ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಲೇಪೇಟ: ಸೋರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ, ವೈದ್ಯರಿಲ್ಲದೇ ರೋಗಿಗಳ ಪರದಾಟ

Published 1 ಜುಲೈ 2024, 5:49 IST
Last Updated 1 ಜುಲೈ 2024, 5:49 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ಸಮುದಾಯ ಆರೋಗ್ಯ ಕೇಂದ್ರವು ವೈದ್ಯರ ಕೊರತೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯೂ ಕಾಡುತ್ತಿದೆ. ಕಟ್ಟಡವು ಮಳೆಗಾಲದಲ್ಲಿ ಸೋರುವುದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಕಟ್ಟಡದ ಚಾವಣಿಯಿಂದ ಮೂರು ಕಡೆ ನೀರು ಹನಿಯುತ್ತಿದೆ. ಜತೆಗೆ ವಾರ್ಡ್‌ನಲ್ಲಿ ಹಾಸಿರುವ ಟೈಲ್ಸ್ ಕಿತ್ತು ಹೋಗಿವೆ. ಕಟ್ಟಡ 2 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, 2023ರಲ್ಲಿ ಉದ್ಘಾಟಿಸಲಾಗಿದೆ. ಸುಲೇಪೇಟ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಇದರಿಂದ ಹಗಲು ರಾತ್ರಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಕಾಯಂ ವೈದ್ಯರಿಲ್ಲದೇ ನಿಯೋಜನೆ ಮೇರೆಗೆ ಬಂದ ವೈದ್ಯರ ಸೇವೆ ಹಗಲು ಮಾತ್ರ ಪಡೆಯಲಾಗುತ್ತಿದೆ. ಆದರೆ ರಾತ್ರಿ ವೈದ್ಯರ ಸೇವೆ ಲಭ್ಯವಿಲ್ಲದ ಕಾರಣ ಜನರು ಚಿಂಚೋಳಿ ತಾಲ್ಲೂಕು ಆಸ್ಪತ್ರೆ ಇಲ್ಲವೇ ಕಲಬುರಗಿ ಜಿಮ್ಸ್‌ಗೆ ತೆರಳಬೇಕಾಗುತ್ತದೆ ಎಂದು ರೋಗಿಗಳು ದೂರಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದೆ. ಅದರಂತೆ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಹುದ್ದೆಗಳನ್ನು ಮಂಜೂರು ಮಾಡದ ಕಾರಣ ಸಿಎಚ್‌ಸಿ, ಆದರೂ ಪಿಎಚ್‌ಸಿಯಂತೆಯೇ ಕಾರ್ಯನಿರ್ವಹಿಸುತ್ತಿದೆ.

ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ. ವೈದ್ಯರ ಹುದ್ದೆ ಖಾಲಿ ಇರುವುದರಿಂದ ಮಂಡಗೋಳ ತಾಂಡಾದ ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯರನ್ನು ಸುಲೇಪೇಟ ಸಿಎಚ್‌ಸಿಗೆ ನಿಯೋಜಿಸಿದೆ. ಜತೆಗೆ ಕಾಳಗಿ ತಾಲ್ಲೂಕಿನ ಕೋಡ್ಲಿಯ ಆಯುಷ್ ವೈದ್ಯರನ್ನು ನಿಯೋಜಿಸಿ ಆಸ್ಪತ್ರೆ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಚಿಕ್ಕಪುಟ್ಟ ಕಾಯಿಲೆಗಳಿಗೂ ತಾಲ್ಲೂಕು ಆಸ್ಪತ್ರೆಗೆ ದೌಡಾಯಿಸುವಂತಾಗಿದೆ. ನಿಯೋಜನೆ ಮೇರೆಗೆ ಬಂದ ವೈದ್ಯರ ಸೇವೆಯೂ ಪರಿಣಾಮಕಾರಿಯಾಗಿ ಜನರಿಗೆ ಲಭಿಸುತ್ತಿಲ್ಲ. ಇದರಿಂದ ಜನರು ಆರೋಗ್ಯ ಕೇಂದ್ರ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿಗೆ ಚಿಕಿತ್ಸೆಗಾಗಿ ಕುಪನೂರ, ಹೊಡೇಬೀರನಹಳ್ಳಿ, ಕೊರಡಂಪಳ್ಳಿ, ಪೆಂಚನಪಳ್ಳಿ, ಯಾಕಾಪುರ, ಗರಕಪಳ್ಳಿ, ದಸ್ತಾಪುರ, ರಾಮತೀರ್ಥ, ಬೆಡಕಪಳ್ಳಿ, ಭಂಟನಳ್ಳಿ, ಕೆರೋಳ್ಳಿ, ಯಲಕಪಳ್ಳಿ, ಹೂವಿನಭಾವಿ, ರುಸ್ತಂಪುರ, ಪಸ್ತಪುರ, ಗಂಜಗೇರಿ, ಹಲಚೇರಾ, ಹೊಸಳ್ಳಿ, ಕೊರವಿ ಮೊದಲಾದ ಗ್ರಾಮಗಳ ಜನರು ಬರುತ್ತಿದ್ದಾರೆ. ಇದರಿಂದ ಆರೋಗ್ಯ ಕೇಂದ್ರದ ಮೇಲೆ ಕಾರ್ಯಭಾರದ ಒತ್ತಡವೂ ಹೆಚ್ಚಾಗಿದೆ. ಆದರೆ ವೈದ್ಯರಿಲ್ಲದೇ ರೋಗಿಗಳು ಬಸವಳಿಯುವಂತಾಗಿದೆ. ಜತೆಗೆ ವಿದ್ಯುತ್‌ ಕಡಿತವಾದರೆ ಆಸ್ಪತ್ರೆಯಲ್ಲಿರುವ ರೋಗಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕು. ಇನ್ವರ್ಟರ್‌ನಂತಹ ಕನಿಷ್ಠ ಸೌಲಭ್ಯವೂ ಆಸ್ಪತ್ರೆಯಲ್ಲಿ ಇಲ್ಲ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ರೋಗಿಗಳಿಗೆ ಶುದ್ಧ ನೀರಿನ ಕ್ಯಾನ್‌ ತಂದು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬರ ಎದುರಾಗಿತ್ತು. ಈಗ ಅದನ್ನು ನಿವಾರಿಸಲಾಗಿದೆ. ಆದಷ್ಟು ಬೇಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಹುದ್ದೆಗಳನ್ನು ಮಂಜೂರು ಮಾಡಿದರೆ, ಸಿಎಚ್‌ಸಿ ಈ ಭಾಗದ ಜನರಿಗೆ ವರದಾನವಾಗಲಿದೆ ಎಂದು ಯುವ ಮುಖಂಡ ಅಮರೇಶ ಗೋಣಿ ತಿಳಿಸಿದ್ದಾರೆ.

ಹೆಸರಿಗಷ್ಟೇ ಸಿಎಚ್‌ಸಿ ನಿರ್ಮಾಣವಾಗಿದ್ದು ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಚಿಕ್ಕಪುಟ್ಟ ಚಿಕಿತ್ಸೆಗೂ ಚಿಂಚೋಳಿಗೆ ತೆರಳಬೇಕಾಗಿದೆ. ಹಗಲು ರಾತ್ರಿ ವೈದ್ಯರ ಸೇವೆ ಲಭಿಸುವಂತೆ ಮಾಡಬೇಕು
ಮಲ್ಲಿಕಾರ್ಜುನ ಪಾಳ್ಯದ ಮುಖಂಡರು ಸುಲೇಪೇಟ
ಸುಲೇಪೇಟ ಸಿಎಚ್‌ಸಿಯಲ್ಲಿ ವೈದ್ಯರ ಕೊರತೆಯಿಂದ ಸಮಸ್ಯೆ ಎದುರಾಗಿತ್ತು. ಈಗ ನಿಯೋಜನೆ ಮೇರೆಗೆ ವೈದ್ಯರ ಸೇವೆ ಒದಗಿಸಲಾಗಿದೆ. ಸಿಎಚ್‌ಸಿ ಹುದ್ದೆಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಡಾ.ಮಹಮದ್ ಗಫಾರ ಟಿಎಚ್‌ಒ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT