ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ | ಜಂಬೂಸವಾರಿ ತಾಲೀಮು ಯಶಸ್ವಿ

Published : 10 ಅಕ್ಟೋಬರ್ 2024, 16:14 IST
Last Updated : 10 ಅಕ್ಟೋಬರ್ 2024, 16:14 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಗುರುವಾರ ನಡೆದ ‘ಅಂತಿಮ ಹಂತದ ಜಂಬೂಸವಾರಿ ತಾಲೀಮು’ ಯಶಸ್ವಿಯಾಯಿತು. ಗಜಪಡೆ, ಅಶ್ವಾರೋಹಿದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಪಾಲ್ಗೊಂಡವು.

ಅ.12ರಂದು ನಡೆಯಲಿರುವ ಮೆರವಣಿಗೆಗೆ ನಡೆದ ಪೂರ್ವಾಭ್ಯಾಸ ಸುಗಮವಾಗಿ ಜರುಗಿತು. ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯು, ‘ಕುಮ್ಕಿ’ ಆನೆಗಳಾದ ಲಕ್ಷ್ಮಿ ಮತ್ತು ಹಿರಣ್ಯಾ ಪಾಲ್ಗೊಂಡಿದ್ದವು. ಅವುಗಳನ್ನು ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆ ತಂದು, ಅಂಬಾರಿ ಕಟ್ಟಿದ ನಂತರ ಯಾವ ಮಾರ್ಗದಲ್ಲಿ ಸಾಗಬೇಕೆಂದು ಸ್ಥಳ ಪರಿಚಯ ಮಾಡಿಸಲಾಯಿತು. ಬಳಿಕ ಗಣ್ಯರು ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಆ ಸ್ಥಳದಲ್ಲಿಯೇ ಇದ್ದ ವಿವಿಧ ಪೊಲೀಸ್ ತುಕಡಿಗಳ ಪೊಲೀಸರು ಪರೇಡ್‌ಗೆ ಸಜ್ಜಾದರು.

ಕವಾಯತು ಕಮಾಂಡರ್ ಅನುಮತಿ ಕೇಳಿದ ನಂತರ ಕುಮ್ಕಿ ಆನೆಗಳೊಂದಿಗೆ ಅಂಬಾರಿ ಆನೆ ಅಭಿಮನ್ಯು ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ನಿಂತ ಬಳಿಕ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿತು. ಆಗ, ವೇದಿಕೆಯಲ್ಲಿದ್ದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ವನ್ಯಜೀವಿ ವಿಭಾಗದ ಡಿಸಿಎಫ್ ಐ.ಬಿ.ಪ್ರಭುಗೌಡ, ಡಿಸಿಪಿ ಎಂ.ಮುತ್ತುರಾಜ್, ಸಿಎಆರ್ ಡಿಸಿಪಿ ಮಾರುತಿ ‘ಅಭಿಮನ್ಯು’ ಮೇಲೆ ಪುಷ್ಪಾರ್ಚನೆ ಮಾಡಿದರು. ಆ ವೇಳೆ ಕೋಟೆ ಮಾರಮ್ಮ ದೇವಾಲಯದ ಮುಂಭಾಗ ಸಿಡಿಮದ್ದು ಸಿಡಿಸುವ ತಂಡ 7 ಫಿರಂಗಿಗಳಲ್ಲಿ ಒಂದೇ ನಿಮಿಷದಲ್ಲಿ 21 ಬಾರಿ ಸಿಡಿಮದ್ದು ಸಿಡಿಸಿತು.

ರಾಷ್ಟ್ರಗೀತೆ ಪೂರ್ಣಗೊಳ್ಳುತ್ತಿದ್ದಂತೆಯೇ ಪಥಸಂಚಲನ ಆರಂಭಿಸಲಾಯಿತು. ಎಂಟು ಪೊಲೀಸ್ ತುಕಡಿಗಳು ಪೊಲೀಸ್ ಬ್ಯಾಂಡ್ ವಾದನದ ಶಬ್ದಕ್ಕೆ ಅನುಗುಣವಾಗಿ ಹೆಜ್ಜೆ ಹಾಕಿ ಶಿಸ್ತಿನಿಂದ ಸಾಗಿದವು. ನಂತರ ಅಶ್ವಪಡೆ ಹಾಗೂ ಅಂಬಾರಿ ಹೊತ್ತ ಆನೆ ಸಾಗಿತು.

‘ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಆನೆಗಳಿಗೆ ಅಗತ್ಯ ತಾಲೀಮು ನೀಡಲಾಗಿದೆ. ಮಾವುತರು ಹಾಗೂ ಕಾವಾಡಿಗಳು ಕೂಡ ಸಜ್ಜಾಗಿದ್ದಾರೆ. ಅಂತಿಮ ಹಂತದ ಜಂಬೂಸವಾರಿ ತಾಲೀಮು ಕೂಡ ಯಶಸ್ವಿಯಾಗಿದೆ’ ಎಂದು ವನ್ಯಜೀವಿ ವಿಭಾಗದ ಡಿಸಿಎಫ್‌ ಐ.ಬಿ. ಪ್ರಭುಗೌಡ ತಿಳಿಸಿದರು.

‘ಶನಿವಾರದ ಮೆರವಣಿಗೆಯಲ್ಲಿ 9 ಆನೆಗಳು ಪಾಲ್ಗೊಳ್ಳಲಿವೆ. ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಅಭಿಮನ್ಯುವಿನ ಬಲಭಾಗದಲ್ಲಿ ಲಕ್ಷ್ಮಿ, ಎಡಭಾಗದಲ್ಲಿ ಹಿರಣ್ಯಾ ಆನೆ ಕುಮ್ಕಿ ಆನೆಗಳಾಗಿ ಸಾಗಲಿವೆ. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಲಿದ್ದಾನೆ. ಉಳಿದ ನಾಲ್ಕು ಆನೆಗಳು ಸಾಲಾನೆಗಳಾಗಿ ಪಾಲ್ಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT