ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: ಹಾರೋಬೆಲೆ ಏತ ನೀರಾವರಿಗೆ ಹೊಸ ರೂಪ

ನಿಷ್ಕ್ರೀಯಗೊಂಡಿದ್ದ ಜಲಾಶಯಕ್ಕೆ ಹೊಸ ಮೋಟಾರು, ಪಂ‍ಪ ಅಳವಡಿಕೆ
Published : 7 ಅಕ್ಟೋಬರ್ 2024, 7:35 IST
Last Updated : 7 ಅಕ್ಟೋಬರ್ 2024, 7:35 IST
ಫಾಲೋ ಮಾಡಿ
Comments

ಕನಕಪುರ: ರೈತರ ಜಮೀನಿಗೆ ಶಾಶ್ವತ ನೀರಾವರಿ ಕಲ್ಪಿಸಲು ನಿರ್ಮಾಣಗೊಂಡಿದ್ದ ಹಾರೋಬೆಲೆ ಏತ ನೀರಾವರಿ ಪಂಪಿಂಗ್ ಮೋಟಾರ್ ನಿಷ್ಕ್ರಿಯಗೊಂಡು ಹಲವು ವರ್ಷಗಳೇ ಕಳೆದಿತ್ತು. ಇದೀಗ ₹10ಕೋಟಿ ವೆಚ್ಚದಲ್ಲಿ ಪಂಪಿಂಗ್ ಮೋಟಾರ್ ಪುನಃಶ್ಚೇತನಗೊಳಿಸುವ ಮೂಲಕ ಕಾಲುವೆಯಲ್ಲಿ ನೀರು ಹರಿಸುವ ಕಾರ್ಯ ಆರಂಭಗೊಂಡಿದೆ.

ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿ ಪ್ರದೇಶ ಒಣ ಭೂಮಿಯಿಂದ ಕೂಡಿವೆ. ಅರ್ಕಾವತಿ ನೀರು ಇದೇ ಪ್ರದೇಶದಲ್ಲಿ ಹರಿಯುತ್ತದೆ. 1977ರಲ್ಲಿ ಅರ್ಕಾವತಿ ನದಿಗೆ ಹಾರೋಬೆಲೆ ಬಳಿ ಜಲಾಶಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.

ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಶಾಸಕ ಎಸ್.ಕರಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಟೇಲ್ ಎನ್.ಎಸ್ ಶಿವಣ್ಣಗೌಡ ಜಲಾಶಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಜಲಾಶಯ ನಿರ್ಮಾಣ ಕಾಮಗಾರಿ 2004ಕ್ಕೆ ಪೂರ್ಣಗೊಂಡಿತ್ತು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜಲಾಶಯದ ಉದ್ಘಾಟನೆ ನೆರವೇರಿಸಿದ್ದರು.

ಗುರುತ್ವಾಕರ್ಷಣೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಾಗಿದೆ. ಅದಲ್ಲದೆ ಎತ್ತರವಾದ ಪ್ರದೇಶಗಳಿಗೆ ಏತ ನೀರಾವರಿ ಮೂಲಕ ನೀರು ಹರಿದು ಹೋಗಲು ಎಡ ಮತ್ತು ಬಲ ದಂಡೆ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದರ ಮೂಲಕ ಕೋಡಿಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿ ರೈತರ ಜಮೀನಿಗೆ ನೀರು ಹರಿಸಲಾಗುವುದು.

ಲಿಫ್ಟ್ ಇರಿಗೇಶನ್‌ಗೆ ಅಳವಡಿಸಿದ್ದ ಪಂಪ್‌ಗಳು ಗರಿಷ್ಠ 15ವರ್ಷ ಮಾತ್ರ ಸಮರ್ಪಕವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದವು. ನಂತರ ಸಾಮರ್ಥ್ಯ ಕಳೆದುಕೊಂಡು ನಿಷ್ಕ್ರಿಯಗೊಂಡಿದ್ದವು. ಜಲ ಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾರೋಬೆಲೆ ಜಲಾಶಯದ ಎಡ ಮತ್ತು ಬಲದಂಡೆ ಏತ ನೀರಾವರಿ ಪಂಪ್‌ಗಳ ಬದಲಾವಣೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದರು.

2024ರ ಮಾರ್ಚ್ ತಿಂಗಳಲ್ಲಿ ಇಲಾಖೆಯು ಟೆಂಡರ್ ನೀಡಿತ್ತು. ಎರಡು ಕಡೆ ಪಂಪ್‌ಗಳ ಬದಲಾವಣೆ, ಅವುಗಳಿಗೆ ಸಂಬಂಧಿಸಿದ ಪರಿಕರಗಳ ಬದಲಾವಣೆಗೆ ₹10ಕೋಟಿ ಕಾಮಗಾರಿಯ ಟೆಂಡರ್‌ ನೀಡಲಾಗಿತ್ತು. ಲಿಫ್ಟ್ ಇರಿಗೇಶನ್‌ನಿಂದ ಸುಮಾರು 8,000 ಎಕರೆ ಭೂಮಿಗೆ ನೀರಾವರಿ ಒದಗಿಸಲಾಗುವುದು. 10 ಸಾವಿರಕ್ಕೂ ಹೆಚ್ಚು ರೈತರು ಜಲಾಶಯದ ನೀರಿನಿಂದ ಕೃಷಿ ಮಾಡಿ ತಮ್ಮ ಬದುಕು ಕಟ್ಟಿಕೊಳ್ಳಲಿದ್ದಾರೆ.

ವರ್ಷದ 365 ದಿನವೂ ನೀರು ಪೂರೈಕೆಯಾಗಲಿದೆ. ರೇಷ್ಮೆ, ಭತ್ತ, ರಾಗಿ ಸೇರಿದಂತೆ ಅನೇಕ ಬೆಳೆ ಮಾಡಬಹುದಾಗಿದೆ. ರೇಷ್ಮೆ ಜತೆಗೆ ಹೈನುಗಾರಿಕೆಯನ್ನು ರೈತರು ಈ ಭಾಗದಲ್ಲಿ ಮಾಡಬಹುದಾಗಿದೆ.

ಹೊಸ ತಂತ್ರಜ್ಞಾನ: ಜಲಾಶಯದಲ್ಲಿ ಮೊದಲು ಅಳವಡಿಸಿದ ಪಂಪ್‌ಗಳು ಆಳದಿಂದ ಕೆಲಸ ಮಾಡುತ್ತಿರಲಿಲ್ಲ. ಆದರೆ, ಈಗ ಹೊಸ ಹೊಸತಂತ್ರಜ್ಞಾನದ ಸಬ್ ಮರ್ಸಿಬಲ್ ಪಂಪ್‌ ಅಳವಡಿಸಿದ್ದು 54 ಅಡಿ ಆಳದಿಂದ ನೀರು ಎತ್ತಬಹುದಾಗಿದೆ.

ಪ್ರತ್ಯೇಕ ಫೀಡರ್: ಹಾರೋಬೆಲೆ ಜಲಾಶಯದ ಲಿಫ್ಟ್ ಇರಿಗೇಶನ್‌ಗೆ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್ ಫೀಡರ್‌ ಅಳವಡಿಸಿದ್ದು 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಆಗಲಿದೆ. ಹಾಗಾಗಿ ಎರಡು ಕಾಲುವೆಯಲ್ಲೂ ನಿರಂತರವಾಗಿ ರೈತರ ಜಮೀನಿಗೆ ನೀರು ಹರಿಯಲಿದೆ.

ಉದ್ದದ ಕಾಲುವೆ: ಬಲದಂಡೆ ಏತ ನೀರಾವರಿ ಕಾಲುವೆ 23ಕಿ.ಮೀ ಉದ್ದವಿದೆ. 4298 ಎಕರೆ ಭೂಮಿಗೆ ನೀರು ಪೂರೈಕೆಯಾಗಲಿದೆ. 400 ಎಚ್‌ಪಿವಿಟಿ ಪಂಪ್‌ ಅಳವಡಿಸಲಾಗಿದೆ. ಎಡದಂಡ ನಾಲೆಯು 21 ಕಿಲೋಮೀಟರ್ ಉದ್ದವಿದೆ. 3598 ಎಕರೆ ಭೂಮಿಗೆ ನೀರಾವರಿ ಒದಗಿಸಲಿದೆ. 450 ಎಚ್‌ಪಿ ಪಂಪ್ ಅಳವಡಿಸಲಾಗಿದೆ.

ಯಂತ್ರೋಪಕರಣ: ಹಳೆ ಪಂಪ್‌, ಮೋಟಾರ್ ಬದಲಾಯಿಸಿ ಹೊಸದಾಗಿ 4 ಎಚ್‌ಪಿಸಬ್ ಮರ್ಸಿಬಲ್ ಟರ್ಬೈನ್ ಪೈಪ್, 1000 ಕೆ.ವಿ.ಎ ಪವರ್ ಟ್ರಾನ್ಸ್ ಫಾರ್ಮರ್, 63ಕೆ.ವಿ ಆಕ್ಸಿಲರಿ ಟ್ರಾನ್ಸ್ ಫಾರ್ಮರ್, ಔಟ್ ಡೋರ್ ಪ್ಯಾನೆಲ್, ಇನ್ಕಮರ್ ಅಂಡ್ ಔಟ್ ಗೋಯಿಂಗ್ ಪ್ಯಾನಲ್, ಕೆಪಾಸಿಟರ್ ಬ್ಯಾಂಕ್, ಸಾಫ್ಟ್ ಸ್ಟಾರ್ಟರ್, ನಾನ್ ರಿಟರ್ನ್ ವಾಲ್ ಅಳವಡಿಸಲಾಗಿದೆ.

ಹೊಸದಾಗಿ ಪಂಪ್ ಅಳವಡಿಸಿದ ಮೇಲೆ ಕಾಲುವೆಗೆ ನೀರು ಹರಿಸುತ್ತಿರುವುದು
ಹೊಸದಾಗಿ ಪಂಪ್ ಅಳವಡಿಸಿದ ಮೇಲೆ ಕಾಲುವೆಗೆ ನೀರು ಹರಿಸುತ್ತಿರುವುದು
ಹೊಸ ಮಿಷಿನರಿಗಳನ್ನು ಅಳವಡಿಸಿದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡುತ್ತಿರುವುದು
ಹೊಸ ಮಿಷಿನರಿಗಳನ್ನು ಅಳವಡಿಸಿದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡುತ್ತಿರುವುದು
ವಲಸೆ ಹೋಗುವುದು ತಪ್ಪಿಸಿ
ಈ ಭಾಗದ ಜನರು ಜೀವನಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ ಹುಟ್ಟೂರಿನಲ್ಲಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಅರೆಕೊಪ್ಪದ ಬಳಿ ಸಮದಟ್ಟು ಇಲ್ಲದ ಕಾರಣ ನೀರು ಕಾಲುವೆಯಲ್ಲಿ ಮುಂದೆ ಹೋಗುತ್ತಿಲ್ಲ. 2.ಕಿ.ಮೀ ಶಿವನದೊಡ್ಡಿ ಮತ್ತು ಬಿಎಂಬಳ್ಳಿ ದೊಡ್ಡಿವರೆಗೆ ನಾಲೆಯನ್ನು ಹೊಸದಾಗಿ ಮಾಡಬೇಕು ಮತ್ತು ಉಪ ಕಾಲುವೆ ಅಭಿವೃದ್ಧಿಪಡಿಸಬೇಕು. ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಸಿ ಕಾಲುವೆ ಕೊನೆವರೆಗೂ ಮುಂದುವರಿಸಿ ನೀರು ಎಲ್ಲ ರೈತರಿಗೂ ಸಿಗುವಂತೆ ಮಾಡಬೇಕು. ಶಿವನೇಗೌಡ ಶಿವಕುಮಾರ್ ರೈತ ಉಯ್ಯಂಬಳ್ಳಿ ಹೋಬಳಿ ಕನಕಪುರ
ಕಾಲುವೆ ಸರಿಪಡಿಸಲು ಆಗ್ರಹ
ಹಾರೋಬೆಲೆ ಲಿಫ್ಟ್ ಇರಿಗೇಶನ್‌ಗೆ ಅಳವಡಿಸಿದ್ದ ಪಂಪ್‌ ಕೆಟ್ಟಿದ್ದರಿಂದ ಎರಡು ವರ್ಷದಿಂದ ಎಡ ಮತ್ತು ಬಲ ದಂಡೆ ಕಾಲುವೆಯಲ್ಲಿ ನೀರು ಹೋಗದೆ ಕಾಲುವೆಗಳು ಹಾಳಾಗಿವೆ. ಕಾಲುವೆಯಲ್ಲಿ ಕಸ ತುಂಬಿಕೊಂಡು ಮುಂದೆ ನೀರು ಹೋಗದಂತೆ ಆಗಿದೆ. ಹೊಸದಾಗಿ ಪಂಪ್‌ ಅಳವಡಿಸಿದ್ದು ಈಗಲಾದರೂ ಕಾಲುವೆಗಳನ್ನು ಸರಿಪಡಿಸಿ ಕೊನೆಯವರೆಗೂ ನೀರು ಹರಿಯುವಂತೆ ಮಾಡಬೇಕು. ಪಟೇಲ್ ಎನ್.ಎಸ್ ಶಿವಕುಮಾರ್ ರೈತ ಮುಖಂಡ ನಲ್ಲಹಳ್ಳಿ ಗ್ರಾಮ ಕಾಲುವೆ ಕೊನೆವರೆಗೂ ನೀರು ಅರ್ಕಾವತಿ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆ ಪೂರ್ಣವಾಗಿ ಕಾರ್ಯಕ್ಷಮತೆ ಕಳೆದುಕೊಂಡಿದ್ದವು. ಕಾಮಗಾರಿ ಪೂರ್ಣಗೊಳಿಸಿ ಚಾಲನೆ ನೀಡಲಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿರುವುದರಿಂದ ಏತ ನೀರಾವರಿ ಮೂಲಕ ಎರಡು ಕಡೆ ಕಾಲುವೆಗಳಲ್ಲಿ ವೇಗ ಮತ್ತು ರಭಸವಾಗಿ ನೀರು ಹರಿಯುವುದರಿಂದ ಕಾಲುವೆ ಕೊನೆವರೆಗೂ ರೈತರಿಗೆ ನೀರು ಸಿಗಲಿದೆ.  ಮೋಹನ್.ಎಂ.ಎನ್ ಅರ್ಕಾವತಿ ಜಲಾಶಯ ನಾಲಾ ವಿಭಾಗ ಹಾರೋಬೆಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT