ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಬಂದರೆ ಕೈಕೊಡುವ ವಿದ್ಯುತ್: ಕೊಡಗು ಜಿಲ್ಲೆಯಲ್ಲಿ ನಿತ್ಯ ಇದೇ ಗೋಳು

Published 22 ಜುಲೈ 2024, 7:46 IST
Last Updated 22 ಜುಲೈ 2024, 7:46 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಸಾಕು ವಿದ್ಯುತ್ ಇಲ್ಲದೇ ಹಳ್ಳಿಗಾಡಿನ ವಿದ್ಯಾರ್ಥಿಗಳ ಓದು ನಿಲ್ಲುತ್ತದೆ. ಬರಹ ಮುಸಕಾಗುತ್ತದೆ. ಸೀಮೆಎಣ್ಣೆ ದೀಪದ ಬೆಳಕಿನ‌ಲ್ಲಾದರೂ ಓದೋಣ ಎಂದರೆ ಸೀಮೆಎಣ್ಣೆಯೂ ಸಿಗದ ಸ್ಥಿತಿ ಇದೆ.

ವಿಶೇಷವಾಗಿ ಸೋಮವಾರಪೇಟೆ, ನಾಪೋಕ್ಲು, ಗೋಣಿಕೊಪ್ಪಲು ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದಾಗಿದೆ. ಸೆಸ್ಕ್‌ನಲ್ಲಿ ಶೇ 60ಕ್ಕೂ ಹೆಚ್ಚಿನ ಖಾಲಿ ಹುದ್ದೆಗಳಿರುವುದರಿಂದ ಸಹಜವಾಗಿಯೇ ವಿದ್ಯುತ್ ಮರುಸ್ಥಾಪನೆ ಮಂದಗತಿಯಲ್ಲಿ ನಡೆಯುತ್ತದೆ. ಇದರಿಂದ ಈ ಭಾಗದಲ್ಲಿ ಒಮ್ಮೆ ಮರಬಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡರೆ ದುರಸ್ತಿ ಕಾರ್ಯ ನಡೆಯಲು ಕೆಲವು ದಿನಗಳೆ ಹಿಡಿಯುತ್ತವೆ.

ಉಳ್ಳವರು ಯುಪಿಎಸ್‌ ಮೂಲಕ ವಿದ್ಯುತ್ ದೀಪಗಳನ್ನು ಬೆಳಗಿಸಿಕೊಂಡರೆ, ಇಲ್ಲದವರು ಕತ್ತಲಿನಲ್ಲೇ ಕಳೆಯಬೇಕಿದೆ. ಪಡಿತರ ವ್ಯವಸ್ಥೆಯಲ್ಲಿ ಹಿಂದೆ ನೀಡುತ್ತಿದ್ದ ಸೀಮೆಎಣ್ಣೆಯನ್ನೂ ಸ್ಥಗಿತಗೊಳಿಸಲಾಗಿದೆ. ಮೋಂಬತ್ತಿ ಹಾಗೂ ದೀಪದ ಎಣ್ಣೆಯ ಬೆಲೆಯನ್ನು ಭರಿಸಲಾರದೆ ಹಲವು ಮಂದಿ ಕಟ್ಟಿಗೆಯ ಬೆಂಕಿಯಲ್ಲೇ ಓದಬೇಕಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಾಕಷ್ಟು ಗುಡ್ಡಗಾಡು ಪ್ರದೇಶಗಳಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುವುದು ಹಲವು ವರ್ಷಗಳಿಂದ ಇದೆ.

ಸೀಮೆಎಣ್ಣೆ ಕೇಳಿದರೆ, ಹಲವು ಸಮಸ್ಯೆಗಳನ್ನು ಅಧಿಕಾರಿಗಳು ತೋಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮುಂಗಾರಿನ ಸಂದರ್ಭ ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು, ಒಮ್ಮೆ ವಿದ್ಯುತ್ ಕಡಿತ ವಾದರೆ ಮತ್ತೆ ವಿದ್ಯುತ್ ಮಾರ್ಗ ಸರಿಪಡಿಸಿ ವಿದ್ಯುತ್ ನೀಡಲು ಹಲವು ದಿನಗಳೇ ಕಳೆದುಹೋಗುತ್ತವೆ.

ತಾಲ್ಲೂಕಿನಲ್ಲಿ 121 ಹಾಡಿಗಳಿದ್ದು, ಇಂದಿಗೂ ಹೆಚ್ಚಿನವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೆಚ್ಚಿನ ಮನೆ, ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಕಳೆದ ಹಲವಾರು ವರ್ಷಗಳಿಂದ ಸೀಮೆಎಣ್ಣೆ ನೀಡುವುದನ್ನೇ ನಿಲ್ಲಿಸಿರುವುದು ದುರಂತ. ರಾತ್ರಿ ಸಮಯದಲ್ಲಿ ಮನೆಯೊಳಗೆ ಬೆಳಕನ್ನು ಕಾಣದ ಹಲವು ಕುಟುಂಬಗಳನ್ನು ಕಾಣಬಹುದು. ಕತ್ತಲಾಗುವ ಮುನ್ನ ಊಟ ಮುಗಿಸಿ ಮಲಗುವ ಹಲವಾರು ಕುಟುಂಬಗಳು ಇಂದಿಗೂ ಕಾಣಬಹುದು.

ಸರ್ಕಾರ ಇನ್ನಾದರೂ, ಮಾಸಿಕ ಸೀಮೆಎಣ್ಣೆ ವಿತರಿಸಲು ಮುಂದಾದಲ್ಲಿ ವಿದ್ಯುತ್ ಇಲ್ಲದ ಸಮಯದಲ್ಲಿ ಮನೆಯಲ್ಲಿ ದೀಪ ಬೆಳಗುವುದಕ್ಕಾದರೂ, ಉಪಯೋಗವಾಗುವುದು ಎಂಬುದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

ಗೋಣಿಕೊಪ್ಪಲು ಭಾಗದಲ್ಲಿ ಕೊಳ್ಳಿ ಬೆಳಕು!

ಬೇಸಿಗೆ ಕಾಲದಲ್ಲಿಯೂ ಕೊಳ್ಳಿ ಬೆಳಕು ತಪ್ಪಿದ್ದಲ್ಲ. ಇನ್ನೂ ಮಳೆಗಾಲ ಬಂತೆಂದರೆ ಕೇಳುವುದೇ ಬೇಡ ಇದು ತಿತಿಮತಿ ಸುತ್ತಮುತ್ತಲಿನ ನಾಗರಹೊಳೆ ಬುಡಕಟ್ಟು ಜನರ ಕತ್ತಲೆಯ ಅಳಲು.

ಅರಣ್ಯದೊಳಗಿನ ಹತ್ತಾರು ಹಾಡಿಗಳಿಗೆ ಈಗಲೂ ವಿದ್ಯುತ್ ಇಲ್ಲ. ಕೊಳ್ಳಿ ಬೆಳಕೇ ಅವರ ಮಕ್ಕಳ ಓದಿಗೆ ಆಸರೆ. ರಸ್ತೆ ಅಂಚಿನ ಹಾಡಿಗಳಲ್ಲಿ ವಿದ್ಯುತ್ ಇದ್ದರೂ ಮಳೆಗಾಲದಲ್ಲಿ ಬೆಳಕು ಕಾಣುವುದೇ ಅಪರೂಪ. ಮರ ಬಿದ್ದು, ತಂತಿ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದೇ ಹೆಚ್ಚು. ಇಂಥ ವೇಳೆಯಲ್ಲಿ ಬೆಂಕಿಕೊಳ್ಳಿಯಲ್ಲಾದರೂ ಬೆಳಕು ಕಾಣೋಣ ಎಂದರೆ ಮಳೆಯಲ್ಲಿ ನೆನೆದು ನೀರು ಸೋರುವ ಕಟ್ಟಿಗೆಯಲ್ಲಿ ಅದೂ ಕಷ್ಟ. ಮಳೆಗಾಳ ಶುರುವಾಯಿತೆಂದರೆ ನಮ್ಮ ಗೋಳು ಹೇಳ ತೀರದು ಎಂಬ ನೋವಿನ ನುಡಿ ಹಾಡಿಗಳ ಬುಡಕಟ್ಟು ಜನರದು.

ವಿದ್ಯುತ್ ಲೈನ್ ಇಲ್ಲದ ಕಡೆ ಅರಣ್ಯ ಇಲಾಖೆಯವರು ಬೀದಿಗಳಿಗೆ ಸೋಲಾರ್ ದೀಪ ಅಳವಡಿಸಿದ್ದಾರೆ. ಮನೆಗಳಿಗೂ ಕೊಟ್ಟಿದ್ದಾರೆ. ಆದರೆ, ಅವುಗಳಲ್ಲಿ ಬೆಳಕು ಕಾಣುವುದಕ್ಕಿಂತ ಹೆಚ್ಚಿನದಾಗಿ ತುಕ್ಕು ಹಿಡಿದಿರುವುದೇ ಎಚ್ಚು ಎನ್ನುತ್ತಾರೆ ಬೊಂಬುಕಾಡು ಹಾಡಿಯ ಮಹಿಳೆ ಬೋಜಿ.

ರಿಯಾಯಿತಿ ದರದಲ್ಲಿ ಮೋಂಬತ್ತಿಯನ್ನಾದರೂ ಕೊಡಿ

ರಿಯಾಯಿತಿ ದರದಲ್ಲಿ ಮೋಂಬತ್ತಿಯನ್ನಾದರೂ ಕೊಡಿ ಎನ್ನುವ ಬೇಡಿಕೆ ವ್ಯಕ್ತವಾಗಿದೆ. ಸೆಸ್ಕ್‌ಗೆ ಸಾಕಷ್ಟು ಸಿಬ್ಬಂದಿ ನೀಡಲು ಸಾಧ್ಯವಾಗದಿದ್ದರೆ, ಸೀಮೆಎಣ್ಣೆಯ ಕೊಡಲೂ ಆಗದಿದ್ದರೆ, ಕನಿಷ್ಠ ರಿಯಾಯಿತಿ ದರದಲ್ಲಾದರೂ ಮೋಂಬತ್ತಿಯನ್ನಾದರೂ ವಿತರಿಸಿ ಎಂದು ಕಾಡಂಚಿನ ಜನರು ಮೊರೆ ಇಡುತ್ತಿದ್ದಾರೆ.

ಇಲ್ಲಿನ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ವಿದ್ಯುತ್ ಪೂರೈಕೆ ಮರಳಿ ಸಾಧ್ಯವಾಗುವವರೆಗೂ ಬೆಳಕಿಗಾಗಿ ಪರ್ಯಾಯ ಮಾರ್ಗಗಳನ್ನಾದರೂ ಹುಡುಕಬೇಕಿದೆ. ಈ ಮೂಲಕ ಮಕ್ಕಳ ಓದಿಗೆ ಒಂದಿಷ್ಟು ನೆರವಾಗಬೇಕಾಗಿದೆ.

ಮಾಹಿತಿ: ಡಿ.ಪಿ.ಲೋಕೇಶ್, ಜೆ.ಸೋಮಣ್ಣ.

ಸಜ್ಜಳ್ಳಿ ಹಾಡಿಯ ಶ್ಯಾಮ್ ಎಂಬುವವರ ಮನೆಯಲ್ಲಿ ಅಡುಗೆ ಎಣ್ಣೆ ದೀಪ ಹೊಟ್ಟಿಸಿಕೊಂಡು ಓದುತ್ತಿರುವ ಮಕ್ಕಳೂಸೇರಿದಂತೆ
ಸಜ್ಜಳ್ಳಿ ಹಾಡಿಯ ಶ್ಯಾಮ್ ಎಂಬುವವರ ಮನೆಯಲ್ಲಿ ಅಡುಗೆ ಎಣ್ಣೆ ದೀಪ ಹೊಟ್ಟಿಸಿಕೊಂಡು ಓದುತ್ತಿರುವ ಮಕ್ಕಳೂಸೇರಿದಂತೆ

ಪ್ರತಿಕ್ರಿಯೆಗಳು

ಬೆಳಕು ಕೊಡಿ ಮಳೆಗಾಲದಲ್ಲಿ ಹುಲಿ ಆನೆಗಳ ಓಡಾಟ ಕಾಡಿನಲ್ಲಿ ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲಿ ಕತ್ತಲಲ್ಲಿ ಓಡಾಡುವಾಗ ಜೀವಭಯ ಕಾಡುತ್ತದೆ. ಬೆಳಕು ಕಂಡರೆ ವನ್ಯಜೀವಿಗಳಿಂದ ದೂರವಿರಬಹುದು. ಅವು ಕೂಡ ನಮ್ಮತ್ತ ಸುಳಿಯುವುದಿಲ್ಲ. ಬೆಂಕಿ ಹಾಕಿಕೊಳ್ಳಲು ಮಳೆಯಲ್ಲಿ ಕಷ್ಟವಾಗಿದೆ. ನಮಗೊಂದಿಷ್ಟು ಬೆಳಕು ಕೊಡಿ.

-ಮಣಿಕುಂಞ ತಿತಿಮತಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ.

ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಿದ್ದಾರೆ ಶಾಲೆಯಿಂದ ಬಂದ ಮಕ್ಕಳು ಮನೆಯಲ್ಲಿ ಓದಲು ಮತ್ತು ಬರೆಯಲು ಬೆಳಕಿಲ್ಲದೆ ಕಷ್ಟವಾಗುತ್ತಿದೆ. ಮನೆ ಕೆಲಸ ಮಾಡದಿದ್ದರೆ ಶಿಕ್ಷಕರು ಹಡೆಯುತ್ತಾರೆ ಎಂಬ ಭಯದಿಂದ ಶಾಲೆಗೆ ಹೋಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ನಮ್ಮ ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಿದ್ದಾರೆ.

-ಜೆ.ಕೆ.ರಾಜು ಚೊಟ್ಟೆಪಾರಿ

ಡೀಸೆಲ್‌ನಿಂದ ದೀಪ ಹೊತ್ತಿಸಿಕೊಳ್ಳುವ ಸ್ಥಿತಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಿಂದೆ ತಿಂಗಳಿಗೆ 4 ಲೀಟರ್ ಸೀಮೆಎಣ್ಣೆಯನ್ನು ಸಹಕಾರ ಸಂಘಗಳ ಮೂಲಕ ವಿತರಿಸುತ್ತಿದ್ದರು. ಆದರೆ ನಾಲ್ಕಾರು ವರ್ಷಗಳಿಂದ ನಿಲ್ಲಿಸಿದ್ದು ರಾತ್ರಿ ಸಂದರ್ಭ ವಿದ್ಯುತ್ ಇಲ್ಲದ ಸಂದರ್ಭ ಸಮಸ್ಯೆಯಾಗುತ್ತಿದೆ. ಈಗ ಮನೆಯಲ್ಲಿ ಡೀಸೆಲ್ ತಂದು ದೀಪಕ್ಕೆ ಹಾಕಿ ಹೊತ್ತಿಸಿಕೊಳ್ಳುವಂತಹ ಸ್ಥಿತಿ ಇದೆ. ಈ ಹಿಂದೆ ನೀಡುತ್ತಿದ್ದಂತೆ ಸೀಮೆಎಣ್ಣೆ ವಿತರಿಸಲು ಸರ್ಕಾರ ಮುಂದಾಗಬೇಕು.

-ಕೆ.ಕೆ.ನಾಗರತ್ನ ಕುಮಾರಪ್ಪ ಕೂತಿ ಗ್ರಾಮದ ಕೃಷಿಕ.

ಕನಿಷ್ಠ 5 ಲೀಟರ್ ಸೀಮೆಎಣ್ಣೆಯಾದರೂ ಕೊಡಿ ಪ್ರಸಕ್ತ ಮಳೆಗಾಲದಲ್ಲಿಯೂ ಮನೆಯಲ್ಲಿ ಸೀಮೆಎಣ್ಣೆ ಇಲ್ಲದೆ ರಾತ್ರಿ ಅಡುಗೆ ಎಣ್ಣೆ ಬಳಸಿಕೊಂಡು ದೀಪ ಹೊತ್ತಿಸಿಕೊಳ್ಳುತ್ತಿದ್ದೇವೆ. ಮಕ್ಕಳು ಓದಲು ಮತ್ತು ಬರೆಯಲು ಸಮಸ್ಯೆಯಾಗಿದೆ. ಮೊದಲೇ ಕಾಡು ಪ್ರಾಣಿಗಳ ಹಾವಳಿ. ಮನೆಯ ಬದಿಯಲ್ಲಿಯೇ ಕಾಡಾನೆಗಳು ಬಂದು ನಿಂತಿರುತ್ತವೆ. ಕತ್ತಲೆಯಲ್ಲಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ತಿಂಗಳಿಗೆ ಕನಿಷ್ಠ 5 ಲೀಟರ್ ಸೀಮೆಎಣ್ಣೆಯನ್ನಾದರೂ ನೀಡಿದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಪ್ರಯೋಜನವಾಗುವುದು

-ಜೆ.ಎ.ಶ್ಯಾಮ್ ಸಜ್ಜಳ್ಳಿ ಹಾಡಿಯ ನಿವಾಸಿ ಜೇನು ಕುರುಬ ಯುವ ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT