ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಅಪೌಷ್ಟಿಕತೆ ಸುಳಿಯಲ್ಲಿ 510 ಮಕ್ಕಳು: ಸ್ಯಾಮ್– ಮ್ಯಾಮ್ ಮಾಹಿತಿ

l3 ವರ್ಷದೊಳಗಿನ ಮಕ್ಕಳು ಹೆಚ್ಚು -ಸ್ಯಾಮ್– ಮ್ಯಾಮ್ ಮಾಹಿತಿ-ಪುನರ್ವಸತಿ ಕೇಂದ್ರದಲ್ಲಿ ಆರೈಕೆ
Published 9 ಜುಲೈ 2024, 5:28 IST
Last Updated 9 ಜುಲೈ 2024, 5:28 IST
ಅಕ್ಷರ ಗಾತ್ರ

ಹಾವೇರಿ: ರಕ್ತ ಸಂಬಂಧದಲ್ಲಿ ಮದುವೆ, ಪೌಷ್ಟಿಕಾಂಶ ಆಹಾರ ಕೊರತೆ ಸೇರಿ ಹಲವು ಕಾರಣಗಳಿಂದಾಗಿ ಜಿಲ್ಲೆಯ 510 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಲವು ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಇಂಥ ಮಕ್ಕಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ಅಪೌಷ್ಟಿಕ ಮಕ್ಕಳನ್ನು ಗುರುತಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕೆಲ ಮಾರ್ಗಸೂಚಿಗಳನ್ನು ರೂಪಿಸಿದೆ. ಅವುಗಳ ಅನ್ವಯ ಮಕ್ಕಳ ವಯಸ್ಸು, ತೂಕ ಹಾಗೂ ಇತರೆ ಆಧಾರದ ಮೇಲೆ ಗ್ರೇಡ್ ಮಾಡಲಾಗುತ್ತಿದೆ.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸ್ಯಾಮ್ (ಸಿವಿಯರ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌) ಹಾಗೂ ಸಾಧಾರಣ ಅಪೌಷ್ಟಿಕತೆಯುಳ್ಳ ಮಕ್ಕಳನ್ನು ಮ್ಯಾಮ್ (ಮಾಡರೇಟ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌) ಎಂದು ಗುರುತಿಸಲಾಗುತ್ತಿದೆ. ಮಕ್ಕಳ ಗುರುತಿಸುವಿಕೆ ಹಾಗೂ ಆರೈಕೆಗೆ ಸಂಬಂಧಪಟ್ಟ ಕೆಲವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಿಕೊಳ್ಳುತ್ತಿದೆ.

ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಮಕ್ಕಳ ಎತ್ತರಕ್ಕೆ ತಕ್ಕಂತೆ ತೂಕ ಹಾಗೂ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದೇ ಆಧಾರದಲ್ಲಿ ಸ್ಯಾಮ್ ಹಾಗೂ ಮ್ಯಾಮ್ ಮಕ್ಕಳನ್ನು ವಿಭಾಗಿಸಿ, ಪುನರ್ವಸತಿ ಕೇಂದ್ರದಲ್ಲಿ ಆರೈಕೆಗೆ ಕಳುಹಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ 99 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸಾಧಾರಣ ಅಪೌಷ್ಟಿಕತೆಯುಳ್ಳ 411 ಮಕ್ಕಳಿದ್ದಾರೆ. ಈ ಪೈಕಿ ಬಹುತೇಕ ಮಕ್ಕಳಿಗೆ ಆಯಾ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕೇಂದ್ರದಲ್ಲಿ ಪೌಷ್ಟಿಕ ಆಹಾರದ ಸಮೇತ ಆರೈಕೆ ಮಾಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

'ಜಿಲ್ಲೆಯಲ್ಲಿ 1991 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷ ವಯೋಮಾನದವರೆಗಿನ ಮಕ್ಕಳ ತೂಕ ಮತ್ತು ಬೆಳವಣಿಗೆ ಸಂಬಂಧ ಪ್ರತಿ ವರ್ಷವೂ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರ್ಷವೂ ಮೇ 2024ರವರೆಗೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ’ ಎಂದು ತಿಳಿಸಿದರು.

3 ವರ್ಷದೊಳಗಿನ ಮಕ್ಕಳು ಹೆಚ್ಚು: ‘ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ 6 ತಿಂಗಳಿನಿಂದ 3 ವರ್ಷದೊಳಗೆ ಮಕ್ಕಳು ಹೆಚ್ಚಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ತೀವ್ರ ಅಪೌಷ್ಟಿಕತೆಯ 99 ಮಕ್ಕಳ ಪೈಕಿ, 6 ತಿಂಗಳಿನಿಂದ 3 ವರ್ಷದೊಳಗಿನ 55 ಮಕ್ಕಳಿದ್ದಾರೆ. ಮೂರು ವರ್ಷದಿಂದ 5 ವರ್ಷದೊಳಗಿನ 41 ಮಕ್ಕಳು ಹಾಗೂ 5 ವರ್ಷದಿಂದ 6 ವರ್ಷದೊಳಗಿನ 3 ಮಕ್ಕಳಿದ್ದಾರೆ’ ಎಂದರು.

‘ಸಾಧಾರಣ ಅಪೌಷ್ಟಿಕತೆಯ 411 ಮಕ್ಕಳ ಪೈಕಿ 6 ತಿಂಗಳಿನಿಂದ 3 ವರ್ಷದೊಳಗಿನ 185 ಮಕ್ಕಳಿದ್ದಾರೆ. ಮೂರು ವರ್ಷದಿಂದ 5 ವರ್ಷದೊಳಗಿನ 195 ಮಕ್ಕಳು ಹಾಗೂ 5 ವರ್ಷದಿಂದ 6 ವರ್ಷದೊಳಗಿನ 31 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದರು.

’ಮನೆಯಲ್ಲಿ ಮಕ್ಕಳ ಆರೈಕೆ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇದರಿಂದಾಗಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ.

ಅಪೌಷ್ಟಿಕತೆಗೆ ಕಾರಣ
ಅವಧಿಪೂರ್ವ ಹೆರಿಗೆ, ಹುಟ್ಟು ನ್ಯೂನತೆ, ಕಡಿಮೆ ತೂಕ, ಸೋಂಕು, ಶುದ್ಧ ನೀರು ಹಾಗೂ ಆಹಾರದ ಕೊರತೆ, ನೈರ್ಮಲ್ಯ ಸಮಸ್ಯೆ, ಪೋಷಕರಲ್ಲಿ ಮಕ್ಕಳ ಪಾಲನೆಯ ತಿಳಿವಳಿಕೆ ಇಲ್ಲದಿರುವುದು, ಗರ್ಭಿಣಿಯರಲ್ಲಿನ ರಕ್ತಹೀನತೆ, ಒಂದು ಹೆರಿಗೆಗೂ ಮತ್ತೊಂದು ಹೆರಿಗೆಗೂ ಹೆಚ್ಚಿನ ಅಂತರ ಇಲ್ಲದಿರುವುದು
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಅಹಾರ ಹಾಗೂ ಚಿಕಿತ್ಸೆ ಲಭ್ಯವಿದೆ. ಕೆಲ ಮಕ್ಕಳು ಕಾಯಂ ಆರೋಗ್ಯ ಸಮಸ್ಯೆ ಎದುರಿಸುತ್ತಿರುತ್ತವೆ. ಇಂಥ ಪ್ರಕರಣಗಳಲ್ಲಿ ಮಕ್ಕಳ ಜೀವಕ್ಕೆ ಅಪಾಯ ಹೆಚ್ಚು.
ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT