ಕೃಷಿ ಕೆಲಸಕ್ಕಿಲ್ಲ ಜನ
ಕೆಲ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಅಗತ್ಯತೆ ಇತ್ತು. ಹಳ್ಳಿಯಲ್ಲಿದ್ದ ಬಹುತೇಕ ಜನರು, ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಕೃಷಿ ಕೆಲಸ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೆಲವರು, ಗ್ರಾಮ ತೊರೆದು ನಗರದಲ್ಲಿರುವ ಕಾರ್ಖಾನೆ ಸೇರುತ್ತಿದ್ದಾರೆ. ಇದರಿಂದಾಗಿ ಗ್ರಾಮಗಳಲ್ಲಿ ಕೃಷಿ ಕೆಲಸ ಮಾಡಲು ಜನರು ಸಿಗುತ್ತಿಲ್ಲ.
‘ನಾಲ್ಕು ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದೇನೆ. ಕೆಲ ವರ್ಷಗಳ ಹಿಂದೆ, ಕಾರ್ಮಿಕರನ್ನು ಬಳಸಿಕೊಂಡು ಕಟಾವು ಮಾಡಿಸುತ್ತಿದ್ದೆ. ಆದರೆ, ಈಗ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಯಂತ್ರ ಬಳಸಿ ಕಟಾವು ಮಾಡಿಸುತ್ತಿದ್ದೇವೆ’ ಎಂದು ಕುರುಬರಮಲ್ಲೂರಿನ ರೈತ ರಾಮಣ್ಣ ಹೇಳಿದರು.