ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತ: ಒಬ್ಬ ಕಾರ್ಮಿಕ ಸಾವು

ಮಣ್ಣಿನಡಿ ಸಿಲುಕಿದ್ದ ಇನ್ನೊಬ್ಬ ಕಾರ್ಮಿಕನ ದೇಹ ಹೊರತೆಗೆದ ಎನ್‌ಡಿಆರ್‌ಎಫ್‌
Published 3 ಜುಲೈ 2024, 15:19 IST
Last Updated 3 ಜುಲೈ 2024, 15:19 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಬುಧವಾರ ಮಧ್ಯಾಹ್ನ ಕುಸಿದು, ಕಾರ್ಮಿಕರಿಬ್ಬರು ಅದರಡಿ ಸಿಲುಕಿದ್ದರು.‌ ಅವರಲ್ಲಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ.

ಇನ್ನೊಬ್ಬನ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಏಳು ಗಂಟೆಗಳ ಪ್ರಯತ್ನದ ಬಳಿಕ ಇನ್ನೊಬ್ಬ ಕಾರ್ಮಿಕನ ದೇಹವನ್ನು ಮಣ್ಣಿನಡಿಯಿಂದ ರಾತ್ರಿ 7.30ರ ಸುಮಾರಿಗೆ ಹೊರತೆಗೆಯಲಾಯಿತು.

ಬಿಹಾರದ ರೋಹ್ಟಾಸ್‌ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾದ ರಾಜ್ ಕುಮಾರ್ (18) ರಕ್ಷಣೆಗೊಳಗಾದ ಕಾರ್ಮಿಕ. ಆತನ ಜೊತೆ ಕೆಲಸ ಮಾಡುತ್ತಿದ್ದ ಚಂದನ್‌ ಕುಮಾರ್ (30) ದೇಹ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಎದೆ ಬಡಿತ ಕ್ಷೀಣಿಸಿತ್ತು. ದೇಹವನ್ನು ಮಣ್ಣಿನಿಂದ ಹೊರ ತೆಗೆದ ತಕ್ಷಣವೇ ತಜ್ಞ ವೈದ್ಯರ ತಂಡ ಎದೆಬಡಿತ ಮರುಸ್ಥಾಪನೆಗೆ ಪ್ರಯತ್ನಿಸಿದೆ.

ಕಟ್ಟಡದ ತಳಪಾಯ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ಗಳು ಮಣ್ಣಿನ ರಾಶಿಯಲ್ಲಿ ಸಿಲುಕಿರುವುದರಿಂದ ಚಂದನ್‌ ದೇಹವನ್ನು ಹೊರ ತೆಗೆಯುವುದು ರಕ್ಷಣಾ ಸಿಬ್ಬಂದಿ ಪಾಲಿಗೆ ಸವಾಲಾಗಿ ಪರಿಣಮಿಸಿತ್ತು. ಮೃತದೇಹವಿರುವ ಸ್ಥಳಕ್ಕೆ ಆಮ್ಲಜನಕ ಪೂರೈಸಲಾಗಿತ್ತು. ತಜ್ಞ ವೈದ್ಯರ ತಂಡ ತುರ್ತು ಜೀವರಕ್ಷಕ ಸಾಮಗ್ರಿಗಳನ್ನು ಒಳಗೊಂಡ ಎರಡು ಆಂಬುಲೆನ್ಸ್‌ಗಳೊಂದಿಗೆ ಸ್ಥಳದಲ್ಲೇ ಬೀಡು ಬಿಟ್ಟಿದ್ದವು.

ರಕ್ಷಿಸಲಾದ ರಾಮ್‌ಕುಮಾರ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಫಾದರ್‌ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದನ್‌ ದೇಹಸ್ಥಿತಿ ಬಗ್ಗೆ ವೈದ್ಯರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಚಂದನ್‌ ಕುಮಾರ್‌ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT