ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ನಿರ್ವಹಣೆ ಕೊರತೆ; ಕುರಿ ದೊಡ್ಡಿಯಾದ ರೈತ ಭವನ

Published 17 ಜುಲೈ 2024, 6:06 IST
Last Updated 17 ಜುಲೈ 2024, 6:06 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ವೇಸ್ಟ್‌ವೇಯರ್ ಗೇಟ್ ಪಕ್ಕದ ಗುಡ್ಡದ ಮೇಲೆ ನಿರ್ಮಿಸಲಾಗಿರುವ ರೈತ ತರಬೇತಿ ಭವನವು ಪಾಳು ಬಿದ್ದಿದ್ದು, ಕುರಿ–ಮೇಕೆಗಳ ದೊಡ್ಡಿಯಾಗಿದೆ. 

ಅತಿಥಿಗೃಹ ಮಾದರಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕಟ್ಟಡವು ಅನಾಥವಾಗಿದ್ದು, ಅಸಮರ್ಪಕ ನಿರ್ವಹಣೆಯಿಂದ ಹಾಳಾಗುತ್ತಿದೆ.

ವಿಶ್ವಬ್ಯಾಂಕ್ ನೆರವಿನ ರಾಷ್ಟ್ರೀಯ ನೀರು ನಿರ್ವಹಣೆ ಯೋಜನೆ ಅಡಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು 2ನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ 1990–91ನೇ ಸಾಲಿನಲ್ಲಿ ನಿರ್ಮಿಸಿದ ರೈತ ತರಬೇತಿ ಭವನದ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ನಿರುಪಯುಕ್ತವಾಗಿದೆ.

ಚಂದ್ರಂಪಳ್ಳಿ ಸರ್ವೆ ನಂ.1ರಲ್ಲಿ ನಿರ್ಮಿಸಿದ ಕಟ್ಟಡ ಹೊಂದಿರುವ ಭೌಗೋಳಿಕ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಕಟ್ಟಡ ನೀರಾವರಿ ಇಲಾಖೆ ನಿರ್ಮಿಸಿದ್ದರಿಂದ ಅವರೇ ನಿರ್ವಹಣೆ ಮಾಡಬೇಕಿದೆ. ಆದರೆ ಇಲಾಖೆಯಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. 5 ವರ್ಷಗಳ ಹಿಂದೆ ಕಟ್ಟಡದ ನವೀಕರಣಕ್ಕೆ ₹45 ಲಕ್ಷ ಮಂಜೂರಾಗಿತ್ತು. ಟೆಂಡರ್ ಕರೆದು ಗುತ್ತಿಗೆದಾರರಿಂದ ಕೆಲಸ ಮಾಡಿಸಲಾಯಿತು. ಕಾವಲುಗಾರರು ಇಲ್ಲದಿರುವುದು ಮತ್ತು ಬಳಕೆಯಾಗದ ಕಾರಣ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದ್ದಲ್ಲದೇ ಮಳೆಗಾಲದಲ್ಲಿ ಕುರಿ–ಮೇಕೆಗಳಿಗೆ ಆಶ್ರಯ ತಾಣವಾಗಿದೆ.

ಕಟ್ಟಡದ ನೆಲಮಹಡಿಯಲ್ಲಿ ಸಭಾಂಗಣ, ಅಡುಗೆ ಮನೆ ಮತ್ತು ದಾಸ್ತಾನು ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಮೊದಲ ಮಹಡಿಯಲ್ಲಿ ಅತಿಥಿಗಳು ವಾಸಿಸುವಂತಹ ಸುಸಜ್ಜಿತ ಕೊಠಡಿಗಳಿವೆ. ಪ್ರತಿ ಕೊಠಡಿಗೆ ಹೊಂದಿ ಕೊಂಡಂತೆ ಶೌಚಾಲಯ, ಸ್ನಾನಗೃಹ ನಿರ್ಮಿಸಲಾಗಿದ್ದು, ಕೊಠಡಿಯ ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದರೆ ಚಂದ್ರಂಪಳ್ಳಿ ಜಲಾಶಯದ ನಯನ ಮನೋಹರ ದೃಶ್ಯ ಕಣ್ಮನಗಳಿಗೆ ಪುಳಕ ಉಂಟು ಮಾಡುತ್ತದೆ. ಇಲ್ಲಿ ಒಟ್ಟಿಗೆ 3 ಕುಟುಂಬಗಳು ತಂಗುವ ಮೂಲಕ ಪ್ರಕೃತಿಯ ಸವಿ ಸವಿಯಬಹುದಾಗಿದೆ.

ಸಮುದ್ರಮಟ್ಟದಿಂದ ಸುಮಾರು 6 ಮೀಟರ್ ಎತ್ತರದಲ್ಲಿ ನಿರ್ಮಿಸಿದ ಕಟ್ಟಡ ತಲುಪಲು ನೀರಾವರಿ ಇಲಾಖೆಯ ಪ್ರವಾಸಿ ಮಂದಿರದ ಪಕ್ಕದಿಂದ ಡಾಂಬರ್ ರಸ್ತೆಯಿದ್ದು, ನಿರ್ವಹಣೆಯಿಲ್ಲದೇ ರಸ್ತೆ ಹಾಳಾಗಿದೆ. ಗುಡ್ಡವನ್ನು ಕೊರೆದು ಸುತ್ತಲೂ ಡಾಂಬರ್ ರಸ್ತೆ ಮತ್ತು ತಡೆಗೋಡೆ ನಿರ್ಮಿಸಲಾಗಿದೆ.

ಬೈಕ್ ಮತ್ತು ಕಾರು ಜೀಪ್‌ಗಳಲ್ಲಿ ಗುಡ್ಡ ಸುತ್ತುತ್ತ ಎತ್ತರಕ್ಕೆ ಪ್ರಯಣಿಸುವ ಮೋಜು, ಸುತ್ತಲಿನ ಅಹ್ಲಾದಕರ ನಿಸರ್ಗದ ರಮಣೀಯತೆ ಮುದ ನೀಡುತ್ತದೆ. ಸದ್ಯ ಈ ಕಟ್ಟಡ ನೀರಾವರಿ ಇಲಾಖೆಯಿಂದ ವನ್ಯಜೀವಿ ಧಾಮಕ್ಕೆ ಹಸ್ತಾಂತರಿಸಬೇಕೆಂಬ ಚರ್ಚೆ ನಡೆದಿದ್ದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ
ಎಂದು ಗೊತ್ತಾಗಿದೆ.

ಅದನ್ನು ವನ್ಯಜೀವಿ ಧಾಮದವರಿಗೆ ವಹಿಸಿದರೆ ಸಮರ್ಪಕ ನಿರ್ವಹಣೆ ಜತೆಗೆ ಇಲಾಖೆಗೆ ಆದಾಯ ಬರುವಂತೆ ಮಾಡಬಹುದಾಗಿದೆ. ಸದ್ಯ ಚಂದ್ರಂಪಳ್ಳಿಯಲ್ಲಿ ಪ್ರವಾಸಿಗರು ರಾತ್ರಿ ತಂಗಲು ಎರಡು ಕಾಟೇಜ್‌ ಇವೆ. ಈ ಕಟ್ಟಡ ಅರಣ್ಯ ಇಲಾಖೆಗೆ ವಹಿಸಬೇಕು ಕೂಗು ಬಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT