ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ | ಜಿಟಿಜಿಟಿ ಮಳೆ: ಕಟಾವಿಗೆ ಬಂದ ಈರುಳ್ಳಿ; ರೈತರಲ್ಲಿ ಆತಂಕ

Published : 28 ಸೆಪ್ಟೆಂಬರ್ 2024, 5:12 IST
Last Updated : 28 ಸೆಪ್ಟೆಂಬರ್ 2024, 5:12 IST
ಫಾಲೋ ಮಾಡಿ
Comments

ಲಕ್ಷ್ಮೇಶ್ವರ: ಕೆಲವೇ ವಾರಗಳ ಹಿಂದೆ ಈರುಳ್ಳಿ ದರ ಕೇಳಿ ಗ್ರಾಹಕರು ಬೆಚ್ಚಿಬೀಳುವ ಸ್ಥಿತಿ  ನಿರ್ಮಾಣವಾಗಿತ್ತು. ಆದರೆ ಇದೀಗ ಸ್ಥಳೀಯ ರೈತರು ಬೆಳೆದ ಈರುಳ್ಳಿ ಕೊಯ್ಲಿಗೆ ಬಂದಿದ್ದು ಬೆಲೆ ಸ್ವಲ್ಪ ಹತೋಟಿಗೆ ಬರುವ ಲಕ್ಷಣಗಳಿವೆ.

ಸ್ಥಳೀಯ ರೈತರ ಈರುಳ್ಳಿ ಮಾರುಕಟ್ಟೆಗೆ ಬರುವ ಮೊದಲು ಮಹಾರಾಷ್ಟ್ರ, ತೆಲಗಿ ಈರುಳ್ಳಿ ಮಾರಾಟ ಜೋರಾಗಿತ್ತು. ಆಗ ಕೆಜಿಗೆ ₹60 ದರ ಇತ್ತು. ಸದ್ಯ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಗ್ರಾಹಕರಿಗೆ ಸ್ವಲ್ಪ ನೆಮ್ಮದಿ ಮೂಡಿಸಿದೆ.

ಈ ವರ್ಷ ಸುರಿದ ನಿರಂತರ ಮಳೆಗೆ ಮುಂಗಾರು ಹಂಗಾಮಿನ ಬೆಳೆಗಳ ಇಳುವರಿ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಇದರ ಬಿಸಿ ಈರುಳ್ಳಿಗೂ ತಟ್ಟಿತ್ತು. ಬಿಟ್ಟೂ ಬಿಡದೆ ಸುರಿದ ಮಳೆಗೆ ಈರುಳ್ಳಿ ಬೆಳೆ ಕೊಳೆತಿತ್ತು. ಈಗಲೂ ಸಹ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಕಿತ್ತ ಈರುಳ್ಳಿಗೆ ಮಾರಕವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ನೂರಾರು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ವಿಶೇಷವಾಗಿ ಎರೆ ಭೂಮಿಯಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅದರಲ್ಲೂ ತಾಲ್ಲೂಕಿನ ಅಡರಕಟ್ಟಿ ಭಾಗದಲ್ಲಿ ಬೆಳೆಯುವ ಈರುಳ್ಳಿಯ ಗುಣಮಟ್ಟ ಉತ್ತಮವಾಗಿರುತ್ತದೆ. ಈ ಬಾರಿಯೂ ಈ ಗ್ರಾಮದ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ ಮಳೆಗೆ ಬೆಳೆ ಕೊಳೆತು ಅಳಿದುಳಿದ ಫಸಲು ಕೊಯ್ಲಿಗೆ ಬಂದಿದೆ.

ಅಡರಕಟ್ಟಿ ಗ್ರಾಮದ ರೈತರು ಈರುಳ್ಳಿಯನ್ನು ಕೊಯ್ಲು ಮಾಡಿ ಕಣದಲ್ಲಿ ಒಣಗಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಆಗಾಗ ಬರುತ್ತಿರುವ ಮಳೆ ರೈತರಲ್ಲಿ ಚಿಂತೆ ಮೂಡಿಸಿದೆ.

‘ಈ ವರ್ಷ ಸುರಿದ ಮಳೆಗೆ ಈಗಾಗಲೇ ಸಾಕಷ್ಟು ಉಳ್ಳಾಗಡ್ಡಿ ಬೆಳಿ ಹಾಳಾಗೇತ್ರೀ. ಈಗ ಉಳಿದ ಉಳ್ಳಾಗಡ್ಡಿಯನ್ನು ಕಿತ್ತು ರೈತರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಆದರೆ ದುರಾದೃಷ್ಟ ಎಂಬಂತೆ ಜಿಟಿಜಿಟಿ ಮಳೆ ಶುರುವಾಗಿರುವುದು ಅವರಿಗೆ ಚಿಂತೆ ತರಿಸಿದೆ’ ಎಂದು ಅಡರಕಟ್ಟಿ ಗ್ರಾಮ ಪಂಚಾಯ್ತಿ ಸದಸ್ಯ ನಿಂಗಪ್ಪ ಪ್ಯಾಟಿ ತಿಳಿಸಿದರು.

‘ಸದ್ಯ ರೇಟು ಚಲೋ ಐತ್ರಿ. ಆದರ ಮುಂದ ಹ್ಯಂಗ ಅಂತಾ ಹೇಳಾಕ ಆಗಂಗಲ್ರೀ’ ಎಂದು ಈರುಳ್ಳಿ ಬೆಳೆಗಾರ ದೊಡ್ಡಮಲ್ಲಪ್ಪ ಆತಂಕ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT