ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಿದ್ಧ

ಶಿಡ್ಲಘಟ್ಟದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ
Published : 5 ಅಕ್ಟೋಬರ್ 2024, 14:51 IST
Last Updated : 5 ಅಕ್ಟೋಬರ್ 2024, 14:51 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ‘ಸೂಕ್ತ ಜಾಗ ಗುರುತಿಸಿಕೊಟ್ಟಲ್ಲಿ ಈಗಿರುವ 50 ಹಾಸಿಗೆಗಳ ಈ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಮೂಲ ಸವಲತ್ತು ಕಲ್ಪಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, 12 ಹಾಸಿಗೆಗಳ ಐಸೋಲೇಷನ್ ವಾರ್ಡ್, ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆ ಹಾಗೂ ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಹಾಗೂ ಡಯಾಲಿಸಿಸ್ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನಡೆದ ಭೂಮಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ರಾಜ್ಯದ ಜನತೆಗೆ ಉತ್ತಮ ಆರೋಗ್ಯದ ಸವಲತ್ತುಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಮೂಲ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಅನುದಾನ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಈ ಹಿಂದೆ ರಾಜ್ಯದಲ್ಲಿ 170 ಡಯಾಲಿಸಿಸ್ ಕೇಂದ್ರಗಳಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 52 ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿದ್ದು ಇದೀಗ ಒಟ್ಟು 212 ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸುತ್ತಿವೆ’ ಎಂದು ವಿವರಿಸಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ‘ಹೆಚ್ಚಿನ ಸವಲತ್ತುಗಳುಳ್ಳ ಪ್ರಯೋಗಾಲಯ ಮತ್ತು ಡಯಾಲಿಸಿಸ್ ಕೇಂದ್ರ ನಿರ್ಮಾಣಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇತ್ತು. 8 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಮಾಡಿದ್ದೇವೆ. ಶೀಘ್ರದಲ್ಲೆ ನಿರ್ಮಾಣ ಕಾರ್ಯ ಮುಗಿದು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದೇವೆ’ ಎಂದರು.

ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಬಶೆಟ್ಟಹಳ್ಳಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿದೆ. ಮೇಲೂರಿನಲ್ಲಿ ₹3 ಕೋಟಿ ವೆಚ್ಚದಲ್ಲಿ ಹೊಸ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದು ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳ ರೋಗಿಗಳನ್ನು ಭೇಟಿ ಮಾಡಿ ಚಿಕಿತ್ಸೆ, ಆರೈಕೆ, ಸ್ವಚ್ಛತೆ ಕುರಿತು ಸಚಿವರು ವಿಚಾರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಡಿಎಚ್‌ಒ ಎಸ್.ಎಸ್.ಮಹೇಶ್ ಕುಮಾರ್, ಟಿಎಚ್‌ಒ ಡಾ.ವೆಂಕಟೇಶ್‌ಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಹೇಮಾವತಿ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ, ಅಪ್ಪೇಗೌಡನಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ, ಬಂಕ್ ಮುನಿಯಪ್ಪ, ತಾದೂರು ರಘು, ಎ. ನಾಗರಾಜ್, ಟಿ.ಕೆ.ನಟರಾಜ್, ಮುನೀಂದ್ರ, ಯಾಸ್ಮೀನ್‌ತಾಜ್, ಡಿ.ವಿ.ವೆಂಕಟೇಶ್ ಹಾಜರಿದ್ದರು.

ಗ್ರಾ.ಪಂ ಕಟ್ಟಡ ಉದ್ಘಾಟಿಸಲು ಮನವಿ

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡದ ಉದ್ಘಾಟನೆ ಬೇಗ ನೆರವೇರಿಸುವಂತೆ ಹಂಡಿಗನಾಳ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯರ ತಂಡ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಗ್ರಾ.ಪಂ ಕಾರ್ಯನಿರ್ವಹಿಸುತ್ತಿದ್ದು ಕಟ್ಟಡ ತುಂಬಾ ಕಿರಿದಾಗಿದೆ. ಸಹಕಾರ ಸಂಘದವರು ಕಟ್ಟಡ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಗ್ರಾ.ಪಂ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣವಾಗಿ ವರ್ಷ ಕಳೆದರೂ ಈವರೆಗೂ ಉದ್ಘಾಟನೆಯಾಗಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ತ್ವರಿತವಾಗಿ ದಿನಾಂಕ ನಿಗದಿಪಡಿಸಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಬೇಕು ಎಂದು ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ

ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮತ್ತು ಪುಟ್ಟು ಆಂಜಿನಪ್ಪ ಇಬ್ಬರನ್ನೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಒಂದು ಮಾಡಿದ್ದರು. ಈಚೆಗೆ ಎಲ್ಲಾ ಕಾಂಗ್ರೆಸ್ ಕಾರ್ಯಕ್ರಮಗಳಲ್ಲೂ ಇಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರು. ಮೇಲೆ ತಣ್ಣಗೆ ಕಂಡರೂ ಒಳಗೆ ಜ್ವಾಲಾಮುಖಿಯಂತೆ ಕಾರ್ಯಕರ್ತರ ನಡುವೆ ಹೊಯ್ದಾಟ ಇದ್ದವು. ಅದು ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬಹಿರಂಗವಾಯಿತು. ಇಬ್ಬರ ಮುಖಂಡರ ನಡುವೆ ಮಾತಿನ ಚಕಮಕಿ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಬೈಯ್ದಾಟ ಸಚಿವ ಡಾ.ಎಂ.ಸಿ.ಸುಧಾಕರ್ ಮುಂದೆಯೇ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT