ಕಂಬ ಏರಿ ಮೊಸರು ಕುಡಿಕೆ ಒಡೆಯುವ ಸಾಹಸ. ಸುಬ್ರಹ್ಮಣ್ಯದ ನೋಟ
ಜಾರುವ ಕಂಬ
ಅಟ್ಟಿಮಡಿಕೆ ವೈಭವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಸುಬ್ರಹ್ಮಣ್ಯ ಭಾಗದಲ್ಲಿ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಸಂಭ್ರಮ ಗರಿಗೆದರಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ 19 ವರ್ಷಗಳಿಂದ ನಡೆಯುತ್ತಿರುವ ಉತ್ಸವದಲ್ಲಿ 30 ಅಡಿ ಎತ್ತರದ ಜಾರುವ ಕಂಬ ಏರಿ ಕುಡಿಕೆ ಒಡೆಯುವ ಸ್ಪರ್ಧೆ ಅಟ್ಟಿ ಮಡಕೆ ಒಡೆಯುವ ಸ್ಪರ್ಧೆ ಮಹಿಳೆಯರಿಗೆ ಜಾರುವ ಅಡ್ಡಕಂಬದಲ್ಲಿ ನಡೆಯುವ ಸ್ಪರ್ಧೆ ಕಣ್ಣಿಗೆ ಆನಂದ.
ಕಳೆದುಹೋಗಿದೆ ಹಳೆಯ ಸಂಭ್ರಮ
ಹಿಂದೆ ಶ್ರೀಕೃಷ್ಣ ಜಯಂತಿಯ ಐಭೋಗ ಬೇರೆಯೇ ರೀತಿಯದಾಗಿತ್ತು. ಸಿಪ್ಪೆ ಸುಲಿದು ಎಣ್ಣೆ ಹಚ್ಚಿ ಜಾರುವಂತೆ ಮಾಡಿದ ಕಂಗಿಗೆ ಹತ್ತಿ ಮೊಸರು ಕುಡಿಕೆ ಒಡೆಯಬೇಕಿತ್ತು. ಅದು ಭಾರಿ ಸಾಹಸದ ಕಾರ್ಯ. ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡುತ್ತಿದ್ದರು. ಭಾರ ಎತ್ತುವ ಸ್ಪರ್ಧೆ ಗುಂಡುಕಲ್ಲು ಎತ್ತುವ ಸವಾಲು ಲಗೋರಿ ತೆಂಗಿನಕಾಯಿ ಒಡೆಯುವುದು ಇತ್ಯಾದಿ ಗಮ್ಮತ್ತು ಇತ್ತು ಎಂದು ಮೆಲುಕು ಹಾಕಿದರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ. ಆಧುನಿಕ ಬದುಕಿನಲ್ಲಿ ಕೆಲವು ಸಂಪ್ರದಾಯಗಳು ಇಲ್ಲದಾಗುತ್ತಿವೆ. ಮಂಗಳೂರು ಭಾಗದಲ್ಲಿ ದೇವಸ್ಥಾನಗಳ ಆಶ್ರಯದಲ್ಲಿ ಕೃಷ್ಣಾಷ್ಟಮಿ ನಡೆಯುತ್ತಿದ್ದರೂ ಅದಕ್ಕೆ ಸಾರ್ವಜನಿಕ ಸ್ಪರ್ಶ ಇದೆ. ಕೃಷ್ಣವೇಷ ಸ್ಪರ್ಧೆಗಳು ಈಗ ಎಲ್ಲ ಕಡೆ ನಡೆಯುತ್ತಿವೆ. ಮಾಲ್‌ಗಳಲ್ಲೂ ನಡೆಯುತ್ತಿದೆ ಎಂದು ಅವರು ಹೇಳಿದರು.