ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ | ದ್ರಾಕ್ಷಿ ಬೆಳೆಯಿಂದ ಬದುಕು ‘ಸಿಹಿ’

ಉಮಾಶಂಕರ ಹಿರೇಮಠ
Published 12 ಮೇ 2024, 4:40 IST
Last Updated 12 ಮೇ 2024, 4:40 IST
ಅಕ್ಷರ ಗಾತ್ರ

ಯಲಬುರ್ಗಾ: ಕಳೆದ 40 ವರ್ಷಗಳಿಂದಲೂ ಕುಟುಂಬದ ಹಿರಿಯರು ರೂಢಿಸಿಕೊಂಡು ಬಂದಿದ್ದ ದ್ರಾಕ್ಷಿ ಹಣ್ಣಿನ ಬೆಳೆಯನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವ ತಾಲ್ಲೂಕಿನ ಮುಧೋಳ ಗ್ರಾಮದ ಬಸವರಾಜ ಕಾಡಯ್ಯ ಮಠದ ಅವರು ಆರ್ಥಿಕ ಸಬಲರಾಗಿದ್ದಲ್ಲದೇ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ.

ಸಾಕಷ್ಟು ಏಳು ಬೀಳುಗಳನ್ನು ಕಂಡರೂ ನಿರಂತರವಾಗಿ 2 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯನ್ನು ಅಭಿವೃದ್ಧಿ ಪಡಿಸಿ ಈ ಭಾಗದ ವಿವಿಧ ಮಾರುಕಟ್ಟೆಗೆ ಹಣ್ಣನ್ನು ಪೂರೈಸುತ್ತಿದ್ದಾರೆ. ಹೆಚ್ಚು ಶ್ರಮವಹಿಸಿ ಅಧಿಕ ಇಳುವರಿ ತಗೆಯುತ್ತಿರುವ ರೈತ ಬಸವರಾಜ ಅವರು ಸಾಕಷ್ಟು ಆದಾಯ ಪಡೆಯುತ್ತಿದ್ದಾರೆ.

ಹಾಗೆಯೇ ಕೆಲವೊಂದು ಸಂದರ್ಭದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ನಾಟಿ ಮಾಡಿದ ಮೊದಲನೇ ಸಸಿಗಳಿಂದಲೇ ಸತತ ಮೂರನೇ ವರ್ಷವೂ ಉತ್ತಮ ಫಸಲು ಪಡೆಯುತ್ತಿರುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಪಡೆಯುತ್ತಿರುವುದು ಖುಷಿಯ ಸಂಗತಿಯಾಗಿದೆ.

ಕಳೆದ ಎರಡು ವರ್ಷಗಳಿಗಿಂತಲೂ ಮೊದಲು ಹಸಿ ದ್ರಾಕ್ಷಿಯ ಮಾರಾಟ ಮಾಡಿ ಬರುವ ಆದಾಯದಲ್ಲಿಯೇ ತೃಪ್ತಿಪಡಬೇಕಾಗುತ್ತಿತ್ತು, ಆದರೆ ಈಚೆಗೆ ದ್ರಾಕ್ಷಿಯನ್ನು ಒಣಗಿಸಿ (ಮನುಕ) ಮಾರಾಟ ಮಾಡುತ್ತಿರುವುದರಿಂದ ಆದಾಯದಲ್ಲಿ ದ್ವಿಗುಣವಾಗುತ್ತಿದೆ. ಇದು ದ್ರಾಕ್ಷಿ ಬೆಳೆಯನ್ನು ವಿಸ್ತರಿಸುವಂತೆ ಪ್ರೇರಣೆ ನೀಡುತ್ತಿದೆ ಎಂದು ರೈತ ಮಠದ ಅಭಿಪ್ರಾಯಪಟ್ಟಿದ್ದಾರೆ.

ನಷ್ಟ- ಲಾಭ ಎರಡನ್ನೂ ಅನುಭವಿಸಲಾಗಿದೆ ಹಣ್ಣುಬೆಳೆ ಬೆಳೆಯಲು ಆಸಕ್ತಿ ಇರುವುದರಿಂದ ನಿರಂತರವಾಗಿ ಇದನ್ನೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಖರ್ಚಿಗೆ ಅನುಗುಣವಾಗಿ ಆದಾಯ ಸಿಗುತ್ತಿಲ್ಲ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಿದೆ.
ಬಸವರಾಜ ಮಠದ, ಮುಧೋಳ ದ್ರಾಕ್ಷಿ ಬೆಳೆಗಾರ

ಕಳೆದ ಒಂದೂವರೆ ತಿಂಗಳಲ್ಲಿ ₹ 1.50ಲಕ್ಷ ದಷ್ಟು ಮೌಲ್ಯದ ಹಸಿ ದ್ರಾಕ್ಷಿ ಮಾರಾಟಮಾಡಿದ್ದು, 60 ಕ್ವಿಂಟಲ್ ಒಣದ್ರಾಕ್ಷಿಯನ್ನು ಮಾರಾಟ ಮಾಡಲಾಗಿದೆ. ಹಸಿ ದ್ರಾಕ್ಷಿ ಸಕಾಲದಲ್ಲಿ ಮಾರಾಟವಾಗದೇ ಹೋದರೆ ಹಾಳಾಗುವುದು ಹಾಗೂ ನಷ್ಟವಾಗುವ ಸಾಧ್ಯತೆಗಳಿವೆ. ಆದಾಯವು ಕೂಡಾ ಕಡಿಮೆ. ಅದಕ್ಕಾಗಿಯೇ ಒಣದ್ರಾಕ್ಷಿಯನ್ನು ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ ಎಂದು ಕುಟುಂಬದ ಸದಸ್ಯ ಅಜ್ಜಯ್ಯ ತಿಳಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಸಾಧನೆಯೊಂದಿಗೆ ಉತ್ತಮ ರಂಗಭೂಮಿ ಕಲಾವಿದರು ಆಗಿರುವ ಇವರು ಈಗಾಗಲೇ ಎರಡು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ತೋಟಗಾರಿಕೆ ಬೆಳೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ರೈತ ಬಸವರಾಜ ಅವರಿಗೆ ಧಾರವಾಡದ ಚಿರಾಯು ಅಸೋಶಿಯೇಷನ್ ಜನಸೇವಾ ಫೌಂಡೇಶನ್‌ನವರು ಈಚೆಗೆ ರಾಷ್ಟ್ರೀಯ ನೇಗಿಲ ಯೋಗಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸ್ಥಳೀಯವಾಗಿ ವಿವಿಧ ಸಂಘ ಸಂಸ್ಥೆಗಳು ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿದ್ದಾರೆ.

ಯಲಬುರ್ಗಾ ತಾಲ್ಲೂಕು ಮುಧೋಳ ಗ್ರಾಮದ ಬಸವರಾಜ ಮಠದ ಅವರು ದ್ರಾಕ್ಷಿ ಬೆಳೆಯನ್ನು ಒಣದ್ರಾಕ್ಷಿ ಮಾಡಲು ತಯಾರಿ ನಡೆಸಿರುವ ದೃಶ್ಯ
ಯಲಬುರ್ಗಾ ತಾಲ್ಲೂಕು ಮುಧೋಳ ಗ್ರಾಮದ ಬಸವರಾಜ ಮಠದ ಅವರು ದ್ರಾಕ್ಷಿ ಬೆಳೆಯನ್ನು ಒಣದ್ರಾಕ್ಷಿ ಮಾಡಲು ತಯಾರಿ ನಡೆಸಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT