ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ: ತರಕಾರಿ, ಹೂವು, ಹಣ್ಣಿನ ಬೆಲೆ ಏರಿಕೆ

Published 26 ಅಕ್ಟೋಬರ್ 2023, 7:27 IST
Last Updated 26 ಅಕ್ಟೋಬರ್ 2023, 7:27 IST
ಅಕ್ಷರ ಗಾತ್ರ

ಮಂಡ್ಯ: ಮಾರುಕಟ್ಟೆಗೆ ಅಗತ್ಯ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ನಾಟಿ ಬೀನ್ಸ್‌, ದಪ್ಪಮೆಣಸಿನಕಾಯಿ, ನುಗ್ಗೇಕಾಯಿ, ಶುಂಠಿ, ಸುವರ್ಣಗೆಡ್ಡೆ ಮುಂತಾದ ತರಕಾರಿ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಬರೆ ಬೀಳುತ್ತಿದೆ.

ಕಳೆದ ವಾರ ಏರುಗತಿಯಲ್ಲಿ ಸಾಗುತ್ತಿದ್ದ ಟೊಮೆಟೊ ಬೆಲೆಯಲ್ಲಿ ಸದ್ಯ ನಿಯಂತ್ರಣ ಕಂಡುಬಂದಿದೆ. ₹ 30ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ಟೊಮೆಟೊ ಸದ್ಯ ₹ 20ಕ್ಕೆ ಇಳಿಕೆಯಾಗಿದೆ. ಎಲೆಕೋಸು, ಸೌತೆಕಾಯಿ, ಸಿಹಿಗುಂಬಳ, ಬೂದುಗುಂಬಳ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಫಾರಂ ಬೀನ್ಸ್‌ ₹80 –100ರವರೆಗೆ ಮಾರಾಟವಾಗುತ್ತಿದ್ದರೆ, ನಾಟಿ ಬೀನ್ಸ್‌ ₹ 100– ₹120ರವರೆಗೂ ಮಾರಾಟವಾಗುತ್ತಿದ್ದು ಹೊರೆಯಾಗಿವೆ.

‘ಬೇಸಿಗೆಯಂತಹ ಬಿಸಿಲು ಕಾಡುತ್ತಿದ್ದು ಮಾರುಕಟ್ಟೆಗೆ ತಾಜಾ ತರಕಾರಿ ಬರುತ್ತಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮುಂದೆ ಬಿಸಿಲು ಕಡಿಮೆಯಾದರೆ ಉತ್ತಮ ತರಕಾರಿ ಮಾರುಕಟ್ಟೆಗೆ ಬರುತ್ತದೆ. ಬೆಲೆಯೂ ಕಡಿಮೆಯಾಗಲಿದೆ’ ಎಂದು ತರಕಾರಿ ವ್ಯಾಪಾರಿ ಫರೀದ್‌ ಹೇಳಿದರು.

ಸೌತೆಕಾಯಿ, ಎಲೆಕೋಸು ₹ 25ರಂತೆ ಕೆ.ಜಿ ದೊರೆಯುತ್ತಿದೆ. ಬೆಂಡೆಕಾಯಿ, ಸೋರೆಕಾಯಿ, ಪಡವಲಕಾಯಿ, ಆಲೂಗೆಡ್ಡೆ ₹30, ಭಜಿ ಮೆಣಸಿನಕಾಯಿ, ಕ್ಯಾರೆಟ್‌, ಸೀಮೆಬದನೆಕಾಯಿ, ಹಾಗಲಕಾಯಿ, ಹೂಕೋಸು, ಅವರೆಕಾಯಿ, ಈರೇಕಾಯಿ, ಮೂಲಂಗಿ, ತೊಂಡೆಕಾಯಿ, ಬೀಟ್‌ರೂಟ್‌, ಸಿಹಿಗೆಣಸು, ಮರಗಣೆಸು, ಮಂಗಳೂರುಸೌತೆ ₹40, ಸುವರ್ಣಗೆಡ್ಡೆ, ಈರುಳ್ಳಿ ₹50ರಂತೆ ಮಾರಾಟವಾಗುತ್ತಿವೆ.

ಹಸಿರು ಮೆಣಸಿನಕಾಯಿ, ತಗಣಿಕಾಯಿ ₹60, ಶುಂಠಿ, ಫಾರಂ ಬೀನ್ಸ್‌, ಗೆಡ್ಡೆಕೋಸು ₹80, ನುಗ್ಗೇಕಾಯಿ, ನಾಟಿ ಬೀನ್ಸ್‌, ದಪ್ಪಮೆಣಸಿನಕಾಯಿ ₹100, ಹಸಿಬಟಾಣಿ ₹120, ಫಾರಂಬೆಳ್ಳುಳ್ಳಿ ₹160, ನಾಟಿ ಬೆಳ್ಳುಳ್ಳಿ ₹200ರಂತೆ ಮಾರಾಟವಾಗುತ್ತಿದ್ದು ಗ್ರಾಕರಿಗೆ ಹೊರೆಯಾಗಿವೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಒಂದು ನಿಂಬೆಹಣ್ಣು ₹ 5 ರಿಂದ ₹10 ರವರೆಗೂ ಮಾರಾಟವಾಗುತ್ತಿದ್ದವು.

ಸೊಪ್ಪುಗಳಲ್ಲಿ ನಾಟಿ ಕೊತ್ತಂಬರಿ ಮತ್ತು ಮೆಂತೆ ಸೊಪ್ಪು ದುಬಾರಿಯಾಗಿವೆ. ಕೀರೆ ₹ 10, ದಂಟು, ಪಾಲಾಕ್‌, ಕರಿಬೇವು ₹ 15, ಸಬ್ಬಸಿಗೆ, ಫಾರಂ ಕೊತ್ತಂಬರಿ, ಕಿಲ್‌ ಕೀರೆ ₹ 20, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ₹25ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಮೆಂತೆ ಸೊಪ್ಪು ಮಾರುಕಟ್ಟೆಯಲ್ಲಿ ಕೊರತೆಯಾಗಿದ್ದು ₹40ರಂತೆ ಪ್ರತಿ ಕಟ್ಟಿಗೆ ಮಾರಾಟವಾಗುತ್ತಿವೆ.

ಹೂವುಗಳಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ಹೂ ದುಬಾರಿಯಾಗಿದೆ. ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹50, ಬಿಳಿ ಸೇವಂತಿಗೆ ₹230, ಸೇವಂತಿಗೆ, ಬಟನ್ಸ್‌ ₹250, ಸಣ್ಣಗುಲಾಬಿ ₹300, ಸುಗಂಧರಾಜ ₹400, ಗಣಗಲೆ, ಕಲ್ಕತ್ತಾ ಮಲ್ಲಿಗೆ ₹500, ಮರಳೆ ₹600, ಕಾಕಡ ₹800, ಮಲ್ಲಿಗೆ ₹1 ಸಾವಿರ, ಕನಕಾಂಬರ ₹1,200ದವರೆಗೂ ಮಾರಾಟವಾಗುತ್ತಿವೆ.

ಮಾರು ತುಳಸಿ ₹30– 40, ಹಳದಿ ಚೆಂಡುಹೂ ಮತ್ತು ಕೆಂಪು ಚೆಂಡು ಹೂ ₹60, ಕಾಕಡ, ಗಣಗಲೆ ₹80, ಸೇವಂತಿಗೆ ₹30– 50, ಬಟನ್ಸ್‌ ₹60, ಗಣಗಲೆ, ಕಾಕಡ ₹80, ಕನಕಾಂಬರ ₹100 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ದಾಳಿಂಬೆ, ಶಿಮ್ಲಾ ಮತ್ತು ದೆಹಲಿ ಸೇಬಿನ ಬೆಲೆ ಹೆಚ್ಚಳವಾಗಿದೆ. ಪಪ್ಪಾಯ ₹25, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಸಪೋಟ ₹50, ಅನಾನಸ್‌, ಸೀಬೆ, ಸೀತಾಫಲ ₹60, ಕಿತ್ತಳೆ, ಮೂಸಂಬಿ ₹80, ಏಲಕ್ಕಿ ಬಾಳೆ ₹70 – ₹80, ಕಂದ್ರಾಕ್ಷಿ ₹120, ಕಪ್ಪು ದ್ರಾಕ್ಷಿ ₹130, ಕಿವಿಹಣ್ಣು (ಬಾಕ್ಸ್‌) ₹140, ದಪ್ಪದ್ರಾಕ್ಷಿ, ಕಿತ್ತಳೆ ₹180, ಶಿಮ್ಲಾ ಮತ್ತು ದೆಹಲಿ ಸೇಬು ₹160 – ₹200, ದಾಳಿಂಬೆ ₹270 ರಂತೆ ಪ್ರತಿ ಕೆಜಿಗೆ ಮಾರಾಟವಾಗುತ್ತಿವೆ.

ಮಾರುಕಟ್ಟೆಯಲ್ಲಿ ಉತ್ತಮ ತರಕಾರಿ ಕೊರತೆ ಬಿಸಿಲಿನ ಝಳಕ್ಕೆ ಒಣಗುತ್ತಿರುವ ತರಕಾರಿ ದುಬಾರಿ ಬೆಲೆಗೆ ಮೆಂತೆ ಸೊಪ್ಪು ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT