ಸರಳ ವಿಷಯವೊಂದನ್ನು ಸೃಜನಶೀಲ ನಿರ್ದೇಶಕನೊಬ್ಬ ವಿಭಿನ್ನ ಆಲೋಚನಾ ಕ್ರಮದ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸಬಹುದು ಎನ್ನುವುದಕ್ಕೆ ಕಳೆದ ವಾರ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಪ್ರದರ್ಶನಗೊಂಡ ‘ಪಾರ್ಶ್ವ ಸಂಗೀತ’ ನಾಟಕ ಸಾಕ್ಷಿಯಾಯಿತು.

ಅದು ಅತ್ಯಂತ ಸರಳ ಕತೆ. ಒಂದು ಮಧ್ಯಮ ವರ್ಗದಲ್ಲಿ ನಡೆಯಬಹುದಾದ ಎಲ್ಲ ಸಂಗತಿಗಳು ಅಲ್ಲಿ ಘಟಿಸುತ್ತವೆ. ಶ್ರೀನಿವಾಸ ವೈದ್ಯರ ಬೇರೆ, ಬೇರೆ ಲೇಖನಗಳನ್ನು ಶಿಸ್ತುಬದ್ಧವಾಗಿ ಸಂಯೋಜಿಸಿ ರಂಗರೂಪಕ್ಕೆ ತರಲಾಗಿದೆ. ರಂಗಾಯಣ ರೆಪರ್ಟರಿಯಲ್ಲಿ ಅದ್ಭುತ ಕಲಾವಿದರ ಪೈಕಿ ಒಬ್ಬರಾಗಿದ್ದ ಪ್ರಶಾಂತ ಹಿರೇಮಠ, ತಾವೊಬ್ಬ ಸೃಜನಶೀಲ ನಿರ್ದೇಶಕ ಎನ್ನುವುದನ್ನು ಈ ನಾಟಕದ ಮೂಲಕ ಸಾಬೀತುಗೊಳಿಸಿದರು.

60–70ರ ದಶಕದಲ್ಲಿ ಮಧ್ಯಮ ವರ್ಗದ ವೈದಿಕ ಕುಟುಂಬವೊಂದರಲ್ಲಿನ ವೈರುಧ್ಯ, ಆತ್ಮೀಯತೆ, ಸಂಬಂಧಗಳ ಸೊಗಡು ಹೀಗೆ ಹಲವು ಸಂಗತಿಗಳು ರಂಗದ ಮೇಲೆ ಬಂದು ಅವು ನಮ್ಮವೇ ಎನ್ನುವಷ್ಟು ಆತ್ಮೀಯವಾಗುತ್ತವೆ.ಇಂಥದ್ದೇ ಒಂದು ಕುಟುಂಬದ ಹಿರಿಯ ಅತ್ಯಂತ ಕಟ್ಟುನಿಟ್ಟಿನ ಮನುಷ್ಯ. ಆತನಿಗೆ ಹಾಡು, ಸಂಗೀತ, ನೃತ್ಯ ಎಂದರೆ ಆಗದು. ಆದರೆ ಮಗನಿಗೆ ಹಾಡೆಂದರೆ ಪಂಚ ಪ್ರಾಣ. ಅದು ಆತನನ್ನು ಎಷ್ಟು ಕಾಡುತ್ತವೆ ಎಂದರೆ ಪ್ರತಿ ನಡೆ, ಹಾವಭಾವ, ಮಾತು ಎಲ್ಲವೂ ಅನುಕರಣೆಯೇ. ಆತನ ಓದು, ಬದುಕು, ಮಾತುಕತೆ, ಪ್ರೀತಿ, ಜಗಳ ಎಲ್ಲವೂ ಹಾಡುಗಳೊಂದಿಗೆ ಬೆಸೆದುಕೊಂಡಿದ್ದೇ. ಇದರ ನಡುವೆ ಆತ ಮದುವೆಯಾಗುತ್ತಾನೆ. ಮದುವೆಯಾಗಿ ಎರಡು ವರ್ಷಗಳಲ್ಲಿಯೇ ಹೆಂಡತಿ ಜ್ವರಕ್ಕೆ ಬಲಿಯಾಗಿ ಸಾಯುತ್ತಾಳೆ. ಮಡದಿಯನ್ನು ಕಳೆದುಕೊಂಡ ಆತ ತನ್ನ ರೂಮಿನಲ್ಲಿ ಕುಳಿತು ಆಕೆಯ ನೆನಪಿನಲ್ಲೇ ದಿನ ದೂಡುತ್ತಾನೆ. ಇಡೀ ಕತೆಯನ್ನು ಹೀಗೆ ಹೇಳಿಬಿಡಬಹುದು. ಆದರೆ ಇದೇ ಕತೆಯನ್ನು ರಂಗರೂಪಕ್ಕೆ ಅಳವಡಿಸಿ, ಆ ಕಾಲದ ಅತ್ಯಂತ ಮಧುರ ಹಾಡುಗಳನ್ನು, ಸೂಕ್ತ ಸಂದರ್ಭ ಮತ್ತು ಸಮಯದಲ್ಲಿ ಬಳಸಿಕೊಂಡಿರುವ ಜಾಣ್ಮೆ ನಿರ್ದೇಶಕರ ಸೃಜನಶೀಲತೆಯನ್ನು ಸಾಬೀತುಪಡಿಸುವುದರ ಜತೆ ಪ್ರೇಕ್ಷಕರನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ. ತನ್ನದೇ ಭಾಗವಾಗಿ ಆಳಕ್ಕಿಳಿಸಿಕೊಳ್ಳುತ್ತದೆ.

ನಾಟಕದಲ್ಲಿ ಬಳಸಿಕೊಂಡಿರುವಸೈಗಲ್, ತಲತ್ ಮೆಹಮೂದ್, ಮುಖೇಶ್, ರಫಿ, ಕಿಶೋರ್, ಲತಾ, ಮನ್ನಾ ಡೆ ಮುಂತಾದ ಪ್ರಸಿದ್ಧ ಗಾಯಕರ ಹಾಡುಗಳು ಕೇವಲ ಮಾಧುರ್ಯದಿಂದ ಮನಗೆಲ್ಲುವುದಿಲ್ಲ. ಸಾಂದರ್ಭಿಕವಾಗಿ ಬಳಕೆಯಾಗಿರುವುದರಿಂದ ಆ ಹಾಡುಗಳ ಆಪ್ತತೆ ಕೂಡ ಹೆಚ್ಚಾಗಿದೆ. ಆತ್ಮಕಥೆಯ ಮಾದರಿಯಲ್ಲಿ ಅನಾವರಣಗೊಳ್ಳುವ ನಾಟಕ, ಅದಕ್ಕಾಗಿ ನಿರ್ದೇಶಕ ಬಳಸಿಕೊಂಡಿರುವ ತಂತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಇಡೀ ಕತೆಯನ್ನು ನಿರ್ದೇಶಕ ಗ್ರಹಿಸಿರುವ ರೀತಿಯೇ ಅಚ್ಚರಿ ಹುಟ್ಟಿಸುತ್ತದೆ. ಇಡೀ ನಾಟಕದ ಯಶಸ್ಸು ಅಡಗಿರುವುದೇ ಅದರ ಕಟ್ಟುವಿಕೆ ಮತ್ತು ಪ್ರಸ್ತುತಿಯಲ್ಲಿ.

ನಿರೂಪಕ ಯಾವುದೋ ಒಂದು ಘಟನೆಯನ್ನು ವಿವರಿಸುತ್ತಿದ್ದಂತೆ ಆ ಘಟನೆ ಆತನ ಕಣ್ಣ ಮುಂದೆಯೇ ದೃಶ್ಯವಾಗಿ ಅನಾವರಣಗೊಳ್ಳುತ್ತದೆ. ಅದಕ್ಕೆ ಸ್ವತಃ ನಿರೂಪಕನೇ ಸಾಕ್ಷಿಯಾಗುತ್ತಾನೆ. ದೃಶ್ಯದ ಜತೆ ಬರುವ ಹಳೆಯ ಹಿಂದಿ ಸಿನಿಮಾ ಹಾಡೊಂದು ಕೇವಲ ನಟರ ಸರಕಾಗುವುದಿಲ್ಲ. ಅದು ಪ್ರೇಕ್ಷಕರ ಆಸ್ತಿಯೂ ಆಗುತ್ತದೆ. ರಂಗದ ಮೇಲಿನ ಯಾವುದೋ ಒಂದು ಪಾತ್ರದೊಂದಿಗೆ ಪ್ರೇಕ್ಷಕ ತನ್ನನ್ನು ಸಮೀಕರಿಸಿಕೊಳ್ಳುತ್ತಲೆ ತನ್ನ ಬದುಕಿನಲ್ಲಿ ನಡೆದ ಅಂಥ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾನೆ. ಸಂತಸ ಪಡುತ್ತಾನೆ, ಬೇಸರ ಪಟ್ಟುಕೊಳ್ಳುತ್ತಾನೆ. ದುಃಖ ಪಡುತ್ತಾನೆ. ಇಡೀ ನಾಟಕದ ಭಾಗವೇ ಆಗಿ ಬದಲಾಗುತ್ತಾನೆ. ಹೀಗಾಗಿ ಎರಡೂವರೆ ಗಂಟೆ ಅವಧಿಯ ನಾಟಕ ಎಲ್ಲಿಯೂ ಬೇಸರ ತರುವುದಿಲ್ಲ. ಪ್ರೇಕ್ಷಕರನ್ನು ಅಲುಗಾಡದಂತೆ ಹಿಡಿದಿಡುತ್ತದೆ. ಇಷ್ಟೇ ಅಲ್ಲದೇ ನಾಟಕದಲ್ಲಿನ ಸಂಬಂಧಗಳ ಸೊಗಸು ಹಿಂದೊಮ್ಮೆ ನಮ್ಮ ಮನೆಗಳಲ್ಲೂ ಇದ್ದವಲ್ಲ ಎನ್ನುವ ಭಾವವನ್ನು ಬಡಿದೆಬ್ಬಿಸುವ ಜತೆ ಮನದ ಮೂಲೆಯಲ್ಲಿ ಸಂತಸದ ಅಲೆಗಳನ್ನು ಎಬ್ಬಿಸುತ್ತವೆ.

ಸಿನಿಮಾ ಪ್ರಭಾವಕ್ಕೆ ಒಳಗಾದ ಯುವಕನ ಪಾತ್ರದಲ್ಲಿ ಪೂರ್ಣಚಂದ್ರ ವಿಶಿಷ್ಟ ತುಂಟತನ, ಸಂಭಾಷಣೆ ಶೈಲಿ, ಟೈಮಿಂಗ್ ನಿಂದಾಗಿ ಇಡೀ ನಾಟಕವನ್ನು ಆವರಿಸಿಕೊಳ್ಳುತ್ತಾನೆ. ಜಾನಕಿ ಪಾತ್ರ ನಿರ್ವಹಿಸಿದ ಶಾಲ್ಮಲಿ, 60–70ರ ಕಾಲಘಟ್ಟದಲ್ಲಿನ ಯುವತಿಯೊಬ್ಬಳ ಸಂಕೋಚ, ನಾಚಿಕೆ, ಮದುವೆಯಾಗುತ್ತಿದ್ದಂತೆ ಗಂಡನ ಸಿಗರೇಟ್ ಚಟ ಬಿಡಿಸಲು ಬಳಸುವ ತಂತ್ರ. ಹೀಗೆ ಭಾವನಾತ್ಮಕ ಅಭಿನಯದಿಂದಲೇ ಗಮನ ಸೆಳೆಯುತ್ತಾರೆ. ನಿರೂಪಕನಾಗಿ ಮುರಳಿ ಗುಂಡಣ್ಣ ಸೇರಿದಂತೆ ಪ್ರತಿಯೊಬ್ಬರೂ ನಾಟಕದ ಆಶಯಕ್ಕೆ ಪೂರಕವಾಗಿ ನಟಿಸಿದ್ದಾರೆ.

ನಾಟಕದುದ್ದಕ್ಕೂ ನವಿರಾದ ದೃಶ್ಯ ಮತ್ತು ಕತೆಯ ಮೂಲಕ ಮನಸ್ಸನ್ನು ಆವರಿಸುವ ನಾಟಕ, ಜಾನಕಿ ಸಾವಿನೊಂದಿಗೆ ಅದರ ಆವರಣವೇ ಸ್ಥಿತ್ಯಂತರಗೊಳ್ಳುತ್ತದೆ. ಅದುವರೆಗೆ ನಾಟಕವನ್ನು ತನ್ನೊಂದಿಗೆ ಸಮೀಕರಿಸಿಕೊಂಡು ಅನುಭವಿಸಿದ್ದ ಪ್ರೇಕ್ಷಕ ಭಾವನಾತ್ಮಕ ಸೆಳವಿಗೆ ಸಿಕ್ಕು ಬಿಡುತ್ತಾನೆ. ಇಡೀ ನಾಟಕದ ಆಶಯ, ಬದುಕು ಒಂದೇ ದಾರಿಯಲ್ಲಿ ಸಾಗುವ ಪಯಣವಲ್ಲ. ಪ್ರೀತಿ ಮತ್ತು ನೋವಿನ ನಡುವಿನ ದ್ವಂದ್ವ ಎನ್ನುವ ಸಾಂಕೇತಿಕ ಅರ್ಥವನ್ನು ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಸರಳ ಕತೆ, ಸುಂದರ ಸಂಯೋಜನೆ, ಉತ್ತಮ ನಟನೆ, ಸೃಜನಶೀಲ ಚಿಂತನೆ, ಹಳೆಯ ಮಧುರ ಹಾಡುಗಳು, ಅವುಗಳಿಗೆ ಸಂಯೋಜಿಸಿದ ನೃತ್ಯಗಳು, ವಿಭಿನ್ನ ರಂಗಸಜ್ಜಿಕೆ, ಅಂದಿನ ಕಾಲಘಟ್ಟವನ್ನು ಪ್ರತಿನಿಧಿಸುವ ರಂಗ ಪರಿಕರಗಳು ಹೀಗೆ ಪ್ರತಿ ವಿಷಯದಲ್ಲಿನ ನಿಖರತೆಯಿಂದಾಗಿ ಪಾರ್ಶ್ವ ಸಂಗೀತ ನಾಟಕ ವಿಶಿಷ್ಟ ಅನುಭವ ನೀಡುವ ಜತೆ, ಪ್ರಾಯೋಗಿಕ ರಂಗಭೂಮಿಗೆ ಒಂದಿಷ್ಟು ಆಕ್ಷಿಜನ್ ಕೂಡಾ ನೀಡುತ್ತದೆ. ಇಂಥದೊಂದು ಪ್ರಯತ್ನಕ್ಕೆ ಕಾರಣವಾದ ಮೈಸೂರಿನ ರಂಗವಲ್ಲಿ ತಂಡ ಅಭಿನಂದನೆ ಅರ್ಹವಾದದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.