ಜಲಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಜಗಳೂರು ಉತ್ಸವ
ಸತತ ಬರಗಾಲದ ಹೊಡೆತದಿಂದ ಜರ್ಝರಿತವಾಗಿದ್ದ ಜಗಳೂರು ತಾಲ್ಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಯು ಜಲಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ‘ಸಿರಿಗೆರೆ ಶ್ರೀಗಳ ಮುನ್ನೋಟ ಎಲ್ಲ ಸರ್ಕಾರಗಳು ಹಾಗೂ ನನ್ನನ್ನು ಒಳಗೊಂಡಂತೆ ಹಿಂದಿನ ಎಲ್ಲ ಶಾಸಕರ ಶ್ರಮ ಮತ್ತು ಸಹಕಾರ ನೀರಾವರಿ ಇಲಾಖೆ ಅಧಿಕಾರಿಗಳ ಕಠಿಣ ಪರಿಶ್ರಮದಿಂದ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಂಡಿದೆ. ರಾಷ್ಟ್ರೀಯ ಹೆದ್ದಾರಿ-50ರ ಕೆಳಗೆ 4 ಮೀಟರ್ ಆಳದಲ್ಲಿ ಸುರಂಗ ಕೊರೆದು ಪೈಪ್ ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು ವಾರದೊಳಗೆ ತೊರೆಸಾಲು ಪ್ರದೇಶದ 8 ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಪೈಲ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು. ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಗುರುಸಿದ್ದಾಪುರ ರಂಗಯ್ಯನದುರ್ಗ ಮಾಗಡಿ ಮತ್ತು ಅಗಸನಹಳ್ಳಿ ಕೆರೆಗಳಿಗೆ ಸಂಪರ್ಕ ವಿಳಂಬವಾಗಿದ್ದು ಕೆಲವೇ ದಿನಗಳಲ್ಲಿ ಉಳಿದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಅರ್ಧ ಶತಮಾನದಲ್ಲಿ ಮೊದಲ ಬಾರಿ ಕೆರೆಗಳು ತುಂಬಿದ್ದರಿಂದ ಜನರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ‘ಜಗಳೂರು ಉತ್ಸವ’ ನಡೆಸುವ ಮೂಲಕ ಜಲಸಂಭ್ರಮವನ್ನು ಆಚರಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.