ಧಾರವಾಡ: ಸಂಭ್ರಮ ತರಬೇಕಿದ್ದ ಶ್ರಾವಣದ ಮಳೆ ಆತಂಕ ತಂದೊಡ್ಡಿದೆ. ಮಲೆನಾಡು ಮತ್ತು ಬಯಲುಸೀಮೆಯ ಸೆರಗಿನಲ್ಲಿ ಮೈಚಾಚಿ ಮಲಗಿರುವ ಧಾರಾನಗರಿ ಕಳೆದೊಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತತ್ತರಿಸಿದೆ. ಬೇಂದ್ರೆ ಅವರು ಬರೆದ ‘ಶ್ರಾವಣಾ ಬಂತು ಕಾಡಿಗೆ, ನಾಡಿಗೆ, ಬೀಡಿಗೆ..ಕುಣಿದ್ಹಾಂಗ ರಾವಣಾ, ಕುಣಿದಾವ ಗಾಳಿ, ಭೈರವನೆ ರೂಪ ತಾಳಿ’ ಎನ್ನುವ ಸಾಲುಗಳಿಗೆ ಸಾಕ್ಷಿ ಎನ್ನುವಂತಿದೆ ಪ್ರಸ್ತುತ ಸ್ಥಿತಿ.

ಧಾರವಾಡ ಜಿಲ್ಲೆಯಲ್ಲಿ ನದಿಗಳಿಲ್ಲದಿದ್ದರೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ಕೆರೆಗಳು ತುಂಬಿ, ಕೋಡಿ ಹರಿಯುತ್ತಿವೆ. ನಗರದಲ್ಲಿ ವಸತಿ ವಿನ್ಯಾಸಗಳು, ಅಪಾರ್ಟಮೆಂಟ್ಗಳ ಕೆಳಮಹಡಿ, ವಾಣಿಜ್ಯ ಸಂಕೀರ್ಣಗಳ ಪಾರ್ಕಿಂಗ್ ಜಾಗೆ, ತಗ್ಗು ಪ್ರದೇಶಗಳಲ್ಲಿನ ಮನೆಗಳು ನೀರು ತುಂಬಿಕೊಂಡು ಕೆರೆಗಳಾಗಿ ಮಾರ್ಪಟ್ಟಿವೆ. ವಾಣಿಜ್ಯ ಸಂಕೀರ್ಣಗಳ ನೆಲ ಮಹಡಿಯಲ್ಲಿ ಶೇಖರಗೊಂಡಿರುವ ನೀರನ್ನು ಪಂಪ್ ಸಹಾಯದಿಂದ ಹೊರ ಹಾಕುತ್ತಿರುವ ಹಲವು ದೃಶ್ಯಗಳು ಕಂಡು ಬಂದವು.

ಗುರುವಾರ ಬೆಳಿಗ್ಗೆ ಒಂದಿಷ್ಟು ಬಿಡುವು ನೀಡಿದ್ದ ಮಳೆರಾಯ ಸ್ವಲ್ಪ ಸಮಾಧಾನ ಮೂಡಿಸಿದ್ದ. ಆದರೆ ಕೆಲ ಹೊತ್ತಿನ ನಂತರ ಮತ್ತೆ ಮುನಿಸಿಕೊಂಡಂತೆ ಜೋರಾಗಿ ಸುರಿದು ಮತ್ತೇ ಆತಂಕದ ವಾತಾವರಣ ಸೃಷ್ಟಿಸಿದ. ಧಾರವಾಡದ ಸಿಬಿ ನಗರ, ಬಸವನಗರ, ಭಾವಿಕಟ್ಟಿ ಪ್ಲಾಟ್, ಬಶೀರ್ ನಗರ ಸೇರಿದಂತೆ ಬಹುತೇಕ ಬಡಾವಣೆಗಳ ಜನ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮಳೆಯಿಂದ ಬಾಧಿತ ಜನರಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತ ಶಕ್ತಿ ಮೀರಿ ಯತ್ನಿಸುತ್ತಿದ್ದು, ನಗರದ ಮೂರು ಕಡೆ ಪರಿಹಾರ ಕೇಂದ್ರಗಳನ್ನು ತೆರೆದಿದೆ. ತೊಂದರೆಗೀಡಾದ ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆ, ಕಾಲೇಜುಗಳಿಗೆ ನೀಡಿದ್ದ ಎರಡು ದಿನಗಳ ರಜೆಯನ್ನು ಮತ್ತೇ ಮೂರು ದಿನ ವಿಸ್ತರಿಸಲಾಗಿದೆ. ಸತತ ಸುರಿಯುತ್ತಿರುವ ಮಳೆಯಿಂದಾಗಿ ಜನ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ.

ಸತತ ಸುರಿದ ಮಳೆಯಿಂದಾಗಿ ನಗರದ ಚಿತ್ರಣವೇ ಬದಲಾಗಿದೆ. ರಸ್ತೆಗಳೆಲ್ಲಾ ನೀರಿನಿಂದ ಆವೃತವಾಗಿದ್ದು, ರಸ್ತೆಗಳ ತುಂಬೆಲ್ಲಾ ಗುಂಡಿಗಳು ನಿರ್ಮಾಣಗೊಂಡಿವೆ. ವಿಜಯಾನಂದ ನಗರ, ತಪೋವನ ನಗರ, ವನಸಿರಿನಗರದ ಮುಖ್ಯ ರಸ್ತೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ರಸ್ತೆಗಳಿಗೆ ಹಾಕಿದ್ದ ಡಾಂಬರು ಸಂಪೂರ್ಣ ಕಿತ್ತುಕೊಂಡು ಹೋಗಿದೆ. ಹೀಗಾಗಿ ನಗರದಲ್ಲಿ ಸಂಚಾರ ಸಂಕಷ್ಟವಾಗಿ ಪರಿಣಮಿಸಿದೆ.

ಶುಕ್ರವಾರ (ಇಂದು) ಆಚರಿಸುವ ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕೂಡಾ ನಗರದಲ್ಲಿ ಕಂಡು ಬರಲಿಲ್ಲ. ‘ರಾಜ್ಯದ ಬಹುತೇಕ ಕಡೆ ಮಳೆಯಿಂದಾಗಿ ಜನ ತೊಂದರೆ ಪಡುತ್ತಿದ್ದರೆ ಹಬ್ಬ ಮಾಡಲು ಹೇಗೆ ಮನಸ್ಸು ಬರುತ್ತದೆ. ಆದರೆ ಸಂಪ್ರದಾಯ ಬಿಡುವ ಹಾಗಿಲ್ಲ. ಹೀಗಾಗಿ ಸರಳವಾಗಿ ಹಬ್ಬ ಆಚರಿಸುತ್ತೇವೆ’ ಎಂದು ಮಳೆಯಲ್ಲಿಯೇ ಹೂ ಖರೀದಿಸುತ್ತಿದ್ದ ಜ್ಯೋತಿ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.