ಪಾಲಿಕೆಯ ವಿವಿಧ ಕಾರ್ಯಗಳನ್ನು ಕೈಗೊಳ್ಳಲು ಗುತ್ತಿಗೆದಾರರ ಮಧ್ಯಸ್ಥಿಕೆ ಇಲ್ಲದ ಜಿಲ್ಲಾಧಿಕಾರಿ ನೇತೃತ್ವದ ಸಹಕಾರ ಸಂಘದ ಮಾದರಿಯಲ್ಲಿ ಕಾರ್ಮಿಕರ ಸೇವೆ ಪಡೆಯುವ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಮೇಯರ್ ಯಲ್ಲಪ್ಪ ನಾಯಕೊಡಿ ಅವರು ಆಡಿದ ಮಾತು ಆಡಳಿತ ಪಕ್ಷದ ನಾಯಕ ಶೇಖ್ ಅಜ್ಮಲ್ ಅಹ್ಮದ್ ಅಫ್ಜಲ್ ಗೋಲಾ ಹಾಗೂ ವಿರೋಧ ಪಕ್ಷದ ನಾಯಕ ಸಚಿನ್ ಹೊನ್ನಾ ಅವರನ್ನು ರೊಚ್ಚಿಗೆಬ್ಬಿಸಿತು. ಮೇಯರ್ ಮಾತು ಕೇಳಿ ವಿರೋಧ ಪಕ್ಷದ ಇತರ ಸದಸ್ಯರೂ ಬೇಸರಗೊಂಡರು. ಸಹಕಾರ ಸಂಘವನ್ನು ರಚಿಸುವ ಬಗ್ಗೆ ನಿರ್ಣಯ ಅಂಗೀಕರಿಸುವ ನಡವಳಿಯನ್ನು ದಾಖಲಿಸುವಂತೆ ಮೇಯರ್ ಪರಿಷತ್ ಕಾರ್ಯದರ್ಶಿಗೆ ಸೂಚಿಸಿದರು. ಇದನ್ನು ಆಕ್ಷೇಪಿಸಿದ ಅಹ್ಮದ್ ಅಫ್ಜಲ್ ಗೋಲಾ ‘ಯಾರು ಇದಕ್ಕೆ ಒಪ್ಪಿದ್ದಾರೋ ಅವರಿಗೆ ಕೈ ಎತ್ತಲು ಹೇಳಿ’ ಎಂದು ಪಟ್ಟು ಹಿಡಿದರು. ಇದರಿಂದ ಇರುಸು ಮುರುಸುಗೊಂಡ ಮೇಯರ್ ‘ನನ್ನ ಅಧಿಕಾರ ಬಳಸಿ ಈ ನಿರ್ಣಯ ತೆಗೆದುಕೊಂಡಿದ್ದೇನೆ. ನೀವೇನೂ ಆಡಳಿತ ಪಕ್ಷದ ಸದಸ್ಯರಲ್ಲ’ ಎಂದರು. ‘ಸಚಿನ್ ಅವರನ್ನು ಉದ್ದೇಶಿಸಿ ನೀವೂ ವಿರೋಧ ಪಕ್ಷದ ನಾಯಕರಲ್ಲ. ಈ ಬಗ್ಗೆ ಇನ್ನೂ ಸಭೆಯಲ್ಲಿ ನಿರ್ಣಯ ಅಂಗೀಕರಿಸಿಲ್ಲ’ ಎಂದರು. ಇದರಿಂದ ರೊಚ್ಚಿಗೆದ್ದ ಗೋಲಾ ‘ನಿಮ್ಮನ್ನು ಪಕ್ಷ ಹೇಗೆ ಮೇಯರ್ ಮಾಡಿದೆಯೋ ಹಾಗೆ ನನ್ನನ್ನೂ ಆಡಳಿತ ಪಕ್ಷದ ನಾಯಕನನ್ನಾಗಿ ಮಾಡಿದೆ’ ಎಂದರು. ಸಚಿನ್ ಹೊನ್ನಾ ಮಾತನಾಡಿ ‘ಹಾಗಿದ್ದರೆ ವಿರೋಧ ಪಕ್ಷದ ನಾಯಕ ಎಂದು ನನ್ನ ಹೆಸರನ್ನು ಅಜೆಂಡಾ ಪ್ರತಿಯಲ್ಲಿ ಬರೆಯಲು ಹೇಳಿದವರು ಯಾರು’ ಎಂದು ಪರಿಷತ್ ಕಾರ್ಯದರ್ಶಿಗೆ ಪ್ರಶ್ನಿಸಿದರು. ಎರಡೂ ಪಕ್ಷಗಳಿಂದ ಬಂದ ಪತ್ರ ಆಧರಿಸಿ ಆಡಳಿತ ಪಕ್ಷ ವಿರೋಧ ಪಕ್ಷದ ನಾಯಕ ಎಂದು ಪರಿಗಣಿಸಿರುತ್ತೇವೆ. ಸಭೆಯಲ್ಲಿ ಘೋಷಿಸುವುದು ಒಂದು ಸಾಮಾನ್ಯ ಪ್ರಕ್ರಿಯೆಯಷ್ಟೇ ಎಂದು ಸ್ಪಷ್ಟಪಡಿಸಿದರು.
ಟೆಂಡರ್ ಮುಗಿದಿದ್ದರೂ ಶುಲ್ಕ ಹೇಗೆ ಸಂಗ್ರಹಿಸುತ್ತಾರೆ?
ಕಲಬುರಗಿ ನಗರದಲ್ಲಿನ ವಿವಿಧ ಕಮಾನುಗಳಲ್ಲಿ ಜಾಹೀರಾತು ಅಳವಡಿಕೆಗೆ ಪಾಲಿಕೆಯು ನಾಜ್ ಸಂಸ್ಥೆಗೆ ನೀಡಿದ್ದ ಅವಧಿ ಮುಕ್ತಾಯವಾಗಿದ್ದರೂ ಅಲ್ಲಿ ಜಾಹೀರಾತು ಅಳವಡಿಸಲು ಏಕೆ ಅನುಮತಿ ನೀಡುತ್ತಿದ್ದೀರಿ ಎಂದು ಸದಸ್ಯರು ಮೇಯರ್ ಅವರನ್ನು ಪ್ರಶ್ನಿಸಿದರು. ಬಿಜೆಪಿ ಸದಸ್ಯರಾದ ಶಿವಾನಂದ ಪಿಸ್ತಿ ಸಚಿನ್ ಹೊನ್ನಾ ಮಾತನಾಡಿ ‘ಪ್ರತಿ ವರ್ಷ ಹೊಸದಾಗಿ ಟೆಂಡರ್ ಕರೆಯಬೇಕು ಎಂಬ ನಿಯಮವಿದ್ದರೂ ಬೇಕಾಬಿಟ್ಟಿ ಮಾಡುತ್ತಿದ್ದೀರಿ. ಟೆಂಡರ್ ಮುಗಿದಿದ್ದರೂ ನಾಜ್ ಸಂಸ್ಥೆಯವರನ್ನೇ ಜಾಹೀರಾತು ಹಾಕುವವರು ಸಂಪರ್ಕಿಸಿ ಅವರಿಗೇ ಹಣ ನೀಡುತ್ತಿದ್ದಾರೆ. ಹಾಗಿದ್ದರೆ ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದೆಯೇ’ ಎಂದು ಪ್ರಶ್ನಿಸಿದರು. ಅನಧಿಕೃತವಾಗಿ ಹಾಕಲಾದ ಜಾಹೀರಾತು ತೆಗೆಯಲು ಕಾರ್ಮಿಕರ ಕೊರತೆ ಇದೆ ಎಂದು ಅಧಿಕಾರಿ ಹೇಳಿದಾಗ ‘ನಾವೇ ತೆರವುಗೊಳಿಸಲು ಬರುತ್ತೇವೆ. ಹೇಗೂ ಮಾಡಲು ಯಾವ ಕೆಲಸವೂ ಇಲ್ಲ’ ಎಂದು ಸಚಿನ್ ಹೊನ್ನಾ ಹೇಳಿದರು. ‘ಶುಕ್ರವಾರ ಮಧ್ಯಾಹ್ನದೊಳಗಾಗಿ ಜಾಹೀರಾತು ತೆರವುಗೊಳಿಸಿ ಅಲ್ಲಿ ಜಾಹೀರಾತುದಾರರ ಸಂಪರ್ಕಕ್ಕಾಗಿ ಪಾಲಿಕೆ ಅಧಿಕಾರಿಯ ಮೊಬೈಲ್ ಸಂಖ್ಯೆ ನೀಡಬೇಕು’ ಎಂದು ಮೇಯರ್ ನಿರ್ದೇಶನ ನೀಡಿದರು.
‘ಸೆಸ್ ಬೇರೆ ಉದ್ದೇಶಕ್ಕೆ ಏಕೆ ಬಳಸುತ್ತೀರಿ?’
ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹಿಸುವ ಸಂದರ್ಭದಲ್ಲಿ ಗ್ರಂಥಾಲಯ ಭಿಕ್ಷುಕರು ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಬಾಬ್ತುಗಳ ಹೆಸರಿನಲ್ಲಿ ಸೆಸ್ (ಉಪಕರ) ಸಂಗ್ರಹಿಸುತ್ತಿದ್ದು ಅದನ್ನು ಆ ಉದ್ದೇಶಕ್ಕೆ ಬಳಸುತ್ತಿದ್ದೀರಾ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯ ಸೈಯದ್ ಅಹ್ಮದ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸೆಸ್‌ಗಳನ್ನು ಸಾಮಾನ್ಯ ನಿಧಿಯಲ್ಲಿ ಹಾಕುತ್ತಿದ್ದು ಕೆಲವೊಮ್ಮೆ ತುರ್ತು ಅವಶ್ಯಕತೆಗಳಿಗೆ ಬಳಸಲಾಗುತ್ತದೆ ಎಂದರು. ಇದರಿಂದ ಕೆರಳಿದ ಸೈಯದ್ ಅಹ್ಮದ್ ‘ಗ್ರಂಥಾಲಯ ಇಲಾಖೆಯವರು ನೋಟಿಸ್ ಮೇಲೆ ನೋಟಿಸ್ ನೀಡಿದ ಬಳಿಕ ₹ 20 ಲಕ್ಷ ಕೊಡುತ್ತೀರಿ? ಭಿಕ್ಷುಕರ ಸೆಸ್‌ನಿಂದ ಒಬ್ಬ ಭಿಕ್ಷುಕನಿಗಾದರೂ ಅನುಕೂಲವಾಗಿದೆಯೇ? ಅಷ್ಟೂ ಸೆಸ್‌ಗಳಿಂದ ಸಂಗ್ರಹವಾದ ಹಣಕ್ಕೆ ಲೆಕ್ಕ ಇಡಲು ಪ್ರತ್ಯೇಕ ಖಾತೆ ನಿರ್ವಹಿಸಬೇಕು’ ಎಂದು ಮನವಿ ಮಾಡಿದರು. ಈ ಸಲಹೆ ಪರಿಗಣಿಸಿದ ಮೇಯರ್ ಅವರು ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಖಾತೆ ನಿರ್ವಹಿಸುವಂತೆ ಸೂಚಿಸಿದರು.