ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅ.3ರಿಂದ ನವರಾತ್ರಿ ಜನಪದ ರಂಗ ಉತ್ಸವ: ಸಚಿವ ಶಿವರಾಜ ತಂಗಡಗಿ ಚಾಲನೆ

Published : 30 ಸೆಪ್ಟೆಂಬರ್ 2024, 16:16 IST
Last Updated : 30 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಮೈಸೂರು: ‘ಅಳಿವಿನಂಚಿನ ಜಾನಪದ ಕಲಾ ಪ್ರಕಾರಗಳಿಗೆ ರಂಗಾಯಣವು ದಸರೆಯಲ್ಲಿ ವೇದಿಕೆ ಒದಗಿಸಲಿದ್ದು, ‘ನವರಾತ್ರಿ ಜನಪದ ರಂಗ ಉತ್ಸವ’ ಅ.3ರಿಂದ 11ರವರೆಗೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌.ತಂಗಡಗಿ ಉತ್ಸವ ಉದ್ಘಾಟಿಸುವರು’ ಎಂದು ರಂಗಾಯಣದ ನಿರ್ದೇಶಕ ಸತೀಶ್‌ ತಿಪಟೂರು ತಿಳಿಸಿದರು.

‘ರಾಜ್ಯ ವಿಶಿಷ್ಟ ಜಾನಪದ ಕಾವ್ಯ, ಬಯಲಾಟ, ದೊಡ್ಡಾಟ ಸಣ್ಣಾಟಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ. 3ರಂದು ಸಂಜೆ 5.30ಕ್ಕೆ ನಡೆಯುವ ಉದ್ಘಾಟನೆಯಲ್ಲಿ ತೊಗಲುಗೊಂಬೆಗಳ ಪ್ರದರ್ಶನಕ್ಕೆ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್‌ ನಾಗಭೂಷಣ್‌ ಚಾಲನೆ ನೀಡುವರು’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ರಾಜಶೇಖರ್‌, ಶಾಸಕ ಕೆ.ಹರೀಶ್‌ಗೌಡ, ಇಲಾಖೆಯ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ರಂಗ ಸಮಾಜದ ಸದಸ್ಯರಾದ ರಾಜಪ್ಪ ದಳವಾಯಿ, ಶಶಿಧರ ಬಾರಿಘಾಟ್‌, ಸುರೇಶ್‌ ಬಾಬು, ಲಕ್ಷ್ಮಿ ಚಂದ್ರಶೇಖರ್‌, ಕೆ.ರಾಮಕೃಷ್ಣಯ್ಯ, ಮಹಾಂತೇಶ್‌ ಎಂ.ಗಜೇಂದ್ರಗಡ, ಡಿಂಗ್ರಿ ನರೇಶ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಉತ್ಸವದಲ್ಲಿ ಮೂಡಲಪಾಯ ಯಕ್ಷಗಾನ, ‘ಮಂಟೇಸ್ವಾಮಿ ಕಾವ್ಯ’, ಬಳ್ಳಾರಿಯ ‘ರೇಣುಕಾ ಮಹಾತ್ಮೆ’ ಬಯಲಾಟ, ಹಾಸನದ ರಾಜಾರಾಮ ತೊಗಲುಗೊಂಬೆ ಮೇಳದ ‘ಮಾಯಾವಿ ಇಂದ್ರಜಿತ್‌’, ಸಣ್ಣಾಟಗಳಾದ ಬೆಳಗಾವಿಯ ಶ್ರೀಕೃಷ್ಣಪಾರಿಜಾತ, ‘ನರಕಾಸುರ ವಧೆ’ ಯಕ್ಷಗಾನ ಸೇರಿದಂತೆ ನಾಡಿನ ಎಲ್ಲ ವಿಭಾಗದ ಅಪೂರ್ವ ಜಾನಪದ ಕಲೆಗಳನ್ನು ಕರೆತರಲಾಗುತ್ತಿದೆ’ ಎಂದರು.

‘ಜಾನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕಲಾವಿದರಾದ ಮೈಸೂರು ಗುರುರಾಜ್, ವೀರನಗೌಡ ಮುದ್ದಟನೂರು, ದಾಕ್ಷಾಯಿಣಿ, ಪ್ರಭಾವತಿ, ವಿಠ್ಠಲ ಗೋವಿಂದ ಗುರುವ, ರಾಮಚಂದ್ರ ಗಣೇಶ ಹೆಗಡೆ, ಲಕ್ಷ್ಮಿಬಾಯಿ ಮಾದಾರ, ಎ.ಬಿ.ಶಂಕರಪ್ಪ, ಸರಸ್ವತಿ ಜುಲೇಖಾ ಬೇಗಂ, ಇಂದಿರಮ್ಮ ಅವರನ್ನು ನಿತ್ಯ ಸನ್ಮಾನಿಸಲಾಗುವುದು’ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ಉಪನಿರ್ದೇಶಕ ಎಂ.ಡಿ.ಸುದರ್ಶನ್, ಉತ್ಸವದ ಸಂಚಾಲಕಿ ಬಿ.ಎನ್.ಶಶಿಕಲಾ ಪಾಲ್ಗೊಂಡಿದ್ದರು.

ಸತೀಶ್ ತಿಪಟೂರು
ಸತೀಶ್ ತಿಪಟೂರು
ಮೂಡಲಪಾಯ ಯಕ್ಷಗಾನ ತೊಗಲುಗೊಂಬೆಯಾಟ ಸೇರಿದಂತೆ ನಾಡಿನ ಅಳಿವಿನಂಚಿನ ಜಾನಪದ ಕಲೆಗಳು ಈ ಬಾರಿಯ ರಂಗೋತ್ಸವದಲ್ಲಿ ಸ್ಥಾನ ಪಡೆದಿವೆ
ಸತೀಶ್‌ ತಿಪಟೂರು ರಂಗಾಯಣ ನಿರ್ದೇಶಕ
ಜಾನಪದ ನೃತ್ಯಗಳ ಆಕರ್ಷಣೆ
ಅ.3ರಿಂದ ನಿತ್ಯ ಸಂಜೆ 5.30ಕ್ಕೆ ಉತ್ತರ ಪ್ರದೇಶದ ಹೋಲಿ ಮಹಾರಾಷ್ಟ್ರದ ಲಾವಣಿ ತ್ರಿಪುರದ ಮಮಿತ ನೃತ್ಯ ಮಧ್ಯಪ್ರದೇಶದ ಬದಾಯಿ ಒಡಿಶಾದ ಬದಾನ್ ಕೇರಳದ ಸಿಂಗಾರಿ ಮೇಳಂ ರಾಜಸ್ಥಾನದ ಚಕ್ರಿ ಉತ್ತರಖಂಡದ ಥಡಿಯಾ ಚಾಫ್ಲಾ ಹಾಗೂ ಹರಿಯಾಣದ ಘೋಮರ್‌ ನೃತ್ಯ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT