ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ | ತೇವಾಂಶ ಕೊರತೆ: ಬಾಡುತ್ತಿದೆ ಶೇಂಗಾ ಬೆಳೆ

ಅಬ್ಬರಿಸಿ ಮಾಯವಾದ ಮಳೆರಾಯ; ಮಳೆಗಾಗಿ ಆಕಾಶ ನೋಡುತ್ತಿರುವ ರೈತ
ವಿ.ವೀರಣ್ಣ ಧರ್ಮಪುರ
Published : 19 ಸೆಪ್ಟೆಂಬರ್ 2024, 5:51 IST
Last Updated : 19 ಸೆಪ್ಟೆಂಬರ್ 2024, 5:51 IST
ಫಾಲೋ ಮಾಡಿ
Comments

ಧರ್ಮಪುರ: ಮಳೆ ಕೊರತೆಯಿಂದಾಗಿ ತೇವಾಂಶ ಮಾಯವಾಗಿದ್ದು ಶೇಂಗಾ ಬೆಳೆ ಬಾಡುತ್ತಿದೆ. ಶೇಂಗಾ ಬಿತ್ತನೆ ಮಾಡಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಆತಂಕಗೊಂಡಿದ್ದಾರೆ.

ಹಿರಿಯೂರು ತಾಲ್ಲೂಕಿನಲ್ಲಿ 37,915 ಹೆಕ್ಟೇರ್ ಶೇಂಗಾ ಬಿತ್ತನೆಯ ಪ್ರದೇಶವಿದ್ದು, ಈ ಪೈಕಿ 36,906 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇ 97ರಷ್ಟು ಭೂಮಿಯಲ್ಲಿ ಶೇಂಗಾ, ಸಾವೆ, ಅಕ್ಕಡಿ ಬೆಳೆ ಮತ್ತು ಸಿರಿ ಧಾನ್ಯಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಜೂನ್ ತಿಂಗಳಿನಲ್ಲಿ ಉತ್ತಮ ಮಳೆಯಾದ ಕಾರಣ ಶೇ 65ರಷ್ಟು ಬಿತ್ತನೆ ಕಾರ್ಯವಾಗಿತ್ತು. ಜುಲೈ ತಿಂಗಳಿನಲ್ಲಿ ಶೇ 32ರಷ್ಟು ಶೇಂಗಾ ಬಿತ್ತನೆ ಮಾಡಿದ್ದರು.

ಈಗ ಕಾಯಿಕಟ್ಟುವ ಹಂತದಲ್ಲಿ ಬೆಳೆಗೆ ತೇವಾಂಶದ ಕೊರತೆಯುಂಟಾಗಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ. ಅಂದಾಜು 11,000 ಹೆಕ್ಟೇರ್‌ನಲ್ಲಿ ಶೇಂಗಾಗೆ ಬೆಳೆ ಹಾನಿಯ ಭೀತಿ ಎದುರಾಗಿದೆ. 

ಅರಳೀಕೆರೆ, ಹರಿಯಬ್ಬೆ, ಸೂಗೂರು, ಹಲಗಲದ್ದಿ, ಮದ್ದಿಹಳ್ಳಿ, ಕಣಜನಹಳ್ಳಿ, ಚಿಲ್ಲಹಳ್ಳಿ, ಧರ್ಮಪುರ, ರಂಗೇನಹಳ್ಳಿ ಭಾಗಗಳಲ್ಲಿ ಶೇಂಗಾ ಗಿಡಕ್ಕೆ ಸುರುಳಿ ಪೂಚಿ (ಬೆಂಕಿ) ರೋಗ ಕಾಣಿಸಿಕೊಂಡಿದ್ದು, ಗಿಡಗಳಲ್ಲಿನ ಎಲೆಗಳು ಸಂಪೂರ್ಣವಾಗಿ ಒಣಗಿ ಉದುರುತ್ತಿವೆ. ಹೊಸಕೆರೆ, ಬೆಟ್ಟಗೊಂಡನಹಳ್ಳಿ, ಶ್ರವಣಗೆರೆ, ಸಕ್ಕರ, ಇಕ್ಕನೂರು, ಹೂವಿನಹೊಳೆ, ಈಶ್ವರಗೆರೆ, ದೇವರಕೊಟ್ಟ, ಕಂಬತ್ತನಹಳ್ಳಿ ಗ್ರಾಮಗಳಲ್ಲಿ ಬೂದಿ ರೋಗ ಕಾಣಿಸಿಕೊಂಡಿದ್ದು, ಕಾಯಿ ಕಪ್ಪಾಗಿ ಭೂಮಿಯಲ್ಲಿಯೇ ಕೊಳೆಯುತ್ತಿದೆ.

‘ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಗಿಡದಲ್ಲಿ ಮಳೆಯ ಕೊರತೆಯಿಂದ ಗಿಡದಲ್ಲಿ ಹೂಡು ಇಳಿಯದೇ ಗಿಡಗಳು ಒಣಗುತ್ತಿವೆ. ಎಡೆಕುಂಟೆ ಕಾರ್ಯಮುಗಿಸಿ, ಕಳೆ ತೆಗೆಸುವವರೆಗೆ ಮಳೆಯ ಕೊರತೆ ಇರಲಿಲ್ಲ. ಇದರಿಂದ ಶೇಂಗಾ ಗಿಡಗಳು ಸಮೃದ್ಧವಾಗಿ ಬೆಳೆದಿದ್ದವು. ಆದರೆ, ನೀರುಗಾಯಿ ಆಗುವ ಹಂತದಲ್ಲಿ ಮಳೆ ಅತ್ಯವಶ್ಯಕವಾಗಿ ಬೇಕಾಗಿದೆ’ ಎಂದು ರೈತ ಗಿರೀಶ್ ತಿಳಿಸಿದ್ದಾರೆ.

ಬಿತ್ತನೆ ಮಾಡುವ ಸಂದರ್ಭದಲ್ಲಿ 1 ಕ್ವಿಂಟಲ್ ಶೇಂಗಾಕ್ಕೆ ₹6,900 ದರವಿತ್ತು. ಅದರೂ ಖರೀದಿಸಿ ಬಿತ್ತನೆ ಮಾಡಿದ್ದರು. ಈ ಬಾರಿ ಆರಂಭದಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ಅಬ್ಬರಿಸಿದ ಮಳೆರಾಯ ಈಗ ಸುಮ್ಮನಾಗಿದ್ದಾನೆ.

ಶೇಂಗಾ ಸುರುಳಿ ಪೂಚಿ (ಬೆಂಕಿ ) ರೋಗಕ್ಕೆ ತುತ್ತಾಗಿರುವುದು
ಶೇಂಗಾ ಸುರುಳಿ ಪೂಚಿ (ಬೆಂಕಿ ) ರೋಗಕ್ಕೆ ತುತ್ತಾಗಿರುವುದು

‘ಎಡೆಕುಂಟೆ, ಕಳೆ ತೆಗೆಸಲು ಕೂಲಿ ಎಲ್ಲ ಸೇರಿ ಅಪಾರ ಹಣ ಖರ್ಚಾಗಿದೆ. ಈಗ ಮಳೆ ಇಲ್ಲವಾಗಿದ್ದು ಬೆಳೆ ಬರುವುದೋ ಇಲ್ಲವೋ ಎಂಬ ಖಾತ್ರಿ ಇಲ್ಲ’ ಎಂದು ಪಿ.ಡಿ.ಕೋಟೆಯ ರೈತ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶೇಂಗಾಕ್ಕೆ ಕೊಳೆ (ಬೂದಿ) ರೋಗ ಕಾಣಿಸಿಕೊಂಡಿದ್ದು ಕಾಯಿ ಕಪ್ಪಾಗಿರುವುದು
ಶೇಂಗಾಕ್ಕೆ ಕೊಳೆ (ಬೂದಿ) ರೋಗ ಕಾಣಿಸಿಕೊಂಡಿದ್ದು ಕಾಯಿ ಕಪ್ಪಾಗಿರುವುದು

‘ಖುಷ್ಕಿ ಭೂಮಿಯಲ್ಲಿ ಈ ಭಾರಿ ರೈತರು ಹೆಚ್ಚಿನದಾಗಿ ಸಾವೆ ಸೇರಿದಂತೆ ಸಿರಿಧಾನ್ಯಗಳು ಹಾಗೂ ಶೇಂಗಾ ಬಿತ್ತನೆ ಮಾಡಿದ್ದರು. ಕೆಲವು ಕಡೆ ಸಾವೆ ಈಗಾಗಲೇ ಕಟಾವಾಗಿದೆ. ಶೇಂಗಾ ಮತ್ತು ಇತರ ಸಿರಿಧಾನ್ಯಗಳು ಒಣಗುತ್ತಿದ್ದು, ವಾರದಲ್ಲಿ ಮಳೆ ಬಾರದೇ ಇದ್ದರೆ ಶೇಂಗಾ ಸಂಪೂರ್ಣವಾಗಿ ಒಣಗಲಿದೆ’ ಎಂದು ಕೃಷಿ ಅಧಿಕಾರಿ ಕಿರಣ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT