ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಜನ ಕಂಗಾಲು

ಎರಡು ವರ್ಷ ಎಂಟು ತಿಂಗಳ ಅವಧಿಯಲ್ಲಿ ಒಟ್ಟು 5,257 ನಾಯಿ ಕಚ್ಚಿದ ಪ್ರಕರಣ ದಾಖಲು
Published : 21 ಸೆಪ್ಟೆಂಬರ್ 2024, 5:37 IST
Last Updated : 21 ಸೆಪ್ಟೆಂಬರ್ 2024, 5:37 IST
ಫಾಲೋ ಮಾಡಿ
Comments

ಕಲಬುರಗಿ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೈಯಲ್ಲ ಗಾಯ, ಮುಖದ ತುಂಬೆಲ್ಲ ರಕ್ತ, ಕಣ್ಣುಗುಡ್ಡೆ ಕಿತ್ತು ಬಂದಂತ ಸ್ಥಿತಿ, ನೋವು, ಯಾತನೆ, ಸುಮಾರು 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಇದು ಶಹಾಬಾದ್‌ ನಗರದ ರಾಮಮೊಹಲ್ಲಾ ಬಡಾವಣೆಯಲ್ಲಿ ಈಚೆಗೆ ನಡೆದ ಘಟನೆ, ನಗರದ ಬಸವೇಶ್ವರ ಕಾಲೊನಿಯಲ್ಲಿ ರಸ್ತೆಯ ಮೇಲೆ ಬೈಕ್‌ನಲ್ಲಿ ಹೊರಟ ಯುವಕನಿಗೆ ಬೆನ್ನತ್ತಿದ್ದರಿಂದ ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯ, ಮನೆಯ ಮುಂದೆ ಆಟವಾಡುವ ಮಗುವಿಗೆ ಕಚ್ಚಿ ಗಾಯ, ಬೈಕ್‌ ಸವಾರರು ಬಡಾವಣೆಯಲ್ಲಿ ಹಾದು ಹೋಗುತ್ತಿದ್ದರೆ ಬೆನ್ನು ಬೀಳುವ ನಾಯಿಗಳ ಹಿಂಡು, ಶಾಲೆಯಿಂದ ಮನೆಗೆ ಹೊರಟಾಗ ನಾಯಿಗಳ ಹಿಂಡು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಪ್ರಸಂಗ...

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿದಿನ ಬೀದಿ ನಾಯಿ ಕಡಿತ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಜಾಣ ಮೌನವಹಿಸಿದ್ದಾರೆ. ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಬೀದಿನಾಯಿಗಳ ಹಿಂಡು ಕಾಣಸಿಗುವುದು ಸಾಮಾನ್ಯವಾಗಿದೆ.

‌ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದಾಗ 2022ರಲ್ಲಿ 2,105, 2023ರಲ್ಲಿ 1,447, 2024ರ ಆಗಸ್ಟ್ ಅಂತ್ಯದವರೆಗೆ 1,705 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.

ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮತಕ್ಷೇತ್ರ ಚಿತ್ತಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ 1,200ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿವೆ. ಆರೋಗ್ಯ ಇಲಾಖೆಗೆ ಸಲ್ಲಿಕೆಯಾದ ದೂರುಗಳು ಇವು. ದಿನನಿತ್ಯ ಜಿಲ್ಲೆಯ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ನಾಯಿ ಕಡಿತ ಪ್ರಕರಣ ಸಾಮಾನ್ಯ, ಆದರೆ ಪ್ರಕರಣಗಳು ದಾಖಲಾಗುವುದು ಕಡಿಮೆ.

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿಂದಿನ ಗಣತಿಯ ಪ್ರಕಾರ ಜಿಲ್ಲೆಯಲ್ಲಿ 26,252 ನಾಯಿಗಳು ಇವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಕಳೆದ ನಾಲ್ಕು ವರ್ಷಗಳಿಂದ ಗಣತಿ ನಡೆದಿಲ್ಲ. ಈಗ ಮತ್ತೆ ಗಣತಿ ಆರಂಭವಾಗಿದೆ.

‘ನಾಯಿ ಕಡಿದಾಗ ಆಸ್ಪತ್ರೆಗಳಿಗೆ ಭೇಟಿ ನೀಡಿ ಉಪಚರಿಸಿಕೊಳ್ಳುತ್ತಾರೆ. ಅಷ್ಟಕ್ಕೇ ಪ್ರಕರಣ ಮುಗಿಯಿತು ಎನ್ನುವುದು ಸಂಬಂಧಿಸಿದ ಇಲಾಖೆ ವಾದವಾಗಿದೆ. ನಾಯಿಗಳ ಹಾವಳಿ ನಿಯಂತ್ರಿಸಲು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಂಬಂಧಿಸಿದ ಅಧಿಕಾರಿಗಳು ಎಬಿಸಿ ಲಸಿಕೆ ಹಾಕಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯ ಆಗುತ್ತಿಲ್ಲ. ಬೀದಿನಾಯಿಗಳು ಹೆಚ್ಚಾಗಿ ಜನರು ಬಡಾವಣೆಗಳಲ್ಲಿ ಭಯದಲ್ಲಿ ತಿರುಗಾಡುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಮಹಾದೇವ ನಗರ ನಿವಾಸಿ ಗಣೇಶ.

‘ಪಶು ಸಂಗೋಪನಾ ಇಲಾಖೆ ವತಿಯಿಂದ ನಗರದಲ್ಲಿರುವ ಬೀದಿನಾಯಿಗಳ ಗಣತಿ ನಡೆಯುತ್ತಿದೆ. ಈ ವರ್ಷದ ಆಗ‌ಸ್ಟ್‌ವರೆಗೆ ನಗರದಲ್ಲಿ 35 ಜನರಿಗೆ ಬೀದಿ ನಾಯಿಗಳು ಕಡಿದ ಪ್ರಕರಣಗಳು ವರದಿಯಾಗಿವೆ. ಅವರಿಗೆ ₹ 5 ಸಾವಿರದಂತೆ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಕಳೆದ ವಾರ ನಾನು ಚಾರ್ಜ್‌ ತೆಗೆದುಕೊಂಡಿರುವುದರಿಂದ ಹಿಂದಿನ ಅಂಕಿಗಳ ಬಗ್ಗೆ ಮಾಹಿತಿ ಇಲ್ಲ. ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಮಹಾರಾಷ್ಟ್ರದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ನಗರದ ವಿವಿಧ ಬಡಾವಣೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ’ ಎಂದು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ರಾಜೇಂದ್ರ ಭಾಲ್ಕೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳ ಸ್ಥಳಾಂತರ ಮಾಡಿ ನಿವಾಸಿಗಳಿಗೆ ನೆಮ್ಮದಿ ಕಲ್ಪಿಸಬೇಕು
ವಿಶ್ವನಾಥ್, ಓಂ ನಗರ ನಿವಾಸಿ
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿ ಕಡಿದಾಗ ಬಳಸುವ ಇಂಜೆಕ್ಷನ್ ಲಭ್ಯವಿದೆ. ಕಡಿತದ ಎಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿ
ರೇಬಿಸ್‌ ತಡೆಯಲು ಅಭಿಯಾನ ನಡೆಸಿ ಜಿಲ್ಲೆಯಾದ್ಯಂತ ಈಗಾಗಲೇ ಶೇ 65ರಷ್ಟು ನಾಯಿಗಳಿಗೆ ಲಸಿಕೆಗಳನ್ನು ಹಾಕಿಸಲಾಗಿದೆ.
ಎಸ್.ಡಿ. ಅವಟಿ, ಪಶುಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT