ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಸಂಸ್ಕೃತ ದಿನ ಇಂದು: ಸಂಸ್ಕೃತ ಪ್ರಚಾರಕ ‘ಸಂಸ್ಕೃತ ಭಾರತಿ’

ವಿಶ್ವ ಸಂಸ್ಕೃತ ದಿನ ಇಂದು: ಪ್ರಾಚೀನ ಭಾಷೆ ಉಳಿವಿಗೆ ಹಲವು ಕಾರ್ಯಕ್ರಮ
Published 19 ಆಗಸ್ಟ್ 2024, 5:17 IST
Last Updated 19 ಆಗಸ್ಟ್ 2024, 5:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವದ ಪ್ರಾಚೀನ ಭಾಷೆ ಸಂಸ್ಕೃತ. ಹಲವು ಭಾಷೆಗಳ ತಾಯಿ ಆಗಿರುವ ಸಂಸ್ಕೃತವನ್ನು ಸಂಭ್ರಮಿಸಲು 1969ರಿಂದ ವಿಶ್ವ ಸಂಸ್ಕೃತ ದಿನ ಆಚರಿಸಲಾಗುತ್ತಿದೆ. ಈ ವರ್ಷ ಆಗಸ್ಟ್ 19ರಂದು ವಿಶ್ವ ಸಂಸ್ಕೃತ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.

ಮರೆಯಾಗುತ್ತಿರುವ ಸಂಸ್ಕೃತವನ್ನು ಮನೆಮಾತಾಗಿಸುವ, ದೇಶ–ವಿದೇಶಗಳಲ್ಲಿ ಪಸರಿಸುವ ಕಾರ್ಯ ಹಿಂದೆಂದಿಗಿಂತಲೂ ಈಗ ವೇಗ ಪಡೆದುಕೊಂಡಿದೆ. ಈ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಸಂಸ್ಕೃತ ಭಾರತಿ.

ಹುಬ್ಬಳ್ಳಿಯಲ್ಲಿ ಸಂಸ್ಕೃತ ಭಾರತಿಯು ಬಾಲಕೇಂದ್ರ, ಸಂಸ್ಕೃತ ಸಂಭಾಷಣ ಶಿಬಿರ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಸಂಸ್ಥೆಯಲ್ಲಿನ ಪ್ರಚಾರಕರು, ಬೋಧಕರು ಎಲ್ಲರೂ ಉದ್ಯಮಿಗಳು, ಶಿಕ್ಷಕರು, ವೈದ್ಯರು, ಎಂಜನಿಯರ್‌ಗಳು– ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಇರುವವರು. ಅಲ್ಲದೆ ಕೊಳೆಗೇರಿ ಪ್ರದೇಶಗಳಲ್ಲಿ ನಡೆದ ಕಾರ್ಯಾಗಾರಗಳಿಂದಲೂ ನೂರಾರು ಕಾರ್ಯಕರ್ತರು ಸಿಕ್ಕಿದ್ದಾರೆ. ಇವರೆಲ್ಲ ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಸ್ಥೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.

ಬಾಲಕೇಂದ್ರ: 6–12 ವರ್ಷದ ಮಕ್ಕಳಿಗಾಗಿ ನಡೆಯುವ ತರಗತಿ ‘ಬಾಲಕೇಂದ್ರ’. ಹುಬ್ಬಳ್ಳಿಯಲ್ಲಿ ಸದ್ಯ ಎಂಟು ಕಡೆಗಳಲ್ಲಿ ಈ ತರಗತಿ ನಡೆಯುತ್ತಿದ್ದು, ವಾರದಲ್ಲಿ ಎರಡು ತಾಸು ಸಂಸ್ಕೃತ ಸಂಭಾಷಣೆ, ಶ್ಲೋಕ, ಸುಭಾಷಿತ, ಆಟ ಹೀಗೆ ಹಲವು ವಿಚಾರಗಳನ್ನು ಕಲಿಸಲಾಗುತ್ತದೆ. ಸಂಸ್ಕೃತ ಭಾರತಿಯಿಂದಲೇ ಬೋಧಕರನ್ನು ನಿಯೋಜಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 150ಕ್ಕೂ ಹೆಚ್ಚು ಬಾಲಕೇಂದ್ರ ತರಗತಿಗಳು ನಡೆದಿದ್ದು, 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿದ್ದಾರೆ.

ಸಂಭಾಷಣ ಶಿಬಿರ: ಸಂಸ್ಕೃತದ ಗಂಧವೇ ಇಲ್ಲದವರೂ ಹತ್ತೇ ದಿನಗಳಲ್ಲಿ ಸಂಸ್ಕೃತ ಕಲಿಯಲು ಸಾಧ್ಯ ಎಂದು ನಿರೂಪಿಸಿರುವುದು ಈ ಶಿಬಿರ. ಬೋಧಕರು ವಿದ್ಯಾರ್ಥಿಗಳೊಂದಿಗೆ ಪ್ರಾಯೋಗಿಕವಾಗಿ ಸಂಭಾಷಣೆ ನಡೆಸುವ ಮೂಲಕವೇ ನಿತ್ಯದ ಅಗತ್ಯಗಳಿಗೆ ಬೇಕಾಗುವಷ್ಟು ಸಂಸ್ಕೃತವನ್ನು ಕಲಿಸುತ್ತಾರೆ. ಶಿಬಿರದ ಕೊನೆಯಲ್ಲಿ ಸಂಸ್ಕೃತ ನಾಟಕ ಪ್ರದರ್ಶಿಸುವ ಮಟ್ಟಿಗೆ ವ್ಯಾವಹಾರಿಕ ಭಾಷೆಯಲ್ಲಿ ಶಿಬಿರಾರ್ಥಿಗಳು ಸಿದ್ಧರಾಗುತ್ತಾರೆ.

‘18 ವರ್ಷಗಳಿಂದಲೂ ಈ ಶಿಬಿರ ನಡೆದುಕೊಂಡು ಬಂದಿದೆ. ಕಳೆದ ವರ್ಷ ಮಜೇಥಿಯಾ ಫೌಂಡೇಷನ್ ಸಹಯೋಗದಲ್ಲಿ ಧಾರವಾಡ, ಹುಬ್ಬಳ್ಳಿ, ನವನಗರಗಳಲ್ಲಿ 108 ಸಂಸ್ಕೃತ ಸಂಭಾಷಣ ಶಿಬಿರಗಳನ್ನು ಆಯೋಜಿಸಿ, 4 ಸಾವಿರಕ್ಕೂ ಹೆಚ್ಚು ಜನರಿಗೆ ಕಲಿಸಲಾಗಿದೆ. 280 ಸ್ವಯಂ ಸೇವಕರು ಇದರಲ್ಲಿ ಭಾಗಿಯಾಗಿದ್ದಾರೆ. 35 ಕಾಲೇಜುಗಳು, 82 ವಿದ್ಯಾಲಯಗಳನ್ನು ಈ ಶಿಬಿರದ ಮೂಲಕ ತಲುಪಲಾಗಿದೆ’ ಎಂದು ಸಂಸ್ಕೃತ ಭಾರತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾಹಿತಿ ನೀಡಿದರು.

ಗೀತಾ ಜಯಂತಿ ಅಂಗವಾಗಿ ಬರುವ ಡಿ.15ಕ್ಕೆ ‘ಗೀತಾಮೃತಮ್’ ಹೆಸರಿನಲ್ಲಿ ಸರಳ ಸಂಸ್ಕೃತ ಬಲ್ಲ ಕನಿಷ್ಠ 1,008 ಜನರನ್ನು ಸೇರಿಸಿ ಭಗವದ್ಗೀತೆಯ 12 ಮತ್ತು 15ನೇ ಅಧ್ಯಾಯದ ಪಾರಾಯಣ ಮಾಡುವ ಗುರಿಯನ್ನು ಸಂಸ್ಕೃತ ಭಾರತಿ ಹೊಂದಿದೆ. ಅದಕ್ಕಾಗಿ ಸದ್ಯ ಆನ್‌ಲೈನ್, ಆಫ್‌ಲೈನ್ ಪಾಠಗಳು ಚಾ‌ಲ್ತಿಯಲ್ಲಿವೆ.

ಜೇಬಿನಲ್ಲಿ ಹಣವಿದ್ದಾಗ ಖರೀದಿಯ ಬಯಕೆ ಹುಟ್ಟುವಂತೆಯೇ ನಮ್ಮ ಶಕ್ತಿ–ಸಾಮರ್ಥ್ಯ ಹೆಚ್ಚಿದಂತೆ ಹೊಸ ಹೊಸ ಯೋಜನೆಗಳು ಬರುತ್ತವೆ. ಇನ್ನೂ ಅನೇಕ ಪ್ರಮುಖ ಕೆಲಸಗಳು ಸಂಸ್ಕೃತ ಭಾರತಿಯಿಂದ ಆಗಲಿವೆ

-ಲಕ್ಷ್ಮೀನಾರಾಯಣ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಸ್ಕೃತ ಭಾರತಿ

ನಿತ್ಯ ಭಗವದ್ಗೀತೆ ಸಂಸ್ಕೃತ ಶ್ಲೋಕ ಓದುವವರು ಮಾನಸಿಕವಾಗಿ ಗಟ್ಟಿಗೊಳ್ಳುತ್ತಾರೆ ಶಾಂತಿ–ಸಮಾಧಾನದ ಗುಣ ಹೊಂದುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲೂ ಇದು ನೆರವಾಗುತ್ತದೆ

- ಸರೋಜಾ ಬಮ್ಮಿಗಟ್ಟಿ ಕರ್ನಾಟಕ ಉತ್ತರ ಬಾಲಕೇಂದ್ರ ಪ್ರಮುಖರು ಸಂಸ್ಕೃತ ಭಾರತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT