ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹ 32 ಲಕ್ಷ ಮೌಲ್ಯದ ಮದ್ಯ ವಶ

ಗೋವಾದಿಂದ ಅಕ್ರಮ ಸಂಗ್ರಹ: ಕಲಬೆರಕೆ ಮದ್ಯ ತಯಾರಿಕೆ ತಂಡ ವಶ
Published 10 ಜುಲೈ 2024, 16:12 IST
Last Updated 10 ಜುಲೈ 2024, 16:12 IST
ಅಕ್ಷರ ಗಾತ್ರ

ಕಲಘಟಗಿ: ಗೋದಾಮುವೊಂದರಲ್ಲಿ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡು ಅದಕ್ಕೆ ಸಾರಾಯಿ ಸೇರಿದಂತೆ ಇತರೆ ಕೆಮಿಕಲ್‌ ಸೇರಿಸಿ ಮಾರಾಟಕ್ಕೆ ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ₹ 32 ಲಕ್ಷ ಮೌಲ್ಯದ ಮದ್ಯ ವಶಕ್ಕೆ ‍ಪಡೆದು ನಾಲ್ವರನ್ನು ಬಂಧಿಸಿದ್ದಾರೆ.

ಸಿಪಿಐ ಶ್ರೀಶೈಲ್ ಕೌಜಲಗಿ ನೇತೃತ್ವ ತಂಡ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ- ಕಾರವಾರ ರಾಷ್ಟ್ರಿಯ ಹೆದ್ದಾರಿಯ ಕಲಘಟಗಿ ತಾಲ್ಲೂಕಿನ ಮಿಶ್ರೀಕೋಟಿ ಕ್ರಾಸ್ ಬಳಿಯ ಪಾಟೀಲ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಈ ಅಕ್ರಮ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗೋವಾದಿಂದ ಆಕ್ರಮವಾಗಿ ಏಡ್ರಿಯಲ್ ಕಂಪನಿಯ ವಿಸ್ಕಿ, ವೋಡ್ಕಾ ಬಾಕ್ಸ್ ತಂದು ಅಕ್ರಮವಾಗಿ ಇರಿಸಿ ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಸಾರಾಯಿ ತೆಗೆದು ಅದಕ್ಕೆ ಎಸೆನ್ಸ್ ದ್ರವ್ಯ ಹಾಗೂ ಬಣ್ಣ ಬೇರ್ಪಡಿಸಿ ಕರ್ನಾಟಕದ ಪ್ರತಿಷ್ಠಿತ ಇಂಪಿರಿಯಲ್ ಬ್ಲೂ ಕಂಪನಿಯ ಖಾಲಿ ಬಾಟಲಿಯಲ್ಲಿ ಸರಾಯಿ ತುಂಬಿ, ನಕಲಿ ಕ್ಯಾಪ್, ಶೀಲ್ ಮಾಡಿ ಕಂಪನಿಯ ಸ್ಟಿಕರ್ ಅಂಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದ ಸರಾಯಿ ಬಾಟಲಿಗಳ ವಿವರ:

ಏಡ್ರಿಯಲ್ ಕಂಪನಿಯ ವಿಸ್ಕಿ 182 ಬಾಕ್ಸ್, ಓಡ್ಕಾ 10 ಬಾಕ್ಸ್, ಇಂಪಿರಿಯಲ್ ಬ್ಲೂ 52, ಹಾಗೂ 170 ಲೀಟರ್‌ ಎರಡು ದೊಡ್ಡ ಡ್ರಮ್‌ನಲ್ಲಿ ಗೋವಾ ವಿಸ್ಕಿ, ಎಸೆನ್ಸ್ ದ್ರವ್ಯ, ಕಲರ್‌ ಮಿಶ್ರಣ ಮಾಡುವ ದ್ರವ, ಎರಡು ಮೊಬೈಲ್, 1 ದ್ವಿಚಕ್ರ ವಾಹನ, 1200 ರಷ್ಟು ಗ್ಲಾಸಿನ ಖಾಲಿ ಬಾಟಲಿ, 29 ಲೇಬಲಿಂಗ್‌ ಬಾಟಲಿ, ಕ್ಯಾಪಿಂಗ್, ಶಿಲ್ ಅಂಟಿಸುವ ಬಂಡಲ್‌, 180 ಎಂ ಎಲ್ ಸೈಜಿನ ಇಂಪಿರಿಯಲ್ ಬ್ಲೂ ಕಂಪನಿಯ ಖಾಲಿ ಬಾಟಲಿಗಳ ಸಮೇತ ₹ 32 ಲಕ್ಷ ಮೌಲ್ಯದ ಅಕ್ರಮ ಸರಾಯಿ ವಶಕ್ಕೆ ಪಡೆದು ಸಿಪಿಐ ಶ್ರೀಶೈಲ್ ಕೌಜಲಗಿ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

ಬಂಧಿತ ಆರೋಪಿಗಳಾದ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿನಾಯಕ ಮನೋಹರ ಜಿತೂರಿ, ಹಳೆ ಹುಬ್ಬಳ್ಳಿ ಆನಂದ ನಗರದ ವಿನಾಯಕ ಅಶೋಕ ಸಿದ್ಧಲಿಂಗ, ಈಶ್ವರ ಅರ್ಜುನ ಪವಾರ, ನೇಕಾರ ನಗರದ ರೋಹಿತ ರಾಜೇಶ ಅರಸಿದ್ದಿ ಎಂಬವರನ್ನು ಬಂಧಿಸಲಾಗಿದೆ.

ಬಾಟಲಿಯಲ್ಲಿ ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಜನರ ಅರೋಗ್ಯಕ್ಕೆ ಅಪಾಯವಾಗುವ ನಿಟ್ಟಿನಲ್ಲಿ ಸಾರಾಯಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಬಂಧಿತ ಆರೋಪಿಗಳಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಎಸ್.ಎಂ.ನಾಗರಾಜ, ಪಿಸ್‌ಐ ಬಸವರಾಜ ಯದ್ದಲಗುಡ್ಡ, ಆರ್.ಎಂ. ಶಂಕಿಮದಾಸರ, ಲೊಕೇಶ ಬೆಂಡಿಕಾಯಿ, ಶ್ರೀಧರ್ ಗುಗ್ಗರಿ, ಮಹಾಂತೇಶ ನಾನಾಗೌಡ, ಗೋಪಾಲ್ ಪಿರಗಿ, ಈಶ್ವರ ಡೊಣ್ಣಿ, ಮಹಮ್ಮದ್ ಹುಸೇನ್, ಸಂಜು ಜಾಲಗಾರ, ಪ್ರವೀಣ ಅಂಗಡಿ, ಮಹೇಶ ಧರೆಪ್ಪನವರ, ಅಭಿನಂದನ್ ಮಾದಪ್ಪನವರ, ಸಂದೀಪ್ ನಾಯಕ ಇದ್ದರು.

-ತನಿಖಾ ತಂಡಕ್ಕೆ ಬಹುಮಾನ

ಮದ್ಯ ಅಕ್ರಮ ಮಾಫಿಯಾದ ಜಾಲವನ್ನು ಬೇಧಿಸಿರುವ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೂಡ ಹರ್ಷ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಖಚಿತ ಮಾಹಿತಿ ಮೇರೆಗೆ ನಮ್ಮ ಪೊಲೀಸರು ಕಾರ್ಯಚರಣೆ ನಡೆಸಿ ಮದ್ಯವನ್ನು ಅಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಿ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ತಿಳಿಸಿದರು. ಕಡಿಮೆ ದರದಲ್ಲಿ ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಲ್ಲದೇ ಜನರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಈ ದುಷ್ಕೃತ್ಯವನ್ನು ಪೊಲೀಸರು ತನಿಖೆ ನಡೆಸಿದ್ದು ಈ ಕುರಿತು ನಾಲ್ವರನ್ನು ಬಂಧಿಸಲಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಈ ತರಹದ ಸಾರಾಯಿ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಅವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT