ ಮಾಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ...’

–ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರ ಸ್ಪಷ್ಟ ನುಡಿಗಳಿವು.

‘ಪ್ರಜಾವಾಣಿ’ಯು ಬುಧವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದಿಂದ ಕರೆ ಮಾಡಿದ್ದ ನವೀನ್ ಕುಮಾರ್ ಹಾಗೂ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಿಂದ ಕರೆ ಮಾಡಿದ್ದ ಮಹೇಶ್ ಕುಮಾರ್, ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಔಷಧಿಗೆ ಸಿಬ್ಬಂದಿ ಹಣ ಕೇಳುತ್ತಿದ್ದಾರೆ’ ಎಂದು ದೂರು ನೀಡಿದಾಗ ಡಾ.ವಿಶ್ವೇಶ್ವರಯ್ಯ ಈ ರೀತಿ ಉತ್ತರಿಸಿದರು.

‘ಬೇಡಿಕೆಗೆ ಅನುಗುಣವಾಗಿ ಔಷಧಿಯನ್ನು ಆರೋಗ್ಯ ಕೇಂದ್ರಗಳಿಗೆ ಪೂರೈಸಲಾಗುತ್ತಿದೆ. ಸಾರ್ವಜನಿಕರು ಒಂದು ರೂಪಾಯಿ ಕೊಡಬೇಕಾಗಿಲ್ಲ. ದೂರು ಬಂದ ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮ ವಹಿಸಲಾಗುವುದು’ ಎಂದು ಡಿಎಚ್‌ಒ ಹೇಳಿದರು.

ಕರೆಗಳ ಸುರಿಮಳೆ: ಒಂದು ಗಂಟೆ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. 35ಕ್ಕೂ ಹೆಚ್ಚು ಕರೆಗಳು ಬಂದಿದ್ದು, 25 ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಯಿತು. ಒಂದು ಗಂಟೆ ಅವಧಿ ಮುಕ್ತಾಯದ ಬಳಿಕವೂ ಕರೆಗಳು ಬಂದವು. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಕರೆ ಮಾಡಿದ್ದ ಓದುಗರು ಆರೋಗ್ಯ ಸೇವೆ ಪಡೆಯಲು ತಾವು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಡಾ.ವಿಶ್ವೇಶ್ವರಯ್ಯ ಗಮನ ಸೆಳೆದರು.

ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಗ್ರಾಮೀಣ ಭಾಗಗಳಲ್ಲಿ ಸಂಜೆ 5ರ ನಂತರ ವೈದ್ಯರು, ಸಿಬ್ಬಂದಿ ಇಲ್ಲದಿರುವುದು, ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತೆ ಕೊರತೆ ಇರುವುದರ ಬಗ್ಗೆ ಪತ್ರಿಕೆಯ ಓದುಗರು ಡಿಎಚ್‌ಒಗೆ ದೂರು ನೀಡಿದರು.

24 ಗಂಟೆಯೂ ಸೇವೆ ಲಭ್ಯವಿರಲಿ: ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಿಂದ ಕರೆ ಮಾಡಿದ್ದ ಮಹೇಶ್ ಕುಮಾರ್ ಹಾಗೂ ಮಹೇಶ್, ‘ಬೆಟ್ಟದ ಆಸ್ಪತ್ರೆಯಲ್ಲಿ ಸಮರ್ಪಕ ಸೇವೆ ಸಿಗುತ್ತಿಲ್ಲ. ಸಂಜೆ 4ರ ನಂತರ ಚಿಕಿತ್ಸೆ ನೀಡುವುದಿಲ್ಲ. ಕೇಳಿದರೆ, ಮೊದಲೇ ಬರಬೇಕಿತ್ತು ಎಂದು ಹೇಳುತ್ತಾರೆ. ಲಕ್ಷಾಂತರ ಜನರು ಭೇಟಿ ನೀಡುವ ಸ್ಥಳದಲ್ಲಿ ಆರೋಗ್ಯ ಸೇವೆ ಸಿಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ವಿಶ್ವೇಶ್ವರಯ್ಯ, ‘ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಎರಡು ಎಕರೆ ಜಾಗವನ್ನೂ ನೀಡಿದೆ. ಇದಲ್ಲದೇ ಹೆಚ್ಚುವರಿಯಾಗಿ ಇನ್ನೊಬ್ಬ ವೈದ್ಯರನ್ನು ಅಲ್ಲಿಗೆ ನೇಮಿಸಲಾಗಿದೆ. ದಿನದ 24 ಗಂಟೆಯೂ ಸೇವೆ ಒದಗಿಸಲು ಕ್ರಮ ವಹಿಸಲಾಗುವುದು’ ಎಂದರು.

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದಿಂದ ಕರೆ ಮಾಡಿದ್ದ ನವೀನ್ ಕುಮಾರ್ ಹಾಗೂ ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರಿನ ಕುಮಾರ್, ಸಂಜೆ 5ರ ಬಳಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದನ್ನು ಗಮನಕ್ಕೆ ತಂದರು.

‘ವೈದ್ಯಾಧಿಕಾರಿಗಳು ಆರೋಗ್ಯ ಕೇಂದ್ರ ಇರುವ ವ್ಯಾಪ್ತಿಯಲ್ಲೇ ವಾಸ್ತವ್ಯ ಹೂಡಬೇಕು ಎಂಬ ನಿಯಮ ಇದೆ. ಕಡ್ಡಾಯವಾಗಿ ಅವರು ಉಳಿದುಕೊಳ್ಳಬೇಕು. ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಲ್ಲೇ ಉಳಿದುಕೊಳ್ಳಲು ಸೂಚಿಸುತ್ತೇನೆ’ ಎಂದು ಡಿಎಚ್‌ಒ ಹೇಳಿದರು.

ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಿ: ‘ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಕೆಲವು ಸೇವೆಗಳು ಸಿಗುತ್ತಿಲ್ಲ. ಆಸ್ಪತ್ರೆ ಆವರಣ ಹಾಗೂ ಒಳಾಂಗಣ ಸ್ವಚ್ಛವಾಗಿಲ್ಲ. ಶೌಚಾಲಯಗಳಿಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿ ಇದೆ’ ಎಂದು ಸಿದ್ದಯ್ಯನಪುರದ ಪ್ರವೀಣ್ ಕುಮಾರ್, ಕೊಳ್ಳೇಗಾಲದ ದಿಲೀಪ್ ಸಿದ್ದಪ್ಪಾಜಿ ಹಾಗೂ ಜಯಶಂಕರ್ ದೂರಿದರು.

ಡಿಎಚ್‌ಒ ಪ್ರತಿಕ್ರಿಯಿಸಿ, ‘ಕೊಳ್ಳೇಗಾಲದಲ್ಲಿ ಪ್ರತಿ ದಿನ 500ರಿಂದ 700 ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಹಾಗಾಗಿ, ಜನಸಂದಣಿ ಹೆಚ್ಚಾಗುತ್ತಿದೆ. ತಿಂಗಳ ಒಳಗಾಗಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಉದ್ಘಾಟನೆಯಾಗಲಿದೆ. ಆ ಬಳಿಕ ಈಗಿನ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಲಿದೆ. ಸ್ವಚ್ಛತೆಗೆ ಗಮನ ಹರಿಸುವಂತೆ ಆಸ್ಪತ್ರೆ ಆಡಳಿತಾಧಿಕಾರಿಗೆ ಸೂಚಿಸಲಾಗುವುದು’ ಎಂದರು.

‘ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗಬೇಕು. ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರವನ್ನು ಆರಂಭಿಸಬೇಕು ಎಂದು ದಿಲೀಪ್ ಸಿದ್ದಪ್ಪಾಜಿ ಮನವಿ ಮಾಡಿದರು. ಸಂಜೆ 6 ಗಂಟೆ ನಂತರ ತುರ್ತು ಸೇವೆ ಸಿಗುವುದಿಲ್ಲ’ ಎಂದು ಜಯಶಂಕರ್ ದೂರಿದರು.

ಇದಕ್ಕೆ ಸ್ಪಂದಿಸಿದ ವಿಶ್ವೇಶ್ವರಯ್ಯ, ‘ಆಸ್ಪತ್ರೆಯ ಮೊದಲ ಮಹಡಿಯಲ್ಲಿ 10 ಹಾಸಿಗೆಗಳ ಐಸಿಯು ಸ್ಥಾಪಿಸಲಾಗುತ್ತಿದೆ. ತುರ್ತು ಚಿಕಿತ್ಸೆಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು. ಸದ್ಯ ಅಲ್ಲಿ ರಕ್ತ ಸಂಗ್ರಹ ಘಟಕ ಇದೆ. ರಕ್ತ ನಿಧಿ ಕೇಂದ್ರ ಸ್ಥಾಪನೆ ತಕ್ಷಣಕ್ಕೆ ಕಷ್ಟ. ಆದರೆ, ಪ್ರತಿ ತಿಂಗಳಿಗೊಮ್ಮೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು’ ಎಂದರು.

ತಿ.ನರಸೀಪುರದಿಂದ ಕರೆ ಮಾಡಿದ್ದ ಪ್ರಕಾಶ್ ಅವರು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದಲ್ಲಿನಲ್ಲಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.

ತುರ್ತು ಚಿಕಿತ್ಸೆ ಸಿಗುತ್ತಿಲ್ಲ: ಸಂತೇಮರಹಳ್ಳಿಯ ಸುಭಾಷ್ ಕರೆ ಮಾಡಿ, ‘ಸಂತೇಮರಹಳ್ಳಿ ಆಸ್ಪತ್ರೆ ಆವರಣದಲ್ಲಿ ಗಿಡಗಂಟಿಗಳು ಬೆಳೆದಿವೆ. ತುರ್ತು ಚಿಕಿತ್ಸೆ ಸಿಗುತ್ತಿಲ್ಲ’ ಎಂದರು.

‘ಕಳೆ ಗಿಡ ತೆರವುಗೊಳಿಸಲು ಕ್ರಮವಹಿಸಲಾಗುವುದು. ಆಸ್ಪತ್ರೆಯಲ್ಲಿ 10 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ತರ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಎಚ್‌ಒ ಹೇಳಿದರು.

ತಜ್ಞ ವೈದ್ಯರ ನೇಮಿಸಿ: ಯಳಂದೂರಿನ ಮಹದೇವನಾಯಕ, ‘ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ನೇಮಕ ಮಾಡಬೇಕು’ ಎಂದರು.

‘ಮೂಳೆ ಕೀಲು ತಜ್ಞ ಸೇರಿದಂತೆ ನಾಲ್ವರು ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಆಸ್ಪತ್ರೆಯನ್ನು 100 ಹಾಸಿಗೆಗಳಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಸರ್ಕಾರದ ಹಂತದಲ್ಲಿದೆ. 2007ರಲ್ಲಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ₹15.35 ಕೋಟಿ ಮಂಜೂರಾಗಿದೆ. ಹೆಚ್ಚುವರಿಯಾಗಿ ₹30 ಕೋಟಿ ಅಗತ್ಯವಿದ್ದು, ಹಣಕಾಸು ಇಲಾಖೆ ಅನುಮತಿ ನೀಡಬೇಕಿದೆ’ ಎಂದು ಡಾ.ವಿಶ್ವೇಶ್ವರಯ್ಯ ಹೇಳಿದರು.

ಇತರೆ ದೂರುಗಳು:ಯಳಂದೂರು ತಾಲ್ಲೂಕಿನ ಮಾಂಬಳ್ಳಿಯ ಎನ್.ಬಸವರಾಜು , ‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯರನ್ನು ತಾಲ್ಲೂಕು ವೈದ್ಯಾಧಿಕಾರಿಯಾಗಿ ನೇಮಿಸಲಾಗಿದೆ. ನಮ್ಮಲ್ಲಿ ಲ್ಯಾಬ್ ಟೆಕ್ನೀಶಿಯನ್, ಫಾರ್ಮಾಸಿಸ್ಟ್ ಇಲ್ಲ. ತಕ್ಷಣವೇ ನೇಮಕ ಮಾಡಿ’ ಎಂದು ಒತ್ತಾಯಿಸಿದರು.

ಕೊಳ್ಳೇಗಾಲದ ಶಿವನಸಮುದ್ರದ ಮಾದೇಗೌಡ, ‘ನಮ್ಮದು ಮಲೇರಿಯಾ ಪೀಡಿತ ಪ್ರದೇಶ. ಇಲ್ಲಿ ಆರೋಗ್ಯ ಕಾರ್ಯಕರ್ತರಿಲ್ಲ. ಸ್ವಚ್ಛತೆಯೂ ಸಮರ್ಪಕವಾಗಿಲ್ಲ’ ಎಂದರು.

ಚಾಮರಾಜನಗರ ತಾಲ್ಲೂಕಿನ ಹಳೇಪುರದ ಮಹೇಶ್, ‘ಗ್ರಾಮದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿವೆ. ಸೊಳ್ಳೆ ಕಾಟ ತಡೆಗೆ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

ಗುಂಡ್ಲುಪೇಟೆಯ ಅಬ್ದುಲ್ ಮಲಿಕ್, ‘ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಿಗುತ್ತಿಲ್ಲ. ಸಣ್ಣ ಪುಟ್ಟ ಕಾಯಿಲೆಗೂ ಮೈಸೂರು, ಚಾಮರಾಜನಗರಕ್ಕೆ ಕಳುಹಿಸುತ್ತಿದ್ದಾರೆ’ ಎಂದರು.

ಡಾ.ವಿಶ್ವೇಶ್ವರಯ್ಯ ಪ್ರತಿಕ್ರಿಯಿಸಿ, ‘ವಾರದ ಒಳಗೆ ಗುಂಡ್ಲುಪೇಟೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಆಸ್ಪತ್ರೆಯಲ್ಲಿ ಮೂರು ಐಸಿಯು ಹಾಸಿಗೆಗಳನ್ನು ಸ್ಥಾಪಿಸಲಾಗಿದೆ’ ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ಅಂಕಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರಾಜು, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಇದ್ದರು.

ಸಲಕರಣೆಗಳನ್ನು ಕೊಡಿಸಿ

‘ನನ್ನ 11 ವರ್ಷದ ಮಗನಿಗೆ ಬೆನ್ನಿನಲ್ಲಿ ಗಂಟು ಕಂಡು ಬಂದು ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗಲೂ ವೈದ್ಯರಿಗೆ ತೋರಿಸಲು ತಾಲ್ಲೂಕು ಆಸ್ಪತ್ರೆಗೆ ಹೋಗಬೇಕಾಗಿದೆ. ಅಲ್ಲಿ ಚಿಕಿತ್ಸೆ ನೀಡುವಾಗ ಕೆಲವು ಸಲಕರಣೆಗಳು ಇಲ್ಲ ಎಂದು ಬರೆದು ಕೊಡುತ್ತಾರೆ. ಹೊರಗಡೆಯಿಂದ ಖರೀದಿ ಮಾಡುವಷ್ಟು ಶಕ್ತಿ ನಮಗಿಲ್ಲ. ದಯವಿಟ್ಟು ವ್ಯವಸ್ಥೆ ಮಾಡಿಕೊಡಿ’ ಎಂದು ಯಳಂದೂರಿನ ಲಕ್ಷ್ಮಿ ಮನವಿ ಮಾಡಿದರು.

‘ಮಗುವಿನ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ನಿಮ್ಮನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿದ ನಮ್ಮ ವೈದ್ಯರನ್ನು ಭೇಟಿ ಮಾಡಿ, ಎಲ್ಲ ವ್ಯವಸ್ಥೆ ಮಾಡಿಸುತ್ತಾರೆ’ ಎಂದು ವಿಶ್ವೇಶ್ವರಯ್ಯ ಭರವಸೆ ನೀಡಿದರು.

ಆದಿವಾಸಿಗಳಿಗೆ ಆರೋಗ್ಯ ಸೇವೆ ಕಲ್ಪಿಸಿ

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಿಂದ ಕರೆ ಮಾಡಿದ ಸೋಲಿಗ ಮುಖಂಡ ಬೊಮ್ಮಯ್ಯ, ‘ಸೋಲಿಗ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಸಿಕಲ್‌ಸೆಲ್ ಅನೀಮಿಯಾ ಕಾಯಿಲೆಯೂ ಹಲವರನ್ನು ಬಾಧಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಬೆಟ್ಟದಲ್ಲಿ ಆಸ್ಪತ್ರೆ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

‘ಬೆಟ್ಟದಲ್ಲಿರುವ ಉಪ ಆರೋಗ್ಯ ಕೇಂದ್ರವನ್ನು ಬಲಪಡಿಸಲಾಗುವುದು. ಸಿಕಲ್‌ಸೆಲ್ ಅನೀಮಿಯಾ ಪತ್ತೆ ಹಾಗೂ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ವಾರಕ್ಕೊಮ್ಮೆ ಬೆಟ್ಟಕ್ಕೆ ವೈದ್ಯರನ್ನು ಕಳುಹಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು’ ಎಂದು ಡಿಎಚ್‌ಒ ಭರವಸೆ ನೀಡಿದರು.

ರೇಡಿಯಾಲಜಿಸ್ಟ್ ನೇಮಕ ಮಾಡಿ...

‘ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲ. ಹೊರಗಡೆ ಸ್ಕ್ಯಾನಿಂಗ್ ಮಾಡಿಸುವಂತೆ ಹೇಳುತ್ತಾರೆ. ರೇಡಿಯಾಲಜಿಸ್ಟ್ ನೇಮಿಸಬೇಕು. ಕೊಳ್ಳೇಗಾಲ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಸಿಜೇರಿಯನ್ ಹೆರಿಗೆ ಮಾಡಿಸುವುದಿಲ್ಲ. ಚಾಮರಾಜನಗರಕ್ಕೆ ಕಳುಹಿಸುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ’ ಎಂದು ಕೊಳ್ಳೇಗಾಲದ ಹರೀಶ್ ಕುಮಾರ್ ಹೇಳಿದರು.

ಡಾ.ವಿಶ್ವೇಶ್ವರಯ್ಯ ಪ್ರತಿಕ್ರಿಯಿಸಿ, ‘ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇದೆ. ರೇಡಿಯಾಲಜಿಸ್ಟ್ ನೇಮಕಾತಿ ಆಗಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಆದರೆ, ಅಲ್ಲಿನ ವೈದ್ಯರಿಗೇ ಸ್ಕ್ಯಾನಿಂಗ್ ಮಾಡುವ ತರಬೇತಿ ಕೊಡಲಾಗಿದೆ. ಶೀಘ್ರ ಸ್ಕ್ಯಾನಿಂಗ್ ಶುರು ಮಾಡುತ್ತೇವೆ. ರಾತ್ರಿ ಹೊತ್ತು ಸಿಜೇರಿಯನ್ ಮಾಡದಿರುವ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು.

ಕೌದಳ್ಳಿಯಲ್ಲಿ ಟ್ರಾಮಾ ಕೇಂದ್ರ

ಹನೂರು ತಾಲ್ಲೂಕಿನ ಕೌದಳ್ಳಿಯ ಗಣೇಶ್, ಅಲ್ಲಿನ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡದಿರುವ, ವೈದ್ಯರು ರಾತ್ರಿ ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿದರು. ಕರ್ತವ್ಯದಲ್ಲಿರುವ ವೈದ್ಯರ ದೂರವಾಣಿ ಸಂಖ್ಯೆಯನ್ನು ಫಲಕದಲ್ಲಿ ಹಾಕುವಂತೆಯೂ ಮನವಿ ಮಾಡಿದರು.

ಡಿಎಚ್‌ಒ ಮಾತನಾಡಿ, ‘ಕೌದಳ್ಳಿ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಜನರು ಸಂಚಾರಿಸುತ್ತಾರೆ. ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ತುರ್ತು ಚಿಕಿತ್ಸೆ ನೀಡಲು ಕೌದಳ್ಳಿಯಲ್ಲಿ ಆರು ಹಾಸಿಗೆಗಳ ಟ್ರಾಮಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದರು.

ಖಾಲಿ ಹುದ್ದೆ ನೇಮಕಕ್ಕೆ ಆಗ್ರಹ

ಕೋವಿಡ್ ಸಂದರ್ಭದಲ್ಲಿ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಭರಣಿ ಫೌಂಡೇಷನ್ ಸಹಯೋಗದಲ್ಲಿ ಜನರಲ್ ಡ್ಯೂಟ್ ಅಸಿಸ್ಟೆಂಟ್ ತರಬೇತಿ ಪಡೆದು ಕೋವಿಡ್ ಸೇನಾನಿಗಳಾಗಿ ಕಾರ್ಯನಿರ್ವಹಿಸಿ ಈಗ ಕೆಲಸ ಕಳೆದು ಕೊಂಡಿರುವ ಅಭ್ಯರ್ಥಿಗಳಾದ ಸುಷ್ಮಾ, ಗಂಗಾಮಣಿ, ಹರ್ಷ, ಚಿನ್ನಸ್ವಾಮಿ, ಶಿವಕುಮಾರಸ್ವಾಮಿ ಕರೆ ಮಾಡಿ, ‘ಖಾಲಿ ಹುದ್ದೆಗಳಿಗೆ ನಮ್ಮನ್ನು ನೇಮಕ ಮಾಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ವಿಶ್ವೇಶ್ವರಯ್ಯ, ‘ನೇಮಕಾತಿ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕು. ಕರ್ತವ್ಯ ನಿರ್ವಹಿಸುವವರ ಎಲ್ಲರ ಪಟ್ಟಿಯೂ ನಮ್ಮ ಬಳಿ ಇದೆ. ಜಿಲ್ಲಾಧಿಕಾರಿ ಜತೆ ಮಾತನಾಡುತ್ತೇನೆ. ಯಾವುದೇ ಹುದ್ದೆಗೆ ನೇಮಕಾತಿ ಮಾಡಲು ಅವಕಾಶ ಸಿಕ್ಕಿದರೆ ಆದ್ಯತೆ ಮೇರೆಗೆ ನಿಮ್ಮನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.