ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಯಕಲ್ಪ ಕಾಣದ ಐತಿಹಾಸಿಕ ಮಂಡ್ಯ ರೈತ ಸಭಾಂಗಣ: ಇದ್ದೂ ಇಲ್ಲದಂತಿರುವ ಆಡಳಿತ ಮಂಡಳಿ

ಪಾಳು ಕೊಂಪೆಯಂತಿರುವ ರೈತರ ಸೊಸೈಟಿ, ಇದ್ದೂ ಇಲ್ಲದಂತಿರುವ ಆಡಳಿತ ಮಂಡಳಿ
Published 15 ಮೇ 2024, 7:50 IST
Last Updated 15 ಮೇ 2024, 7:50 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ಜಿಲ್ಲೆಯ ಗೌರವದ ಪ್ರತೀಕವಾಗಿದ್ದ ನಗರದ ರೈತಸಭಾಂಗಣದ ಪುನಶ್ಚೇತನ ಕಾರ್ಯ ನನೆಗುದಿಗೆ ಬಿದ್ದಿದ್ದು ಸಂಘಟನೆಗಳ ಮುಖಂಡರು, ಕಲಾವಿದರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ನಿರ್ಮಾಪಕ ಎಂದೇ ಪ್ರಸಿದ್ಧಿ ಪಡೆದಿರುವ ಕೆ.ವಿ.ಶಂಕರಗೌಡರ ಕನಸಿನ ಕೂಸಾಗಿರುವ ರೈತ ಸಭಾಂಗಣ ಹಲವು ದಶಕಗಳ ಕಾಲ ರಾಜ್ಯದ ಪ್ರಮುಖ ಹಾಗೂ ಸುಂದರ ಸಭಾಂಗಣಗಳಲ್ಲಿ ಒಂದಾಗಿತ್ತು. ಕುವೆಂಪು ಅವರ ಮಂತ್ರಮಾಂಗಲ್ಯ ಸೇರಿದಂತೆ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಭಾಂಗಣ ಹೆಸರುವಾಸಿಯಾಗಿತ್ತು.

ಏಷ್ಯಾ ಖಂಡದಲ್ಲೇ ಅತೀ ದೊಡ್ಡ ರೈತರ ಸೊಸೈಟಿ ಎಂಬ ಹೆಸರು ಗಳಿಸಿದ್ದ ಆರ್‌ಎಪಿಸಿಎಂಎಸ್ ( ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ಹಾಗೂ ರೈತ ಸಭಾಂಗಣ ಜಿಲ್ಲೆಯ ಕಳಶಪ್ರಾಯದಂತಿದ್ದವು. ಆದರೀಗ ಆರ್‌ಎಪಿಸಿಎಂಎಸ್‌ ಹಾಗೂ ರೈತ ಸಭಾಂಗಣ ಎರಡೂ ಪಾಳು ಕೊಂಪೆಯಾಗಿದ್ದು ಐತಿಹಾಸಿಕ ಪರಂಪರೆ ಮಾಸಿ ಹೋಗಿದೆ.

ಆರ್‌ಎಪಿಸಿಎಂಎಸ್‌ ಗೋದಾಮುಗಳು ಖಾಸಗಿಯವರ ಪಾಲಾಗಿದ್ದು ರೈತರ ತಾಣವಾಗಿದ್ದ ಸೊಸೈಟಿ ಈಗ ರೈತರ ಸೇವೆಯಿಂದ ವಿಮುಖಗೊಂಡಿದೆ. ಮುರಿದ ಕುರ್ಚಿ, ಒಡೆದ ಕಿಟಕಿ, ಹರಿದ ಪರದೆ, ಬಣ್ಣಕಳೆದುಕೊಂಡ ವೇದಿಕೆ, ಚೆಲ್ಲಾಡುತ್ತಿರುವ ಕಸದಿಂದಾಗಿ ರೈತ ಸಭಾಂಗಣ ಅವ್ಯವಸ್ಥೆಯ ಆಗರವಾಗಿದೆ.

‘ದೇಶ, ವಿದೇಶಗಳಿಂದ ಬರುತ್ತಿದ್ದ ಗಣ್ಯ ವ್ಯಕ್ತಿಗಳು ರೈತ ಸಭಾಂಗಣದ ಸುಂದರ ವಿನ್ಯಾಸವನ್ನು ಮೆಚ್ಚಿಕೊಂಡಿದ್ದರು. ಮಂಡ್ಯ ಎಂದರೆ ರೈತ ಸಭಾಂಗಣದ ಎನ್ನುವ ಮಾತಿತ್ತು. ಆದರೆ ಈಗ ಆರ್‌ಎಪಿಸಿಎಂಎಸ್‌ ಆಡಳಿತ ಮಂಡಳಿಯ ನಿಲಕ್ಷ್ಯದಿಂದಾಗಿ ರೈತಸಭಾಂಗಣ ಭೂತಬಂಗಲೆಯಾಗಿದೆ’ ಎಂದು ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

ಇದ್ದೂ ಇಲ್ಲದಂತಿರು ಆಡಳಿತ ಮಂಡಳಿ:  ನೂತನ ಆಡಳಿತ ಮಂಡಳಿ ರಚನೆಯಾಗಿ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿವೆ. ಆದರೂ ಈವರೆಗೂ ರೈತಸಭಾಂಗಣಕ್ಕೆ ಕಾಯಕಲ್ಪ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

‘ಆಡಳಿತ ಮಂಡಳಿ ಆರ್‌ಎಪಿಸಿಎಂಎಸ್‌ ಮಳಿಗೆಗಳ ಬಾಡಿಗೆ ವಸೂಲಿಗಷ್ಟೇ ಸೀಮಿತವಾಗಿದೆ. ರೈತರ ಸೊಸೈಟಿಯ ಮಳಿಗೆಗಳನ್ನು ಚಿನ್ನದ ಅಂಗಡಿ, ಐಷಾರಾಮಿ ಹೋಟೆಲ್‌, ಶೋರೂಂಗಳಿಗೆ ಬಾಡಿಗೆ ನೀಡಲಾಗಿದೆ. ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿಯಾಗುತ್ತಿದ್ದು ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಒಂದೆಡೆ ರೈತ ಸಭಾಂಗಣವೂ ಪಾಳು ಬಿದ್ದಿದೆ, ಸಂಘದ ಚಟುಟಿಕೆಗಳೂ ರೈತ ಪರವಾಗಿಲ್ಲ’ ಎಂದು ಸಂಘಟನೆಯೊಂದರ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರೈತಸಭಾಂಗಣ ನವೀಕರಣಕ್ಕೆ ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆರ್‌ಎಪಿಸಿಎಂಎಸ್‌ ಅಧ್ಯಕ್ಷ ಯು.ಸಿ.ಶೇಖರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಸಭಾಂಗಣದ ಪುನಶ್ಚೇತನದ ಭರವಸೆ ನೀಡಿದ್ದರು.

‘ರೈತ ಸಭಾಂಗಣ ನವೀಕರಣಕ್ಕೆ ₹ 61.50 ಲಕ್ಷ ವೆಚ್ಚ ಮಾಡಲಾಗುವುದು. ಸದ್ಯ ₹ 17 ಲಕ್ಷ ಅನುದಾನ ಲಭ್ಯವಿದ್ದು, ಉಳಿದ ಅನುದಾನವನ್ನು ಕ್ರೋಡೀಕರಣ ಮಾಡಲಾಗುವುದು’ ಎಂದು ಭರವಸೆ ನೀಡಿದ್ದರು. ಇದಾಗಿ ವರ್ಷ ಕಳೆದಿದ್ದರೂ ರೈತಸಭಾಂಗಣ ಸ್ಥಿತಿ ಬದಲಾಗಿಲ್ಲ.

‘ಸಭಾಂಗಣದ ಮುಂದಿರುವ ಕುವೆಂಪು ಪ್ರತಿಮೆಯ ಬಣ್ಣವೂ ಮಾಸಿ ಹೋಗಿದೆ, ಮುಖದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸಭಾಂಗಣದ ಜೊತೆಗೆ ಪ್ರತಿಮೆಗೂ ಹೊಸ ರೂಪ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜು ಒತ್ತಾಯಿಸಿದರು.

ಸಂಬಳಕ್ಕೂ ಸಾಲಲ್ಲ ಬಾಡಿಗೆ..

‘ರೈತಸಭಾಂಗಣ ಪುನಶ್ಚೇತನಕ್ಕೆ ₹ 65 ಲಕ್ಷದ ಅವಶ್ಯಕತೆ ಇದೆ. ನಮ್ಮ ಕೈಯಲ್ಲಿ ಈಗ ₹ 20 ಲಕ್ಷವಿದ್ದು ಇನ್ನೂ ₹ 45 ಲಕ್ಷ ಬೇಕಾಗಿದೆ. ಸಚಿವರು ಶಾಸಕರು ವಿಧಾನ ಪರಿಷತ್‌ ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ಧನ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ’ ಎಂದು ಆರ್‌ಎಪಿಸಿಎಂಎಸ್‌ ಅಧ್ಯಕ್ಷ ಯು.ಸಿ.ಶೇಖರ್‌ ಹೇಳಿದರು. ‘ಸೊಸೈಟಿಯ ಮಳಿಗೆಗಳಿಂದ ಕೇವಲ ₹ 12 ಲಕ್ಷ ಬಾಡಿಗೆ ಸಂಗ್ರಹವಾಗುತ್ತದೆ ₹ 14 ಲಕ್ಷ ವೇತನವನ್ನೇ ನೀಡಬೇಕು. ಜೊತೆಗೆ ₹ 3.5 ಕೋಟಿ ಸಾಲವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಸೊಸೈಟಿಯನ್ನು ಮುನ್ನೆಡೆಸಲು ಸರ್ಕಾರದ ಸಹಾಯ ಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT