ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ಹೆಚ್ಚುತ್ತಿರುವ ಹೊಸ ಬಡಾವಣೆ: ಪುರಸಭೆಗೆ ಸವಾಲಾದ ಮೂಲಸೌಲಭ್ಯ

Published 20 ಮೇ 2024, 6:31 IST
Last Updated 20 ಮೇ 2024, 6:31 IST
ಅಕ್ಷರ ಗಾತ್ರ

ನರಗುಂದ: ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ -218ಗೆ ಹೊಂದಿಕೊಂಡಿರುವ ನರಗುಂದ ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆ ಮಿತಿ ಮೀರಿ ಬೆಳೆದರೆ ಇನ್ನೊಂದೆಡೆ ವಲಸಿಗರ ಸಂಖ್ಯೆಯು ಹೆಚ್ಚುತ್ತಿದೆ. ಇದರ ಪರಿಣಾಮವೋ, ರಿಯಲ್ ಎಸ್ಟೇಟ್ ನವರ ಉದ್ಯಮವೋ ಎಂಬಂತೆ ಪಟ್ಟಣದಲ್ಲಿ ಪ್ರತಿ ವರ್ಷ ಹೊಸ ಬಡಾವಣೆ ಹೆಚ್ಚುತ್ತಲೇ ಇವೆ. ಇದರಿಂದ ಹೊಸ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪುರಸಭೆ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ಜನರ ಪರದಾಟವೂ ಹೇಳತೀರದಾಗಿದೆ.

ಗಣನೀಯ ಹೆಚ್ಚಳ: ಐದು ದೊಡ್ಡ ಗ್ರಾಮಗಳು ಸೇರಿ ಪಂಚಬಣಗಳಿಂದಾದ ನರಗುಂದ ಪಟ್ಟಣ ಐದರಿಂದ ಆರು ಕೀ‌.ಮಿ ಅಂತರದಲ್ಲಿ ತನ್ನ ವ್ಯಾಪ್ತಿ ಹೊಂದಿತ್ತು. ಕಳೆದ ಎರಡು ದಶಕಗಳಿಂದ ನಾಲ್ಕು ದಿಕ್ಕುಗಳಲ್ಲೂ ತನ್ನ ಹರವನ್ನು ಮತ್ತೇ ಮೂರು ಕಿ.ಮೀ. ದೂರ ಚಾಚಿದ್ದು ಪಟ್ಟಣದ ವಿಸ್ತೀರ್ಣ ಗಣನೀಯವಾಗಿ ಹೆಚ್ಚಿದೆ, ಹೆಚ್ಚುತ್ತಲೇ ಇದೆ.

ಕೃಷಿ ಭೂಮಿ ವಸತಿ ನಿವೇಶನಗಳಾಗುತ್ತಲೇ ಇವೆ. ಇದರ ಪರಿಣಾಮ ಎರಡು ದಶಕದಲ್ಲಿ 10ಕ್ಕೂ ಹೆಚ್ಚು ಹೊಸ ಬಡಾವಣೆ, ನಗರಗಳು ಉಗಮವಾಗಿವೆ ನೀರಾವರಿ ಕಚೇರಿ ರಸ್ತೆಯಲ್ಲಿ ಮೊದಲ ಹೊಸ ಬಡಾವಣೆ ಹಾಗೂ ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ಅಧ್ಯಾಪಕ ನಗರ, ಸರಸ್ವತಿ ನಗರಗಳು ನಿರ್ಮಿತಗೊಂಡವು. ಅವು ಮೂರು ದಶಕಗಳ ನಂತರ ಈಚೆಗಷ್ಟೇ ಮೂಲ ಸೌಲಭ್ಯಗಳನ್ನು ಹೊಂದಿವೆ. ದಶಕದ ಹಿಂದೆ ನಿರ್ಮಾಣ ಗೊಂಡ, ಡಾಲರ್ಸ್‌ ಕಾಲೊನಿ, ಯಲಿಗಾರ ಪ್ಲಾಟ್ ಇಂದಿಗೂ ರಸ್ತೆ, ಚರಂಡಿ ಗಳಿಲ್ಲದೇ ಅಲ್ಲಿಯ ನಿವಾಸಿಗಳು ಪರದಾಡುವಂತಾಗಿವೆ.

ಜೊತೆಗೆ ಲಕ್ಷ್ಮಿ ನಗರ, ಅಲ್ಲಿಭಾಯಿ ಪ್ಲಾಟ್, ಎಲ್.ಎಸ್.ಪಾಟೀಲ ನಗರಗಳು ಮೂಲ ಸೌಲಭ್ಯಗಳಿಗೆ ಹಾತೊರೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಹುಬ್ಬಳ್ಳಿ ರಸ್ತೆಗೆ, ಕುರ್ಲಗೇರಿ ರಸ್ತೆ, ರೋಣ ರಸ್ತೆ, ಬಾಗಲಕೋಟೆ ರಸ್ತೆ, ಜಗಾಪುರ ಒಳ ರಸ್ತೆಗಳಲ್ಲಿ ಹೊಸ ಬಡಾವಣೆಗಳು ಉಂಟಾಗುತ್ತಲೇ ಇವೆ. ನಿವೇಶನ ಮಾರಾಟ ಮಾಡಿದ ಮಾಲೀಕರು ತಾತ್ಕಾಲಿಕ ರಸ್ತೆ, ಚರಂಡಿ ನಿರ್ಮಿಸಿ ಕೈತೊಳೆದುಕೊಳ್ಳುತ್ತಾರೆ. ನಂತರ ಅಲ್ಲಿಯ ನಿವಾಸಿಗಳು ಮೂಲ ಸೌಲಭ್ಯಕ್ಕೆ ಪುರಸಭೆಗೆ ದುಂಬಾಲು ಬೀಳುವುದು ಸಾಮಾನ್ಯ. ಇದು ಪುರಸಭೆಗೆ ಸವಾಲಾಗಿದೆ.

ಗಗನಕ್ಕೇರಿದ ದರ: ಪಟ್ಟಣದಲ್ಲಿ ಹೊಸ ಬಡಾವಣೆ, ನಿವೇಶನಗಳು ಹೆಚ್ಚಿದರೂ ದರ ಕಡಿಮೆ ಇಲ್ಲ. ಮಹಾನಗರಗಳಾದ ಹುಬ್ಬಳ್ಳಿ, ಧಾರವಾಡ, ಬಾಗಲಕೋಟಿ, ಬೆಳಗಾವಿಗಿಂತಲೂ ಹೆಚ್ಚಿನ ದರ ಇಲ್ಲಿದೆ. ಇದರಿಂದ ನಿವೇಶನ ಖರೀದಿಸಿ, ಮನೆ ಹಾಕುವುದು ಬಡವರ ಕನಸು. ಕನಸಾಗಿಯೇ ಉಳಿದಿದೆ.

ಒಂದು ಚದರ ಮೀಟರ್ ಗೆ ಕನಿಷ್ಟ ₹ 1000ದಿಂದ ಗರಿಷ್ಟ ₹ 3000 ದವರೆಗೆ ಮಾರಾಟ ನಡೆದಿದೆ. ಇದರಿಂದಶ 30-40 ಸೈಜ್ ಪ್ಲಾಟ್ ಬೆಲೆ ₹10 ಲಕ್ಷಕ್ಕೆ ಮಾರಾಟವಾಗುತ್ತದೆ. ಆದರೆ ಬಡವರಿಗೆ ಸರ್ಕಾರದ ಯೋಜನೆಯಡಿ ಮನೆಗಳಿಲ್ಲ. ಖರೀದಿಸಲು ದರ ಗಗನಕ್ಕೇರಿದೆ.

ವಾಣಿಜ್ಯ, ಶಿಕ್ಷಣ ಕೇಂದ್ರವಾಗಿ ವಾಣಿಜ್ಯ ನಗರಗಳಿಗೆ ಸಮೀಪ ಇರುವ ಪಟ್ಟಣದಲ್ಲಿ ನಿವೇಶನ, ಮನೆಗಳಿಗೆ ಬೇಡಿಕೆ ಹೆಚ್ಚಾಗಿ ಹೊರ ಜಿಲ್ಲೆಯವರ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಬಾಡಿಗೆ ಮನೆಗಳ ದರ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.

ಆಶ್ರಯ ಅಥವಾ ಯಾವುದಾದರೂ ವಸತಿ ಯೋಜನೆಯಡಿ ಬಡವರಿಗೆ ಬೇಗನೇ ಸೂರು ದೊರೆಯುವುದು ಕನಸಿನ ಮಾತಾಗಿದೆ. ಇದಕ್ಕೆ ಸರ್ಕಾರವಾಗಲಿ, ರಿಯಲ್ ಎಸ್ಟೇಟ್ ಉದ್ಯಮದಾರರು ಬಡವರ ಬಗ್ಗೆ ಯೋಚಿಸುವರೇ ಎಂಬುವುದನ್ನು ಕಾದು ನೋಡಬೇಕಿದೆ.

ನರಗುಂದ ದಲ್ಲಿ ಕುರ್ಲಗೇರಿ ರಸ್ತೆ ಯಲ್ಲಿ ಚಲೆ ಎತ್ತುತ್ತಿರುವ ಹೊಸ ಬಡಾವಣೆ.
ನರಗುಂದ ದಲ್ಲಿ ಕುರ್ಲಗೇರಿ ರಸ್ತೆ ಯಲ್ಲಿ ಚಲೆ ಎತ್ತುತ್ತಿರುವ ಹೊಸ ಬಡಾವಣೆ.
ನರಗುಂದ ಪಟ್ಞಣದಲ್ಲಿ ಹೊಸ ಬಡಾವಣೆಗಳು ಹೆಚ್ಚುತ್ತಿವೆ. ಈಗಾಗಲೇ ನಿವೇಶನಗಳ ಡೆವಲಪರ್ಸ್‌ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವುದು ಅವರದ್ದೇ ಜವಾಬ್ದಾರಿ. ನಮಗೆ ಬಡಾವಣೆ ಹಸ್ತಾಂತರ ಗೊಂಡ ಮೇಲೆ ಮೂಲ ಸೌಲಭ್ಯಗಳ ಬೇಕಾದರೆ ಅನುದಾನ ಲಭ್ಯತೆ ನೋಡಿಕೊಂಡು ಆದ್ಯತೆ ಮೇರೆಗೆ ಸೌಲಭ್ಯ ಒದಗಿಸಲಾಗುವುದು ಅಮಿತ್‌ ತಾರದಾಳೆ, ಮುಖ್ಯಾಧಿಕಾರಿ, ಪುರಸಭೆ ನರಗುಂದ
ಸರ್ಕಾರ ಸೂರಿಲ್ಲದವರಿಗೆ ಸೂರು ನೀಡುವ ಕಾರ್ಯ ಮಾಡಬೇಕು. ಆಗ ಹೊಸ ಬಡಾವಣೆಗಳ ನಿವೇಶನಕ್ಕೆ ಬೇಡಿಕೆ ಕಡಿಮೆಯಾಗಿ ಕೈಗೆಟುಕುವ ದರದಲ್ಲಿ ನಿವೇಶನ ದೊರೆಯಬಹುದು. ಇಲ್ಲವಾದರೆ ಕೊನೆಯವರೆಗೂ ಬಾಡಿಗೆ ಮನೆಯಲ್ಲಿ ಕಾಲ ದೂಡಬೇಕಾಗುತ್ತದೆ
ವಾಸು ಚವ್ಹಾಣ ನರಗುಂದ
ಸೂರಿಲ್ಲದವರ ಪರದಾಟ
ಕಳೆದ ಎರಡು ದಶಕಗಳ ಹಿಂದೆಯೇ ಗುಡ್ಡದ ಓರೆಯಲ್ಲಿ ಸರ್ಕಾರದ ಆಶ್ರಯ ಯೋಜನೆಯಡಿ ಪುರಸಭೆ 1700ಕ್ಕೂ ಹೆಚ್ಚು ನಿವೇಶನ ಗುರುತಿಸಿ 400 ಮನೆಗಳನ್ನು ಹಾಗೂ ಸೋಮಾಪುರ ಓಣಿಯಲ್ಲಿ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದು ಬಿಟ್ಟರೆ ಮತ್ತಾವುದೇ ಯೋಜನೆಯಡಿ ಮನೆಗಳು ಬಡವರಿಗೆ ವಿತರಣೆಯಾಗಿಲ್ಲ. ಗುಡ್ಡದ ಓರೆಯಲ್ಲಿ ನಿರ್ಮಾಣವಾದ ಮನೆಗಳಲ್ಲಿ ಎರಡು ದಶಕವಾದರೂ ಸರಿಯಾದ ಹಕ್ಕು ಪತ್ರಗಳು ವಿತರಣೆಯಾಗಿಲ್ಲ.ಕೆಲವರು ಕೋರ್ಟ್‌ ಕಟ್ಟೆ ಹತ್ತಿದ್ದಾರೆ. ಜೊತೆಗೆ ಅಲ್ಲಿ ಹೋಗಿ ಇದ್ದವರೆ ನಿವಾಸಿಗಳಾಗಿದ್ದಾರೆ. ಅವರಿಗೂ ಹಕ್ಕುಪತ್ರಗಳಿಲ್ಲ. ಈಚೆಗೆ ಮತ್ತೇ ಕೊಳಚೆ ನಿರ್ಮೂಲನಾ ಮಂಡಳಿ ಮೂಲಕ ಐದುನೂರು ಮನೆಗಳು ವಂತಿಗೆ ಹಣದ ಮೂಲಕ ನಿರ್ಮಾಣವಾಗುತ್ತಿವೆ.ಅರ್ಹ ಫಲಾನುಭವಿಗಳಿಗೆ ವಿತರಣೆಯಾಗಬೇಕಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಹೊಸ ಬಡಾವಣೆಗಳ ನಿವೇಶನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಬಡವರಿಗೆ ದರ ಹೆಚ್ಚಾಗಿ ನಿವೇಶನಗಳು ಕೈಗೆಟುಕದಂತಾಗಿವೆ. ಸೂರಿನ ಕನಸು ಕನಸಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT