ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೆ ಆಲೂರಿನಲ್ಲಿ ವೈಭವದ ದಸರಾ ಆಚರಣೆ

ಚೋಳರ ಕಾಲದಿಂದ ನಡೆದು ಬಂದಿರುವ ವೈಶಿಷ್ಟ್ಯ: ಗ್ರಾಮಸ್ಥರಿಂದ ಸಂಭ್ರಮ
Published : 7 ಅಕ್ಟೋಬರ್ 2024, 6:16 IST
Last Updated : 7 ಅಕ್ಟೋಬರ್ 2024, 6:16 IST
ಫಾಲೋ ಮಾಡಿ
Comments

ಆಲೂರು: ಕಸಬಾ ಹಳೆ ಆಲೂರು ಗ್ರಾಮದಲ್ಲಿ ವೈಭವದ ದಸರಾ ಮಹೋತ್ಸವ ಅ. 4ರಿಂದ ಆರಂಭವಾಗಿದೆ. ಮೈಸೂರಿನಲ್ಲಿ ದಸರಾ ನಡೆಯುವಂತೆ ಇಲ್ಲಿಯೂ ನಡೆಯುವುದರಿಂದ ಪ್ರಖ್ಯಾತಿ ಪಡೆದಿದೆ. ಚೋಳರ ಕಾಲದಿಂದ ನಡೆದು ಬಂದಿರುವ ವೈಶಿಷ್ಟ್ಯತೆಯನ್ನು ಗ್ರಾಮದ ಯುವಜನರು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾರೆ.

ಚೋಳರ ಕಾಲದ ಐತಿಹಾಸಿಕ ಹಿನ್ನೆಲೆಯುಳ್ಳ ಈ ಗ್ರಾಮದ ಮುಂಭಾಗದಲ್ಲಿ ಮಹೇಶ್ವರ, ಮೇಲ್ಭಾಗದಲ್ಲಿ ವಿಷ್ಣು ಮತ್ತು ಮಂಭಾಗದಲ್ಲಿ ಬ್ರಹ್ಮನ ದೇವಸ್ಥಾನ ಇರುವುದರಿಂದ ಬ್ರಹ್ಮ, ವಿಷ್ಣು (ತಿರುಮಲ ರಂಗನಾಥ ದೇವರು), ಮಹೇಶ್ವರ ದೇವಾಲಯಗಳನ್ನು ಹೊಂದಿರುವ ಗ್ರಾಮ ವಿಶಿಷ್ಟ ಸ್ಥಾನ ಪಡೆದಿದೆ.

ದಸರಾ ಮಹೋತ್ಸವ ಸಂದರ್ಭದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಗ್ರಾಮ ದೇವರಾದ ರಂಗನಾಥಸ್ವಾಮಿಯನ್ನು ದೇವರನ್ನು ಒಂಬತ್ತು ದಿನ ಸಮುದಾಯ ಭವನದಲ್ಲಿ ವಿಶೇಷವಾಗಿ ಪ್ರತಿಷ್ಠಾಪಿಸಿ, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪೂಜಾ ವಿಧಿ ವಿಧಾನಗಳು ಜರುಗುತ್ತವೆ. ಸ್ಥಳೀಯ ಭಕ್ತರು ನಿತ್ಯ ಸಂಜೆ ವೈಯಕ್ತಿಕ ಸೇವೆ ಸಲ್ಲಿಸುತ್ತಾರೆ.

ಆಯುಧಪೂಜೆ ನಡೆಯುವ ಒಂಬತ್ತನೇ ದಿನ, ಯುದ್ಧ ಕಾಲದಲ್ಲಿ ಬಳಸುತ್ತಿದ್ದ ಕತ್ತಿ, ಗುರಾಣಿಯನ್ನು ಪೂಜಿಸಿದ ಕುದುರೆಯೊಂದಿಗೆ ಗ್ರಾಮದ ಕೆರೆ ಬಳಿಗೆ ಮೆರವಣಿಗೆಯಲ್ಲಿ ತೆರಳಿ, ಪೂಜೆ ಮಾಡಲಾಗುತ್ತದೆ. ನಂತರ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.

ವಿಜಯದಶಮಿಯಂದು ಪಟ್ಟಕ್ಕೆ ಕುಳಿತಿದ್ದ ದೇವರನ್ನು ವಿಷ್ಣು (ತಿರುಮಲ ರಂಗನಾಥಸ್ವಾಮಿ) ದೇವಸ್ಥಾನದ ಬಳಿ ಇರುವ ಬನ್ನಿ ಮಂಟಪಕ್ಕೆ ಕರೆ ತಂದು ಕೂರಿಸಲಾಗುತ್ತದೆ. ಬನ್ನಿ ಮಂಟಪದ ಮುಂದೆ ಬನ್ನಿಸೊಪ್ಪು, ಬಾಳೆಕಂದನ್ನು ನೆಟ್ಟು, ಮೊದಲು ಬಿಲ್ಲು ಬಾಣದಿಂದ, ನಂತರ ಬಂದೂಕಿನಿಂದ ಗುರಿಯಿಟ್ಟು ಗುಂಡು ಹಾರಿಸಿ ಬನ್ನಿಕಂಬವನ್ನು ತುಂಡು ಮಾಡುತ್ತಾರೆ.

ನಂತರ ಸ್ಥಳದಲ್ಲಿ ನೆರೆದಿದ್ದ ಭಕ್ತರಿಗೆ ಬನ್ನಿ ಸೊಪ್ಪನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಬನ್ನಿಸೊಪ್ಪನ್ನು ಒಬ್ಬರಿಂದೊಬ್ಬರಿಗೆ ಕೊಟ್ಟು– ತೆಗೆದುಕೊಂಡು ಪ್ರಸಾದ ಸ್ವೀಕರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆದ ನಂತರ ದೇವರನ್ನು ಗ್ರಾಮಕ್ಕೆ ಕರೆ ತಂದು ಪೂಜಿಸಲಾಗುತ್ತದೆ. ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಬೆಳಗಾಗುವವರೆಗೂ ದೇವರನ್ನು ಹೊತ್ತು ಕುಣಿದು ಕುಪ್ಪಳಿಸುತ್ತಾರೆ. ದಸರಾ ಆರಂಭದ ದಿನದಿಂದ ನಿತ್ಯ ರಾತ್ರಿ ದೇವಸ್ಥಾನದಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ಹತ್ತು ದಿನ ಗ್ರಾಮದಲ್ಲಿ ಯಾರ ಮನೆಯಲ್ಲಿಯೂ ಅಡುಗೆ ಮಾಡುವುದಿಲ್ಲ. ಪ್ರತಿಯೊಬ್ಬರಿಗೂ ದೇವಸ್ಥಾನದ ಬಳಿ ಪ್ರಸಾದ ರೂಪದಲ್ಲಿ ಭರ್ಜರಿ ಔತಣ ಕೊಡುತ್ತಾರೆ.

ದಸರಾ ಮಹೋತ್ಸವವನ್ನು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹತ್ತು ದಿನ ರಾತ್ರಿ ಪ್ರತಿ ಗ್ರಾಮಸ್ಥರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಸಾದ ಪಡೆಯುತ್ತಾರೆ.
ದರ್ಶನ್ ಹಳೆ ಆಲೂರು ಗ್ರಾಮಸ್ಥ
ರಂಗನಾಥಸ್ವಾಮಿಗೆ ಒಂಬತ್ತು ದಿನ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಎಲ್ಲರೂ ಭಾಗವಹಿಸುವುದು ವಿಶೇಷ.
ಶಂಕರ್ ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT