ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಗಿಲ್‌ ವಿಜಯ ದಿನ: ಯೋಧನ ಕುಟುಂಬದ ಕಣ್ಣೀರು ಒರೆಸದ ಸರ್ಕಾರ

ಕಾರ್ಗಿಲ್‌ ಹುತಾತ್ಮ ಶಿವಬಸಯ್ಯ ನೆನಪಾಗುವುದು ವಿಜಯೋತ್ಸವದ ದಿನ ಮಾತ್ರ
ನಾರಾಯಣರಾವ್ ಕುಲಕರ್ಣಿ
Published 26 ಜುಲೈ 2024, 5:23 IST
Last Updated 26 ಜುಲೈ 2024, 5:23 IST
ಅಕ್ಷರ ಗಾತ್ರ

ಕುಷ್ಟಗಿ: ಕಂಕುಳಲ್ಲಿ ಹಸುಗೂಸು, ಕೈಯಲ್ಲಿ ನಾಲ್ಕು ವರ್ಷದ ಕಂದನೊಂದಿಗೆ ಇರುವಾಗ ಸೇನಾ ವಿಭಾಗದವರು ತಂದ ಸುದ್ದಿ ಕೇಳಿ ಬರಸಿಡಿಲು ಬಡಿದು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಯಿತು. ದೇಶಕ್ಕಾಗಿ ಪತಿ ಜೀವ ತೆತ್ತರೂ ಸರ್ಕಾರ, ಸಮಾಜ ನನ್ನ ಹಿಂದಿದೆಯಲ್ಲ ಎಂಬ ಭರವಸೆಯ ಬೆಳಕಿನಲ್ಲಿ ಮಕ್ಕಳೊಂದಿಗೆ ಹೇಗೋ ಕಾಲ ಕಳೆಯುತ್ತಿದ್ದೇನೆ.

ಪಾಕಿಸ್ತಾನ್ ವೈರಿಗಳ ವಿರುದ್ಧ 1999ರಲ್ಲಿ ಕಾರ್ಗಿಲ್‌ದಲ್ಲಿ ನಡೆದ ಆಪರೇಶನ್ ವಿಜಯ್ ಕಾರ್ಯಾಚರಣೆಯಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ವೀರಮರಣ ಅಪ್ಪಿದ ಬಾಗಲಕೋಟೆ ಜಿಲ್ಲೆ, ಬದಾಮಿ ತಾಲ್ಲೂಕು ಚೊಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ ಅವರ ಪತ್ನಿ ನಿರ್ಮಲಾ ಕುಲಕರ್ಣಿ ಅವರ ಈ ಮಾತುಗಳಲ್ಲಿ ಒಳಗೊಳಗೇ ಅನಾಥ ಪ್ರಜ್ಞೆ ಇಣುಕುತ್ತಿತ್ತು. ಒತ್ತರಸಿ ಬರುತ್ತಿದ್ದ ದುಃಖ ಅದುಮಿಟ್ಟುಕೊಂಡು ಕಾರ್ಗಿಲ್ ಘಟನೆಯನ್ನು ನೆನೆದಾಗ ಅವರ ಕಣ್ಣಾಲೆಗಳು ತೇವಗೊಂಡಿದ್ದವು.

ಕಾರಣಾಂತರದಿಂದ ತವರು ಕುಷ್ಟಗಿ ಪಟ್ಟಣದಲ್ಲಿ ಪುತ್ರ ವಿಶಾಲ್, ಪುತ್ರಿ ಸಹನಾ ಅವರೊಂದಿಗೆ ಬದುಕು ಸವೆಸುತ್ತಿರುವ ನಿರ್ಮಲಾ ಅವರು ಕಾರ್ಗಿಲ್ ವಿಜಯೋತ್ಸವದ ಸಂದರ್ಭದಲ್ಲಿ ಎರಡೂವರೆ ವರ್ಷಗಳ ಹಿಂದಿನ ಘಟನೆಯನ್ನು ಹಂಚಿಕೊಂಡರು. ಈ ಅವಧಿಯಲ್ಲಿ ಹುತಾತ್ಮ ಯೋಧನ ಕುಟುಂಬ ಅನುಭವಿಸಿದ ದುಃಖ, ಅವ್ಯಕ್ತ ನೋವು ಅಷ್ಟಿಷ್ಟಲ್ಲ. ಎಲ್ಲ ಇದ್ದರೂ ಪತಿ, ತಂದೆ ಇಲ್ಲವಲ್ಲ ಎಂಬ ಕೊರಗು ಪತ್ನಿ ಮತ್ತು ಮಕ್ಕಳನ್ನು ಕಾಡದೆ ಬಿಟ್ಟಿಲ್ಲ. ಅದೇ ರೀತಿ ಕಾರ್ಗಿಲ್ ಯುದ್ಧದ ನಂತರ ತಮ್ಮವರನ್ನು ಕಳೆದುಕೊಂಡ ಅವಲಂಬಿತ ಕುಟುಂಬಗಳು ಸಮಸ್ಯೆಗಳಲ್ಲಿ ಕೈತೊಳೆಯುತ್ತಿದ್ದು ಅಂಥವರಲ್ಲಿ ಶಿವಬಸಯ್ಯ ಅವರ ಕುಟುಂಬವೂ ಒಂದು.

ಪ್ರತಿ ಬಾರಿ ಕಾರ್ಗಿಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರ ಹುತಾತ್ಮರ ಗುಣಗಾನ, ಕುಟುಂಬದವರಿಗೆ ನೆರವಿನ ಭರವಸೆ ನೀಡುತ್ತ ಬಂದಿದೆಯಾದರೂ ಅವು ಈಗಲೂ ಈಡೇರಿಲ್ಲ. ಶಿವಬಸಯ್ಯ ಅವರ ಪತ್ನಿಗೆ ಕೇಂದ್ರ ಸರ್ಕಾರ ಪೆಟ್ರೋಲ್‌ ಬಂಕ್‌ ಮಂಜೂರು ಮಾಡಿತ್ತಾದರೂ ಪೈಪೋಟಿಯಿಂದ ಹಾನಿ ಅನುಭವಿಸುವಂತಾಗಿದೆ. ಸರ್ಕಾರ ಆಗ ಜಮೀನು ಕೊಳ್ಳಲು ನೀಡಿದ್ದ ₹25 ಸಾವಿರದಲ್ಲಿ ಇನ್ನಷ್ಟು ಸೇರಿಸಿ ಖರೀದಿಸಿದ ನಾಲ್ಕು ಎಕರೆ ಜಮೀನು, ಸರ್ಕಾರದ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಒಂದು ಮನೆ ಮಾತ್ರ ಇದೆ. ತಂದೆ ಮೃತಪಟ್ಟಾಗ 4 ವರ್ಷದವನಾಗಿದ್ದ ವಿಶಾಲ್‌ ಎನ್‌ಟಿಟಿಎಫ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರೆ, ಆಗ ಕೇವಲ 9 ತಿಂಗಳ ಕೂಸಾಗಿದ್ದ ಸಹನಾ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಸತತ ಪ್ರಯತ್ನ ನಡೆಸಿದರೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ.

₹40 ಸಾವಿರ ಮಾಸಿಕ ಪಿಂಚಣಿ ಕುಟುಂಬಕ್ಕೆ ಆಸರೆಯಾಗಿದ್ದು ಅದರಲ್ಲೇ ಬದುಕು ಕಟ್ಟಿಕೊಂಡಿರುವ ನಿರ್ಮಲಾ ಅವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸುವುದರಲ್ಲಿ ಹಿಂದೆಬಿದ್ದಿಲ್ಲ. ಈಗ ಮಗಳ ಮದುವೆ ಮಾಡಬೇಕೆಂದರೆ ಅದಕ್ಕೆ ತಗಲುವ ಖರ್ಚು ಭರಿಸುವ ಆರ್ಥಿಕ ಶಕ್ತಿ ಕುಟುಂಬಕ್ಕಿಲ್ಲ ಎಂಬುದು ತಿಳಿಯಿತು.

ಶಿವಬಸಯ್ಯ ಕುಲಕರ್ಣಿ
ಶಿವಬಸಯ್ಯ ಕುಲಕರ್ಣಿ

ದೇಶ ರಕ್ಷಣೆಗೆ ಗುಂಡಿಗೆ ಎದೆಯೊಡ್ಡಿ ಬದುಕು ತ್ಯಾಗ ಮಾಡಿದ ಪತಿಯ ಬಗ್ಗೆ ನಮ್ಮ ಕುಟುಂಬಕ್ಕೆ ಹೆಮ್ಮೆಯಿದೆ. ಸರ್ಕಾರ ಕೊಟ್ಟಿದ್ದು ಇರುವುದಿಲ್ಲ. ಆದರೆ ಸಮಾಜ ನೀಡುತ್ತಿರುವ ಗೌರವಕ್ಕೆ ಬೆಲೆ ಕಟ್ಟಲಾಗದು.

-ನಿರ್ಮಲಾ ಕುಲಕರ್ಣಿ, ಹುತಾತ್ಮ ಯೋಧನ ಪತ್ನಿ

ಸರ್ಕಾರ ಸಮಾಜ ಹುತಾತ್ಮ ಯೋಧರ ಕುಟುಂಬದ ತ್ಯಾಗ ನೆನಪಾಗುವುದು ಕಾರ್ಗಿಲ್‌ ವಿಜಯೋತ್ಸವದ ದಿನ ಮಾತ್ರ.

-ವಿಶಾಲ್‌, ಪುತ್ರ

ಸರ್ಕಾರಿ ನೌಕರಿ ಈಡೇರದ ಭರವಸೆ

ಹುತಾತ್ಮ ಯೋಧರ ಅವಲಂಬಿತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ನಾಲ್ಕು ಜನ ಮುಖ್ಯಮಂತ್ರಿಗಳು ಆಗಿ ಹೋದರೂ ಭರವಸೆ ಜಾರಿಯಾಗಿಲ್ಲ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧರಿಸಿತ್ತಾದರೂ ಕಾರ್ಯರೂಪಕ್ಕೆ ತರಲಿಲ್ಲ. ಬದಾಮಿ ಕ್ಷೇತ್ರದ ಶಾಸಕ ವಿರೋಧ ಪಕ್ಷದ ನಾಯಕರೂ ಆಗಿದ್ದ ಸಿದ್ದರಾಮಯ್ಯ ಅವರು ನಿರ್ಮಲಾ ಅವರ ಕೋರಿಕೆಗೆ ಸ್ಪಂದಿಸಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಸರ್ಕಾರಿ ಉದ್ಯೋಗಕ್ಕೆ ಪರಿಗಣಿಸಲು ತಿಳಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ನಿರ್ಮಲಾ ಸ್ವತಃ ಭೇಟಿ ಮಾಡಿ ಮಕ್ಕಳ ಸರ್ಕಾರಿ ಉದ್ಯೋಗಕ್ಕೆ ಪುನಃ ಮನವಿ ಮಾಡಿದ್ದರು. ಆದರೂ ಬೇಡಿಕೆ ಈಡೇರಿಲ್ಲ. ಇದು ಕೇವಲ ತಮ್ಮೊಬ್ಬರ ಸಮಸ್ಯೆ ಆಗಿರದೆ ಹುತಾತ್ಮ ಯೋಧರ ಪತ್ನಿಯರು ತಂದೆ–ತಾಯಿಗಳ ಸಮಸ್ಯೆಯೂ ಹೌದು ಎಂದೆ ನಿರ್ಮಲಾ ಬೇಸರ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT