ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾ.ಪಂ. ನೌಕರರು–ಅಧ್ಯಕ್ಷ, ಸದಸ್ಯರ ಪ್ರತಿಭಟನೆ

Published : 8 ಅಕ್ಟೋಬರ್ 2024, 16:22 IST
Last Updated : 8 ಅಕ್ಟೋಬರ್ 2024, 16:22 IST
ಫಾಲೋ ಮಾಡಿ
Comments

ಹಾವೇರಿ: ‘ಸಮರ್ಪಕ ವೇತನ ಹಾಗೂ ಇತರೆ ಸೌಲಭ್ಯ ಒದಗಿಸಬೇಕು’ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಹಾಗೂ ಅಧ್ಯಕ್ಷರು–ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ನೌಕರರು ಹಾಗೂ ಸದಸ್ಯರು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹುದ್ದೆಯನ್ನು ಗ್ರೂಪ್– ‘ಬಿ’ಗೆ ಉನ್ನತೀಕರಿಸಬೇಕು. ಏಳು ವರ್ಷ ಪೂರೈಸಿದ ಪಿಡಿಒಗಳನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈ ಬಿಡಬೇಕು. ಅರ್ಹರಿಗೆ ಬಡ್ತಿ ನೀಡಬೇಕು. ಕುಂದು ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಕರ ವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ನೀರಘಂಟಿ, ಜವಾನರು, ಸ್ವಚ್ಛತಾಗಾರರ ವೇತನ ಶ್ರೇಣಿ ಮತ್ತು ಸೇವಾ ಹಿರಿತನದ ವೇತನವನ್ನು ಜಾರಿ ಮಾಡಬೇಕು. ಕಾರ್ಮಿಕ ಇಲಾಖೆಯ ವೇತನವನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವೇತನ ನಿಗದಿಪಡಿಸಿ ನೌಕರರ ಖಾತೆಗಳಿಗೆ ಸಂಬಳ ಪಾವತಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಗ್ರಾ.ಪಂ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಗರಿಷ್ಠ ₹ 5 ಲಕ್ಷ ಆರೋಗ್ಯ ವಿಮೆ ಜಾರಿ ಮಾಡಬೇಕು. ನಿವೃತ್ತಿ ಉಪಧನವನ್ನು 60 ತಿಂಗಳ ವೇತನದ ಮೊತ್ತವಾಗಿ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ಆಹ್ವಾನಿಸುವುದನ್ನು ಕಡ್ಡಾಯಗೊಳಿಸಬೇಕು. ವಿಧಾನಸೌಧ, ಸರ್ಕಾರಿ ಕಚೇರಿಗಳು ಹಾಗೂ ಟೋಲ್‌ಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು. ಉಚಿತ ಬಸ್ ಪಾಸ್ ನೀಡಬೇಕು. ಗ್ರಾ.ಪಂ. ಅಧ್ಯಕ್ಷರಿಗೆ ₹ 15 ಸಾವಿರ, ಉಪಾಧ್ಯಕ್ಷರಿಗೆ ₹ 12 ಸಾವಿರ ಹಾಗೂ ಸದಸ್ಯರಿಗೆ ₹ 10 ಸಾವಿರ ಹೆಚ್ಚಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT