ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ: ಐದು ತರಗತಿ ಮಕ್ಕಳಿಗೆ ಒಂದೇ ಕೊಠಡಿ!

Published 30 ಆಗಸ್ಟ್ 2023, 6:33 IST
Last Updated 30 ಆಗಸ್ಟ್ 2023, 6:33 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಫಿರೋಜಾಬಾದ್-ಕಮಲಾಪುರ ರಾಜ್ಯಹೆದ್ದಾರಿ-125 (ಕಲಬುರಗಿ-ಕಾಳಗಿ-ಚಿಂಚೋಳಿ ಮುಖ್ಯರಸ್ತೆ) ಬದಿಗಿರುವ ಈ ಶಾಲೆಯು 1ರಿಂದ 5ನೇ ತರಗತಿವರೆಗೆ ಇದ್ದು, ಪ್ರಸ್ತುತ ಇಬ್ಬರು ಶಿಕ್ಷಕರು ಹಾಗೂ 32 ವಿದ್ಯಾರ್ಥಿಗಳನ್ನು ಹೊಂದಿದೆ.

ಶಾಲೆಯ ಒಟ್ಟು 5 ಕೊಠಡಿಗಳಲ್ಲಿ 3 ಕೊಠಡಿಗಳು ಹಳೆಯದಾಗಿ ಗೋಡೆ, ಚಾವಣಿ, ನೆಲಹಾಸಿಗೆ ಸಂಪೂರ್ಣ ಶಿಥಿಲಗೊಂಡು ಬಳಕೆಗೆ ಬಾರದೆ ಕೀಲಿಬಿದ್ದು ಹಾಳು ಸುರಿಯುತ್ತಿವೆ. ಇನ್ನೆರಡು ಕೊಠಡಿಗಳ ಪೈಕಿ ಒಂದನ್ನು ಬಿಸಿಯೂಟದ ಅಡುಗೆ ಕೋಣೆಯನ್ನಾಗಿ ಮಾಡಿ, ಮತ್ತೊಂದರಲ್ಲಿ ಎಲ್ಲಾ ತರಗತಿಗಳು ಒಟ್ಟಿಗೆ ನಡೆಸಲಾಗುತ್ತಿದೆ. ಈ ಎಲ್ಲದರ ಪಕ್ಕದಲ್ಲೇ 15 ವರ್ಷವಾದರೂ ಮುಗಿಯದ ತರಗತಿಗಳ ಕಟ್ಟಡವೊಂದು ಅನಾಥವಾಗಿ ನಿಂತಿತ್ತು.

ಹಲವು ವರ್ಷಗಳಿಂದ ಈ ಅವ್ಯವಸ್ಥೆ ಇದ್ದುದನ್ನು ಮನಗಂಡಿದ್ದ ಕ್ಷೇತ್ರದ ಚಿತ್ತಾಪುರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರು ಲೋಕೋಪಯೋಗಿ ಇಲಾಖೆ ಮೇಲ್ವಿಚಾರಣೆಯಲ್ಲಿ 2020-21ನೇ ಸಾಲಿನಲ್ಲಿ ₹ 40ಲಕ್ಷ ಅನುದಾನ ಬಿಡುಗಡೆ ಮಾಡಿ  2021ರ ನವಂಬರ್ 8ರಂದು ಅಡಿಗಲ್ಲು ಹಾಕಿ 3 ಹೊಸ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅದರಂತೆ 15 ವರ್ಷವಾದರೂ ಮುಗಿಯದ ಅನಾಥವಾದ ಕಟ್ಟಡ ಕೆಡವಿ ಅದೇ ಜಾಗದಲ್ಲಿ ಗುತ್ತಿಗೆದಾರರು ಈ ಹೊಸ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಆರಂಭದಿಂದಲೇ ಕುಂಟುತ್ತಾ ಸಾಗಿದ ಈ ಕಾಮಗಾರಿ ಎರಡು ವರ್ಷ ಮುಗಿಯಲು ಬಂದರೂ ಚಾವಣಿ ಕೆಲಸ ಇನ್ನೂ ಕಟ್ಟಿಗೆಯ ಬಂಬುಗಳ ಮೇಲೆ ನಿಂತಿದೆ. ಕಳೆದ ವಿಧಾನಸಭಾ ಚುನಾವಣೆ ಮುನ್ನವೇ ಸೆಂಟ್ರಿಂಗ್ ಹೊಡೆದು ನಿಲ್ಲಿಸಿದ ಕಟ್ಟಿಗೆ ಬಂಬೂಗಳು ಛತ್ತು ಕಾಣದೆ ಶಾಲಾ ಮಕ್ಕಳನ್ನು ಅಪಾಯಕ್ಕೆ ಆಹ್ವಾನಿಸುವಂತಿವೆ.

ಬಂಬೂಗಳ ಮಧ್ಯೆ ಹುಲ್ಲು, ಕಸಕಡ್ಡಿ ನಿರ್ಮಾಣವಾಗಿ ವಿಷಜಂತುಗಳಿಗೆ ಆಸರೆಯಾಗಿದೆ. ಇದು ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಭಯ ಹುಟ್ಟಿಸುತ್ತಿದೆ ಎನ್ನುತ್ತಾರೆ ಪೋಷಕರು.

‘ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಹೇಳಿದರೆ. ಕಾರ್ಮಿಕರಿಲ್ಲ, ಮರಳು ಸಿಗ್ತಿಲ್ಲ, ಬಿಲ್ ಆಗಿಲ್ಲ ಹೀಗೆ ಒಂದಿಲ್ಲೊಂದು ನೆಪದಿಂದ ಅವರು ವಿಳಂಬ ಮಾಡುತ್ತಿದ್ದಾರೆ’ ಎಂದು ಕಾಳಗಿ ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್ ಹೇಳಿದರು.

’ಬೇರೆ ಕಾಮಗಾರಿ ಬಿಲ್ ಬಿಡುಗಡೆ ಆಗಿದ್ದರೂ ಹೊಂದಿಸಿಕೊಂಡು ಈ ಕೆಲಸ ಪೂರ್ಣಗೊಳಿಸುತ್ತಿದ್ದೆ. ಆದರೆ ಎಲ್ಲಾ ಬಿಲ್‌ಗಳು ಹಾಗೆ ನಿಂತಿದ್ದರಿಂದ ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ನಾಲ್ಕೈದು ದಿನಗಳಲ್ಲಿ ಛತ್ತಿನ ಕೆಲಸ ಪೂರ್ತಿ ಮುಗಿಸಿಕೊಡುತ್ತೇನೆ’ ಎಂದು ಗುತ್ತಿಗೆದಾರ ಬಸವರಾಜ ಹುಮನಾಬಾದ ಪ್ರತಿಕ್ರಿಯಿಸಿದರು.

ಕಾಮಗಾರಿ ವಿಳಂಬದಿಂದ ಇದ್ದ ಒಂದು ಕೊಠಡಿಯಲ್ಲೇ 1ರಿಂದ 3ನೇ ತರಗತಿ ನಲಿಕಲಿ ಮಕ್ಕಳು, 4ನೇ, 5ನೇ ಮಕ್ಕಳು ಕುಳಿತುಕೊಳ್ಳುವಂತಾಗಿದೆ. ಶಾಲಾ ಕಾರ್ಯಾಲಯವೂ ಇದೆ ಆಗಿದೆ. ಹೊರಗಡೆ ಆಟಕ್ಕೂ ಮಕ್ಕಳು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಕಲಿಕಾ ವಾತಾವರಣ ಇಲ್ಲಿ ಮರೀಚಿಕೆಯಾಗಿದೆ. 

ಶಾಲೆಕಟ್ಟಡ
ಶಾಲೆಕಟ್ಟಡ
ಎಲ್ಲಾ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಸುತ್ತಿರುವುದರಿಂದ ಮಕ್ಕಳಿಗೆ ಬಹಳ ಸಮಸ್ಯೆಯಾಗುತ್ತಿದೆ
-ಸುಜಾತಾಬಾಯಿ ಮುಖ್ಯಶಿಕ್ಷಕಿ
ಈ ಕಾಮಗಾರಿಯ ಅಡಿಗಲ್ಲು ಸಮಾರಂಭ ಆದಾಗಿನಿಂದ ಕೆಲಸ ಮಂದಗತಿಯಲ್ಲಿ ಸಾಗಿದ್ದು ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ.
-ಚಂದ್ರಶೇಖರ ಕುಂಬಾರ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ
ಲ್ ಆಗಿಲ್ಲ ಎಂಬ ನೆಪದಲ್ಲಿ ಗುತ್ತಿಗೆದಾರ ಕಾಮಗಾರಿ ಮುಂದುವರಿಸದೆ ಹಾಗೆ ಬಿಟ್ಟಿದ್ದಾರೆ. ಎಷ್ಟು ಸಲ ಹೇಳಿದ್ರೂ ಅವರು ಕೇಳುತ್ತಿಲ್ಲ
-ನಾಗರಾಜ ಸಜ್ಜನ ಶಿಕ್ಷಣ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT