ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

108 ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ದಾರಿ‌ ಮಧ್ಯೆ ಪ್ರಸವ; ನವಜಾತ ಶಿಶು ಸಾವು

Published 7 ಆಗಸ್ಟ್ 2024, 6:02 IST
Last Updated 7 ಆಗಸ್ಟ್ 2024, 6:02 IST
ಅಕ್ಷರ ಗಾತ್ರ

ಚಿಂಚೋಳಿ: ತುರ್ತು ಸೇವೆಯ 108 ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗರ್ಭಿಣಿಗೆ ದಾರಿ ಮಧ್ಯೆ ಹೆರಿಗೆಯಾಗಿ, ನವಜಾತಶಿಶು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಸುಲೇಪೇಟ ನಿವಾಸಿ ಶಿಲ್ಪಾ ಸಿದ್ದಪ್ಪ ಬುಗುಡಿ ಅವರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆ ನೋವಿನ ತಪಾಸಣೆಗೆ ಸೋಮವಾರ ಬಂದಿದ್ದರು. ವೈದ್ಯರು ಮತ್ತು ಸಿಬ್ಬಂದಿ ಗರ್ಭಿಣಿಯ ತಪಾಸಣೆ ನಡೆಸಿ, ಹೊಟ್ಟೆಯಲ್ಲಿ ಶಿಶು ತಿರುಗಿದ್ದು ಗಮನಕ್ಕೆ ಬಂದಿದ್ದರಿಂದ ತಕ್ಷಣವೇ ಕಲಬುರಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಶಿಲ್ಪಾ ಅವರಿಗೆ ಇದು ಎರಡನೇ ಹೆರಿಗೆಯಾಗಿದೆ. ಮೊದಲ ಹೆರಿಗೆ ಸಾಮಾನ್ಯವಾಗಿದ್ದು ಹೆಣ್ಣು ಶಿಶುವಿದೆ. ಆದರೆ, ಎರಡನೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶಿಲ್ಪಾ ಅವರನ್ನು ಆಸ್ಪತ್ರೆಗೆ ಬಂದಾಗ ಕಲಬುರಗಿಗೆ ಕಳುಹಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

ಎಲ್ಲಾ ಆಂಬುಲೆನ್ಸ್‌ಗಳು ಸುಲೇಪೇಟ, ಕೋಡ್ಲಿ, ಕಾಳಗಿ, ಮಾಡಬೂಳ ಕ್ರಾಸ್ ಮೂಲಕ ಕಲಬುರಗಿ ತೆರಳುತ್ತವೆ. ಈ‌ ಮಾರ್ಗದಲ್ಲಿ ಸಂಚರಿಸಿದರೆ 5 ರಿಂದ 8 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಜತೆಗೆ ರಸ್ತೆಯೂ ಚನ್ನಾಗಿದೆ. ಆದರೆ, 108 ಸಿಬ್ಬಂದಿ ಸುಲೇಪೇಟ, ಕೋಡ್ಲಿ ಮಾರ್ಗವಾಗಿ ರಟಕಲ್ ತೆರಳಿ ಅಲ್ಲಿ ಆಂಬುಲೆನ್ಸ್ ಬದಲಾಯಿಸಿ ಬೇರೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆ. ಅಲ್ಲಿಂದ ಮಹಾಗಾಂವ್ ಕ್ರಾಸ್ ದಾಟಿದ ಮೇಲೆ ಪ್ರಸವ ವೇದನೆ ಹೆಚ್ಚಾಗಿದೆ. ಬೇರೊಂದು ಆಂಬುಲೆನ್ಸ್ ಕರೆಸಿದ್ದಾರೆ. ಅಷ್ಟರಲ್ಲಿಯೇ ಹೆರಿಗೆಯಾಗಿ ಮಗು ಸಾವನ್ನಪ್ಪಿದೆ. ಇದಕ್ಕೆ 108 ಸಿಬ್ಬಂದಿ ಮಾಡಿದ ನಿರ್ಲಕ್ಷ್ಯವೆ ಕಾರಣ ಎಂದು ಸಿದ್ದಪ್ಪ ಬುಗುಡಿ ಆರೋಪಿಸಿದ್ದಾರೆ.

ಮೂರು ಆಮಬುಲೆನ್ಸ್ ಬದಲಿಸಿದ್ದು, ರಸ್ತೆ ಸರಿಯಿಲ್ಲದಿದ್ದರೂ ರಟಕಲ್- ಮಹಾಗಾಂವ್ ಮಾರ್ಗವಾಗಿ ತೆರಳಿದ್ದಾರೆ. ಶಿಲ್ಪಾಗೆ 7 ತಿಂಗಳಲ್ಲಿಯೇ ಹೆರಿಗೆಯಾಗಿದೆ. ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ನನ್ನ ಪತ್ನಿಯನ್ನು ಚಿಂಚೋಳಿಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದೇನೆ. ಚಿಂಚೋಳಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು ವೈದ್ಯರಿಗೆ ತೋರಿಸಿದಾಗ ವೈದ್ಯರು ಮಗು ಆರೋಗ್ಯವಾಗಿದೆ. ಬೆಳವಣಿಗೆ ಚೆನ್ನಾಗಿದೆ ಎಂದಿದ್ದರು. ಆದರೆ, ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಮತ್ತು 108 ಸಿಬ್ಬಂದಿಯ ನಿರ್ಲಕ್ಷ್ಯದಿಂದ ನನ್ನ ಮಗುವನ್ನು ಕಳೆದುಕೊಂಡಿದ್ದೇನೆ ಎಂದು ದೂರಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು, ವೈದ್ಯರು ಹಾಗೂ 108 ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕು. ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಭಾರತೀಯ ದಲಿತ ಪ್ಯಾಂಥರ ಮುಖಂಡ ರುದ್ರಮುನಿ ರಾಮತೀರ್ಥ ಎಚ್ಚರಿಕೆ ನೀಡಿದ್ದಾರೆ.

108 ಆಂಬುಲೆನ್ಸ್ ಸೇವೆ ಎಲ್ಲರಿಗೂ ನಿಗದಿತ ಸಮಯಕ್ಕೆ ಲಭ್ಯವಾಗುವಂತಾಗಲು ಮಾರ್ಗಮಧ್ಯೆ ಆಂಬುಲೆನ್ಸ್ ಬದಲಿಸಿದ್ದಾರೆ. ಅವಧಿ‌ಪೂರ್ವ ಪ್ರಸವದಲ್ಲಿ ಶಿಶು ಬದುಕುವುದು ವಿರಳ. ಆದರೆ ತಾಯಿ ಜೀವಕ್ಕೆ ಯಾವುದೇ ಅಪಾಯ ಎದುರಾಗಿಲ್ಲ. ತಾಯಿ ಆರೋಗ್ಯವಾಗಿದ್ದಾರೆ ಎಂದು ಚಿಂಚೋಳಿ ಟಿಎಚ್‌ಒ ಡಾ. ಮಹಮದ್ ಗಫಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT