ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಬೆಳೆ ವಿಮೆಗೆ ರೈತರ ಉತ್ತಮ ಸ್ಪಂದನೆ

ಕಳೆದ ವರ್ಷಕ್ಕೆ ಹೋಲಿಸಿದರೆ ವಿಮೆಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 42 ಸಾವಿರದಷ್ಟು ಹೆಚ್ಚಳ
Published 16 ಆಗಸ್ಟ್ 2024, 15:47 IST
Last Updated 16 ಆಗಸ್ಟ್ 2024, 15:47 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಕೃಷಿ ಇಲಾಖೆಯ ಸತತ ಜಾಗೃತಿಯ ಫಲವಾಗಿ ಜಿಲ್ಲೆಯ ರೈತರು ಈ ವರ್ಷ ಬೆಳೆ ವಿಮೆ ನೋಂದಣಿಗೆ ಉತ್ತಮ ಸ್ಪಂದನೆ ತೋರಿದ್ದಾರೆ.

ಜಿಲ್ಲೆಯಲ್ಲಿ ಈ ಸಲ ಮುಂಗಾರಿನಲ್ಲಿ ತೊಗರಿ, ಮುಸುಕಿನ ಜೋಳ, ಜೋಳ, ಸಜ್ಜೆ, ಉದ್ದು, ಹೆಸರು, ಸೋಯಾಬಿನ್‌, ಎಳ್ಳು, ನೆಲಗಡಲೆ, ಹತ್ತಿ ಸೇರಿದಂತೆ ಹಲವು ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಜುಲೈ 31ರ ತನಕ ಅವಕಾಶವಿತ್ತು. ಈ ಅವಧಿಯಲ್ಲಿ ರೈತರಿಂದ ಬೆಳೆ ವಿಮೆ ನೋಂದಣಿಗೆ 2,04,378 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಳೆ ವಿಮೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಳೆದ ವರ್ಷ ಬರೀ 1.62 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರು.

ಅಗ್ರಸ್ಥಾನದಲ್ಲಿ ಆಳಂದ:

ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿಯಲ್ಲಿ ಆಳಂದ ತಾಲ್ಲೂಕಿನ ಅನ್ನದಾತರು ಮೊದಲ ಸ್ಥಾನದಲ್ಲಿದ್ದಾರೆ. ತಾಲ್ಲೂಕಿನಲ್ಲಿ 63,547 ಅರ್ಜಿಗಳು ಸಲ್ಲಿಕೆಯಾಗಿದ್ದು, ರೈತರು ₹5.03 ಕೋಟಿ ವಿಮಾ ಕಂತು ಪಾವತಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಸೇಡಂ ತಾಲ್ಲೂಕಿನ ರೈತರಿದ್ದು, 22,636 ಅರ್ಜಿಗಳು ಸಲ್ಲಿಕೆಯಾಗಿವೆ. ಮೂರನೇ ಸ್ಥಾನದಲ್ಲಿ ಕಲಬುರಗಿ ತಾಲ್ಲೂಕಿದ್ದು, 21,883 ಅರ್ಜಿಗಳು ಸಲ್ಲಿಕೆಯಾಗಿವೆ.  ಶಹಾಬಾದ್‌ ತಾಲ್ಲೂಕು 2,709 ಅರ್ಜಿಗಳೊಂದಿಗೆ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಒಟ್ಟಾರೆ ರೈತರಿಂದ ಬೆಳೆ ವಿಮೆ ನೋಂದಣಿಗೆ 2.04 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 2.38 ಲಕ್ಷ ಹೆಕ್ಟೇರ್‌ ಜಮೀನು ಈ ಸಲ ಬೆಳೆ ವಿಮೆಗೆ ಒಳಪಟ್ಟಿದೆ. ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿದಂತೆ ಒಟ್ಟು ₹55.61 ಕೋಟಿ ವಿಮಾ ಕಂಪನಿಗೆ ಕಂತು ಪಾವತಿಸಲಾಗಿದೆ.

ಪರಿಹಾರ ಸಿಕ್ಕ ಫಲ:

‘ಕಳೆದೆರಡು ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಯಾದ ವಿವಿಧ ಬೆಳೆಗಳಿಗೆ ವಿಮಾ ಕಂಪನಿಗಳಿಂದ ₹300 ಕೋಟಿಗಳಷ್ಟು ಪರಿಹಾರ ಜಿಲ್ಲೆಯ ಅನ್ನದಾತರಿಗೆ ಸಿಕ್ಕಿದೆ. ಹೀಗಾಗಿ ಸಹಜವಾಗಿಯೇ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

‘ಉತ್ತಮ ಸ್ಪಂದನೆ; ರಾಜ್ಯದಲ್ಲಿ 2ನೇ ಸ್ಥಾನ’
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಬೆಳೆ ವಿಮೆ ನೋಂದಣಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು ಕಲಬುರಗಿ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ. ಈ ಸಲ ಜಿಲ್ಲೆಯ 3 ಲಕ್ಷ ರೈತರಿಂದ ಬೆಳೆ ವಿಮೆ ನೋಂದಣಿ ಮಾಡಿಸುವ ಗುರಿ ಹೊಂದಲಾಗಿತ್ತು. ಸದ್ಯ 2.04 ಸಾವಿರ ಅರ್ಜಿಗಳು ಬೆಳೆ ವಿಮೆಗೆ ಸಲ್ಲಿಕೆಯಾಗಿದೆ. ಬ್ಯಾಂಕ್‌ಗಳ ಕಡೆಯಿಂದ ಇನ್ನಷ್ಟು ಬೆಂಬಲ ದೊರೆತ್ತಿದ್ದರೆ ಜಿಲ್ಲೆಯ ಮತ್ತಷ್ಟು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬಹುದಿತ್ತು’ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT