ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು–ಮೂಡಿಗೆರೆ ಭೂಮಂಜೂರಾತಿ: ಬಗೆದಷ್ಟು ಆಳ; ಅರಣ್ಯ ಭೂಮಿಯಲ್ಲೂ ಅಕ್ರಮ ಮಂಜೂರಾತಿ

Published : 24 ಸೆಪ್ಟೆಂಬರ್ 2024, 20:15 IST
Last Updated : 24 ಸೆಪ್ಟೆಂಬರ್ 2024, 20:15 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸಂರಕ್ಷಿತ ಅರಣ್ಯ, ಪರಿಭಾವಿತ ಅರಣ್ಯ, ಅರಣ್ಯ ಇಲಾಖೆ ಸೆಕ್ಷನ್ 4 ಜಾರಿಗೊಳಿಸಿರುವ ಜಾಗದಲ್ಲೂ ಮಂಜೂರಾತಿ ನೀಡಿರುವುದನ್ನು ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಿದ ವಿಶೇಷ ತಂಡ ಬಯಲಿಗೆ ಎಳೆದಿದೆ.

ಎರಡೂ ತಾಲ್ಲೂಕುಗಳಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರರುಗಳ ತಂಡವನ್ನು ಸರ್ಕಾರ ರಚನೆ ಮಾಡಿತ್ತು. ತನಿಖೆ ನಡೆಸಿರುವ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅರಣ್ಯ ಜಾಗವನ್ನೂ ರೈತರಿಗೆ ಮಂಜೂರು ಮಾಡಿರುವುದನ್ನು ತನಿಖೆಯಲ್ಲಿ ಉಲ್ಲೇಖಿಸಿದೆ.

ಕಡೂರು ತಾಲ್ಲೂಕಿನ ಅಣ್ಣೇಗೆರೆ, ಉಡುಗೆರೆ, ಎಮ್ಮೆದೊಡ್ಡಿ, ಕಂಚುಗಲ್, ಕುಂಕಾನಾಡು, ಕೆ.ಬಸವನಹಳ್ಳಿ, ಕೆ.ಬಿದರೆ, ಗುಂಡುಸಾಗರ, ಮಲ್ಲಾಘಟ್ಟ, ಮುಗಳೀಕಟ್ಟೆ, ಯಗಟಿ, ಸಾಣೇಹಳ್ಳಿಯಲ್ಲಿ ಅರಣ್ಯ ಭೂಮಿ ಇದೆ. ಇದೇ ಸರ್ವೆ ನಂಬರ್‌ಗಳಲ್ಲೂ ಸಾಗುವಳಿದಾರರಿಗೆ ಮಂಜೂರಾತಿ ನೀಡಲಾಗಿದೆ. ಮೂಡಿಗೆರೆ ತಾಲ್ಲೂಕಿನ ಮರಸಣಿಗೆ, ಅಂಗಡಿ, ಅಣಜೂರು, ಜಿ.ಹೊಸಹಳ್ಳಿ, ದೇವವೃಂದ, ಮೇಕನಗದ್ದೆ, ಹೆಗ್ಗರವಳ್ಳಿ, ಹೊಸಕೆರೆ, ಗುತ್ತಿ, ಬಾಳೂರು, ಮಾಳಿಗನಾಡು ಸರ್ವೆ ನಂಬರ್‌ಗಳಲ್ಲೂ ಸಾಗುವಳಿ ಸಕ್ರಮಗೊಳಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅರಣ್ಯ ಇಲಾಖೆ ನೀಡಿರುವ ವರದಿ ತಾಳೆ ಮಾಡಿದಾಗ ಆಕಾರಬಂದ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಪ್ರದೇಶ ಅರಣ್ಯ ಎಂದು ಗುರುತಿರುವ 185 ಪ್ರಕರಣ, ಆಕಾರಬಂದ್‌ನಂತೆ ಪೂರ್ಣ ವಿಸ್ತೀರ್ಣ ಅರಣ್ಯ ಎಂದು ಗುರುತಿಸಿರುವ 50 ಪ್ರಕರಣ, ಅರ್ಜಿ ವಹಿಯನ್ನು ತಿದ್ದುಪಡಿ ಮಾಡಿರುವ 9 ಪ್ರಕರಣಗಳನ್ನು ಗುರುತಿಸಲಾಗಿದೆ. ಕೆಲವು ಸರ್ವೆ ನಂಬರ್‌ಗಳನ್ನು ದಿಶಾಂಕ್ ತಂತ್ರಾಂಶದಲ್ಲಿ ಪರಿಶೀಲಿಸಿ ಉಪಗ್ರಹ ನಕ್ಷೆಯಲ್ಲಿ ನೋಡಿದಾಗ ಅರಣ್ಯ ಜಾಗದಲ್ಲೂ ಸಾಗುವಳಿ ಮಾಡುತ್ತಿರುವುದು ಗೊತ್ತಾಗಿದೆ ಎಂದು ವರದಿ ತಿಳಿಸಿದೆ.

‘ಅನೇಕ ಸರ್ವೆ ನಂಬರ್‌ಗಳಲ್ಲಿ ಆಕಾರಬಂದ್ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣ ಅರಣ್ಯ ಎಂದು ಗುರುತಿಸಿರುವುದು ಕಂಡು ಬಂದಿದೆ. ಕೆಲವು ಪ್ರಕರಣಗಳಲ್ಲಿ ಅರಣ್ಯ ಇಲಾಖೆ 50 ವರ್ಷಗಳ ಹಿಂದಿನ ಅಧಿಸೂಚನೆ ತೋರಿಸುತ್ತಿದ್ದು, ಇಷ್ಟು ವರ್ಷಗಳ ಕಾಲ ಕಂದಾಯ ದಾಖಲೆಯಲ್ಲಿ ಇಂಡೀಕರಣ ಮಾಡಿಸಲು ಅರಣ್ಯ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಜಿಜ್ಞಾಸೆ ಮೂಡಿಸುತ್ತದೆ’ ಎಂದು ವರದಿಯಲ್ಲಿ ತನಿಖಾ ತಂಡ ಉಲ್ಲೇಖಿಸಿದೆ.

‘ಅರಣ್ಯ ಇಲಾಖೆಯೂ ವಿಫಲ’

ಅರಣ್ಯ ಇಲಾಖೆ ತನ್ನ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಲು ವಿಫಲವಾಗಿದೆ ಎಂಬುದನ್ನೂ ತನಿಖಾ ತಂಡ ತಿಳಿಸಿದೆ.

ಅರಣ್ಯ ಜಾಗ ಎಂದು ಅಧಿಸೂಚನೆಯಾದ ಬಳಿಕ ಇಲಾಖೆ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳಲು, ರಕ್ಷಣೆ ಮಾಡಿಕೊಳ್ಳಲು, ಒತ್ತುವರಿ ತೆರವುಗೊಳಿಸಲು ಪ್ರಯತ್ನಿಸದೆ ಇರುವುದು ಕಂಡು ಬಂದಿದೆ.

‘ಅನಧಿಕೃತ ಮಂಜೂರಾತಿ ಪ್ರಕರಣಗಳ ಮಂಜೂರಾತಿಯನ್ನು ರದ್ದುಪಡಿಸಿ, ವಾಪಸ್ ಪಡೆದುಕೊಳ್ಳಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಅರಣ್ಯ ಇಲಾಖೆ ಮೇಲ್ಮನವಿ ಸಲ್ಲಿಸಿರುವುದೇ ಕಂಡುಬಂದಿಲ್ಲ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನಿಸಬೇಕಾಗಿದೆ’ ಎಂದು ವರದಿಯಲ್ಲಿ ತನಿಖಾ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT