ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿಮಂತ್ರದಿಂದ ಸ್ವಾತಂತ್ರ್ಯ ದೊರಕಿಲ್ಲ: ದೊಡ್ಡನಗೌಡ ಪಾಟೀಲ

Published 15 ಆಗಸ್ಟ್ 2024, 15:34 IST
Last Updated 15 ಆಗಸ್ಟ್ 2024, 15:34 IST
ಅಕ್ಷರ ಗಾತ್ರ

ಕುಷ್ಟಗಿ: ‘ಭಾರತಕ್ಕೆ ಕೇವಲ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ದೊರಕಿಲ್ಲ. ಅದರ ಹಿಂದೆ ತ್ಯಾಗ, ಬಲಿದಾನ ಒಳಗೊಂಡಿರುವ ಕ್ರಾಂತಿಯ ಸಂದೇಶವೂ ಇದೆ’ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದ 78ನೇ ವರ್ಷದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಹಿರಿಯರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ತಕ್ಷಣ ಬ್ರಿಟಿಷರು ದೇಶ ಬಿಟ್ಟು ಕಾಲ್ಕಿತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ತಮ್ಮ ಬದುಕನ್ನು ಅರ್ಪಿಸಿರುವುದು ಇತಿಹಾಸದ ಪುಟಗಳಲ್ಲಿದೆ’ ಎಂದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಅಶೋಕ ಶಿಗ್ಗಾವಿ ಸ್ವಾತಂತ್ರ್ಯೋತ್ಸವ ಕುರಿತು ಅನಿಸಿಕೆ ಹಂಚಿಕೊಂಡರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ಸಾಧಕರು, ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕ್ರೀಡಾ ಪಟುಗಳು ಹಾಗೂ ಹೋಟೆಲ್‌ ಮಾಲೀಕರಿಗೆ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದ ವಿದ್ಯಾನಗರ ಶಾಲೆ ಶಿಕ್ಷಕ ಶ್ರೀನಿವಾಸ ದೇಸಾಯಿ ಅವರನ್ನು ತಾಲ್ಲೂಕು ಆಡಳಿತದ ಪರವಾಗಿ ಶಾಸಕ ದೊಡ್ಡನಗೌಡ ಪಾಟೀಲ ಸನ್ಮಾನಿಸಿದರು.

ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ಮುಕ್ತೇದಾರ, ಮಾಜಿ ಸೈನಿಕ ಯಲ್ಲಪ್ಪ, ತಾ.ಪಂ ಇಒ ಪಂಪಾಪತಿ ಹಿರೇಮಠ, ಸಿಪಿಐ ಯಶವಂತ ಬಿಸನಳ್ಳಿ, ಬಿಇಒ ಸುರೇಂದ್ರ ಕಾಂಬಳೆ, ಮಹಾಲಿಂಗಪ್ಪ ದೋಟಿಹಾಳ, ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿವಿಧೆಡೆ ಆಚರಣೆ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆ–ಕಾಲೇಜುಗಳು, ಸರ್ಕಾರಿ ಕಚೇರಿ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲಾಯಿತು. ಸಂತೆ ಮೈದಾನದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣವನ್ನು ಶಾಸಕ ದೊಡ್ಡನಗೌಡ ಪಾಟೀಲ ನೆರವೇರಿಸಿದರು. ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಪ್ರತಿನಿಧಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

ಕೆನರಾ ಬ್ಯಾಂಕ್ ಪಟ್ಟಣ ಶಾಖೆ ವತಿಯಿಂದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೂವರು ವಿದ್ಯಾರ್ಥಿನಿಯರಿಗೆ ತಲಾ ₹ 3000 ನಗದು ಪ್ರೋತ್ಸಾಹಧನ ವಿತರಿಸಲಾಯಿತು. ಮುಖ್ಯಶಿಕ್ಷಕ ಸಿದ್ರಾಮಪ್ಪ ಅಮರಾವತಿ, ಬ್ಯಾಂಕ್‌ ಸಿಬ್ಬಂದಿ ಮತ್ತು ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT