ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೇ ತೈಲಬೆಲೆ ಹೆಚ್ಚು: ರಜಾಕ್

Published 18 ಜೂನ್ 2024, 14:43 IST
Last Updated 18 ಜೂನ್ 2024, 14:43 IST
ಅಕ್ಷರ ಗಾತ್ರ

ರಾಯಚೂರು: ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆ ಗ್ಯಾಸ್ ಬೆಲೆ ಬಡವರ ಕೈಗೆ ಸಿಗದಷ್ಟು ಪ್ರಮಾಣದಲ್ಲಿ ಹೆಚ್ಚಿಸಿದರೂ ಮೌನವಾಗಿದ್ದ ರಾಜ್ಯದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರ ಕೇವಲ ₹3 ತೆರಿಗೆ ವಿಧಿಸಿದ್ದಕ್ಕೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಖಂಡನೀಯ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ರಝಾಕ್ ಉಸ್ತಾದ ಟೀಕಿಸಿದ್ದಾರೆ.

ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಬೇಕಾಗಿರುವುದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ. ಆದರೆ, ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಡುವ ತಂತ್ರದ ಭಾಗವಾಗಿ ಹಾಗೂ ಅಪಪ್ರಚಾರ ಮಾಡಲು ಪ್ರತಿಭಟನೆ ನಡೆಸಿದೆ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೆಲೆ ಎಷ್ಟಿದೆ ಮತ್ತು ಕರ್ನಾಟಕದಲ್ಲಿ ಎಷ್ಟಿದೆ ಎನ್ನುವುದು ಪರಿಶೀಲನೆ ಮಾಡಲಿ. 2014ರಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್‌ಗೆ ಒಂದು ಬ್ಯಾರೆಲ್ ಇದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ಒಂದು ಲಿಟರ್ ಬೆಲೆ ₹72.26 ಹಾಗೂ ₹57.28, ಗೃಹಬಳಕೆ ಗ್ಯಾಸ ಬೆಲೆ ₹410 ಇತ್ತು. 2015ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 50 ಡಾಲರ್‌ಗೆ ಒಂದು ಬ್ಯಾರೆಲ್ ಆದರೂ ಬೆಲೆ ಇಳಿಕೆ ಮಾಡದ ಕೇಂದ್ರದ ಬಿಜೆಪಿ ಸರ್ಕಾರ, ಅಬಕಾರಿ ಸುಂಕ ಹೆಚ್ಚಿಸಿ ದೇಶದ ಜನರನ್ನು ದೋಚಿದೆ ಎಂದು ಆಪಾದಿಸಿದ್ದಾರೆ.

‌ಈಗ 2024ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 82 ಡಾಲರ್‌ಗೆ ಒಂದು ಬ್ಯಾರೆಲ್ ಇದ್ದರೂ, ಪೆಟ್ರೋಲ್ ಹಾಗೂ ಡೀಸೆಲ್ ಒಂದು ಲಿಟರ್ ಬೆಲೆ ₹102 ಹಾಗೂ ₹88, ಗೃಹ ಬಳಕೆ ಗ್ಯಾಸ್ ಬೆಲೆ ₹805 ಮಾಡಿರುವುದು ಯಾವ ಸರ್ಕಾರ ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಲಿ ಎಂದು ಸವಾಲು ಹಾಕಿದ್ದಾರೆ.

2014ರಲ್ಲಿ ಮನಮೋಹನ ಸಿಂಗ್ ಅವರ ಸರ್ಕಾರವಿದ್ದಾಗ ಒಂದು ಲೀಟರ್ ಪೆಟ್ರೋಲ್ ಮೇಲಿನ ಕೇಂದ್ರದ ಅಬಕಾರಿ ಸುಂಕ ₹9.48 ಇದ್ದದ್ದನ್ನು 2015ರಲ್ಲಿ ₹32.98 ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹3.56 ಇದ್ದದನ್ನು ₹31.83 ವರೆಗೆ ಹೆಚ್ಚಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಜರಿದಿದ್ದಾರೆ.

ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಮನಸ್ಸೋ ಇಚ್ಛೇ ಹೆಚ್ಚಿಸಿ ದೇಶದ ಜನರನ್ನು ಲೂಟಿ ಮಾಡಿದೆ. ಆ ಸಂದರ್ಭದಲ್ಲಿ ಬಾಯಿ ಮುಚ್ಚಿಕೊಂಡಿದ್ದ ಇದೇ ಬಿಜೆಪಿ ನಾಯಕರು ಈಗ ಪ್ರತಿಭಟಿಸುತ್ತಿರುವುದು ನಾಚಿಕೆಗೇಡಿತನದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಮದ್ಯಪ್ರದೇಶ ಹಾಗೂ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದೆ. ಎಲ್ಲವೂ ಗೊತ್ತಿದ್ದರೂ ರಾಜ್ಯ ಸರ್ಕಾರ ಬಡವರಿಗೆ ಕೊಡುತ್ತಿರುವ ಯೋಜನೆಯ ದಾರಿ ತಪ್ಪಿಸಲು ಇಲ್ಲಸಲ್ಲದ ಹೇಳಿಕೆ ಕೊಡುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT