ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಮಳೆಗಾಲದಲ್ಲಿ ಈಜುಕೊಳ ಆಗುವ ಶಾಲೆ: ಸೋರುವ ಹೆಂಚುಗಳ ಕೆಳಗೆ ಮಕ್ಕಳಿಗೆ ಪಾಠ

ಸುಧೀಂದ್ರ ಸಿ.ಕೆ.
Published 4 ಜುಲೈ 2024, 4:32 IST
Last Updated 4 ಜುಲೈ 2024, 4:32 IST
ಅಕ್ಷರ ಗಾತ್ರ

ಮಾಗಡಿ: ಹೊಡೆದಿರುವ ಹೆಂಚು, ಮಳೆ ಬಂದರೆ ಕೊಠಡಿ ಒಳಗೆ ಸೋರುವ ನೀರು, ಕುಸಿದಿರುವ ಗೋಡೆ, ಕಿತ್ತು ಹೋಗಿರುವ ನೆಲ... ಇದು ತಾಲ್ಲೂಕಿನ ಕರಲಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯಾಗಿದೆ.

ಮಾಗಡಿ - ರಾಮನಗರ ಮುಖ್ಯ ರಸ್ತೆಯಲ್ಲಿರುವ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಐದು ಕೊಠಡಿಗಳಿದ್ದು, ಎರಡು ಕಡೆ ಶಾಲೆ ನಡೆಯುತ್ತಿದೆ. ಒಂದು ಕಡೆ ಕಟ್ಟಡದ ಕಿಟಕಿ, ಬಾಗಿಲು ಮುರಿದು ಹೋಗಿರುವ ಜತೆಗೆ ನೆಲವೂ ಕಿತ್ತು ಹೋಗಿದ್ದು, ಮಳೆಗಾಲದಲ್ಲಿ ಶಾಲೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಇದರಿಂದ ಶಾಲಾ ಮಕ್ಕಳಿಗೆ ಪಾಠ ಕೇಳಲು ತೊಂದರೆಯಾಗುತ್ತಿದೆ.

ಮತ್ತೊಂದು ಕಡೆ ಕೋತಿಗಳ ಕಾಟ ಹೆಚ್ಚಾಗಿದ್ದು, ಹೆಂಚುಗಳು ಹೊಡೆದು ಹೋಗಿ ಮಳೆ ಬಂದರೆ ಕಟ್ಟಡ ಸೋರುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು, ಅನುದಾನ ಬಂದ ಕೂಡಲೇ ಹೆಂಚನ್ನು ತೆಗೆದು ಶೀಟ್ ಹಾಕಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ನರಸಯ್ಯ ತಿಳಿಸಿದರು.

ಶಾಲೆಯಲ್ಲಿದ್ದ ಹಳೆಯ ಕಟ್ಟಡ ಬಿದ್ದು ಹೋಗಿದೆ. ಕಳೆದ ವರ್ಷ ಒಂದು ಭಾಗದ ಶಾಲಾ ಕಟ್ಟಡದ ಚಾವಣಿ ರಿಪೇರಿ ಮಾಡಿಸಲಾಗಿದ್ದು, ಕಿಟಕಿ, ಬಾಗಿಲುಗಳ ರಿಪೇರಿಯಾಗಿಲ್ಲ. ಇದರಿಂದ 5, 6ನೇ ತರಗತಿ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.

ಶಾಲಾ ಆವರಣದಲ್ಲಿ ಶಿಥಿಲ ದೇವಾಸ್ಥಾನ ಕಟ್ಟಡವಿದ್ದು, ಆತಂಕ ಪಡುವಂತಾಗಿದೆ. ಇದನ್ನು ತೆರವುಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಪಂಚಾಯಿತಿಯವರಿಗೆ ಶಾಲಾ ಆಡಳಿತ ಮನವಿ ಮಾಡಿದೆ.

ಶಾಲಾ ಆವರಣದಲ್ಲಿದ್ದ ಹಳೆಯ ಕಟ್ಟಡ ಬಿದ್ದು ಹೋಗಿರುವುದು
ಶಾಲಾ ಆವರಣದಲ್ಲಿದ್ದ ಹಳೆಯ ಕಟ್ಟಡ ಬಿದ್ದು ಹೋಗಿರುವುದು
ಹೆಂಚುಗಳು ಕದಲಿ ಬಿರುಕು ಬಿಟ್ಟಿರುವುದು
ಹೆಂಚುಗಳು ಕದಲಿ ಬಿರುಕು ಬಿಟ್ಟಿರುವುದು
ಸಭೆಯಲ್ಲಿ ಶಾಲಾ ಸಮಸ್ಯೆಗಳ ಚರ್ಚೆ  ಕಟ್ಟಡದ ಹೆಂಚಿನ ಸಮಸ್ಯೆ ಇಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಕೋತಿಗಳು ಪದೇ ಪದೇ ಹೆಂಚುಗಳನ್ನು ಹೊಡೆದು ಹಾಕುತ್ತಿರುವುದರಿಂದ ಮಕ್ಕಳು ಮಳೆಗಾಲದಲ್ಲಿ ಕೂರಲು ತೊಂದರೆಯಾಗುತ್ತಿದೆ. ಹಾಗಾಗಿ ಈ ಬಾರಿಯ ಪಂಚಾಯಿತಿ ಶಾಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಚಿತ್ರಾ ರವಿ ಉಪಾಧ್ಯಕ್ಷರು ಹಂಚಿಕುಪ್ಪೆ ಗ್ರಾಮ ಪಂಚಾಯಿತಿ
ಕಟ್ಟಡ ಸಮಸ್ಯೆ ಬಗೆಹರಿಸಲಿ ಸರ್ಕಾರಿ ಶಾಲೆಗೆ ಮಕ್ಕಳು ಹೋಗುವುದೇ ಕಡಿಮೆ. ಬಡವರು ಹೆಚ್ಚಾಗಿ ಸರ್ಕಾರಿ ಶಾಲೆಯನ್ನೇ ನಂಬಿರುವುದರಿಂದ ಸರ್ಕಾರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಜತೆಗೆ ಶಿಕ್ಷಣ ಇಲಾಖೆ ಕೂಡಲೇ ಕಟ್ಟಡ ಸಮಸ್ಯೆ ಬಗೆಹರಿಸಬೇಕು.
ದಯಾನಂದ್ ಕರಲಮಂಗಲ ನಿವಾಸಿ
ಶಾಲಾ ಸಮಸ್ಯೆ ಬಗೆಹರಿಸಲಾಗುವುದು ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕರ ಜತೆ ಚರ್ಚೆ ನಡೆಸಿ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು. ಸರ್ಕಾರದಿಂದ ಅನುದಾನ ಬಂದ ಕೂಡಲೇ ಶಾಲಾ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT