ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಬಾಯಾರಿದ ಮಲೆನಾಡಿಗೆ ಬಾರೋ ಮಳೆರಾಯ

ಆಗುಂಬೆಯಲ್ಲೂ ಬರದ ಛಾಯೆ; ಹೊಸನಗರದಲ್ಲಿ ಬೋರ್‌ನಲ್ಲಿ ನೀರು ಸಿಗುತ್ತಿಲ್ಲ!
Published 26 ಜೂನ್ 2023, 6:31 IST
Last Updated 26 ಜೂನ್ 2023, 6:31 IST
ಅಕ್ಷರ ಗಾತ್ರ

ವೆಂಕಟೇಶ ಜಿ.ಎಚ್‌.

ಶಿವಮೊಗ್ಗ: ಉತ್ತರದ ಮಾಸಿನ್‌ರಾಮ್, ಚಿರಾಪುಂಜಿ ನಂತರ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆ. ಮಳೆಯ ತವರು, ಜಲ ಭಂಡಾರಗಳ ಬೀಡು...

ಹೀಗೆ ಶಿವಮೊಗ್ಗ ಜಿಲ್ಲೆಗೆ ಇರುವ ಸಾಂಪ್ರದಾಯಿಕ ವಿಶೇಷಣಗಳನ್ನು ಈ ಬಾರಿಯ ಬೇಸಿಗೆಯ ಬಿರುಬಿಸಿಲು ಅಳಿಸಿ ಹಾಕಿದೆ. ಇತ್ತ ಮಳೆರಾಯ ಬಿಗುಮಾನ ತೋರುತ್ತಿದ್ದು, ಜೂನ್ ಕೊನೆಯ ವಾರ ಬಂದರೂ ಮುಂಗಾರು ಕುಂಟುತ್ತಿದೆ. ಇದರಿಂದ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಮಲೆನಾಡಿನ ಜನರನ್ನು ಹೈರಾಣಾಗಿಸಿದೆ.  

ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಮೂಲ ಗಾಜನೂರಿನ ತುಂಗಾ ಜಲಾಶಯ. ಸದ್ಯ ಜಲಾಶಯದಲ್ಲಿ ಕೇವಲ ಅರ್ಧ ಟಿಎಂಸಿ ಅಡಿ ನೀರು ಸಂಗ್ರಹ ಇದ್ದು, ಡೆಡ್‌ ಸ್ಟೋರೇಜ್ ಹಂತ ತಲುಪಿದೆ. ಮುಂದಿನ 15 ದಿನಕ್ಕಾಗುವಷ್ಟು ನೀರು ಲಭ್ಯವಿದೆ. ಶಿವಮೊಗ್ಗ ಮಾತ್ರವಲ್ಲದೇ ಜಿಲ್ಲೆಯ ಬಹುತೇಕ ಕಡೆ ಇದೇ ಸ್ಥಿತಿ. ನೀರಿನ ಮೂಲಗಳು ತಳ ಕಂಡಿವೆ. ಮಳೆಯ ಮುನಿಸು ಹೀಗೆಯೇ ಮುಂದುವರಿದು ನೀರ ಪಸೆ ಆರಿದರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಕಳೆದೆರಡು ದಿನಗಳಿಂದ ಮೋಡ ಸಾಂದ್ರಗೊಂಡು ಆಗಾಗ ಮಳೆಯ ದರ್ಶನವಾದರೂ ಅದು ಬಿರುಸುಗೊಳ್ಳುತ್ತಿಲ್ಲ. ಇದು ನಿರಾಶೆ, ಆತಂಕಕ್ಕೂ ಕಾರಣವಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮುಂಗಾರುಪೂರ್ವ ಮಳೆ ಸುರಿಯದ ಕಾರಣ, ಎಂದೆಂದೂ ಕುಡಿಯುವ ನೀರಿಗೆ ಪರದಾಡದ ಗ್ರಾಮಗಳಲ್ಲೂ ಈ ಬಾರಿ ತೀವ್ರ ಬರ ಕಂಡುಬಂದಿದೆ.

ಜೂನ್ ಕೊನೆಯ ವಾರದಲ್ಲೂ ಮಳೆ ಕಾಣೆಯಾಗಿದೆ. ಶರಾವತಿ ಮುಳುಗಡೆ ಭಾಗದ ನಗರ, ಹುಂಚ, ಕಸಬಾ ಹೋಬಳಿಯಲ್ಲೂ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದೆ. ಕಳೆದೆರಡು ತಿಂಗಳಿಂದ ಕುಡಿಯುವ ನೀರು ಪೂರೈಸಲು ತಾಲ್ಲೂಕು ಆಡಳಿತ ಹರಸಾಹಸ ಪಟ್ಟಿದೆ.

ಟ್ರಾಕ್ಟರ್ ಮೂಲಕ ನೀರು: ಮಲೆನಾಡಿನ ಹೃದಯ ಭಾಗವಾದ ಹೊಸನಗರ ತಾಲ್ಲೂಕಿನಲ್ಲಿ ಟ್ರ್ಯಾಕ್ಟರ್ ಮೂಲಕ ಕುಡಿಯುವ ನೀರು ಪೂರೈಸುವುದು ತೀರಾ ಅಪರೂಪ. ಆದರೆ, ಈಗ ಅದು ಸಾಮಾನ್ಯ ಸಂಗತಿ. ನೀರಿನ ಸಮಸ್ಯೆ ಹೋಗಲಾಡಿಸಲು ತಾಲ್ಲೂಕು ಆಡಳಿತ ಮೇ ತಿಂಗಳಿನಿಂದಲೇ ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲು ಮುಂದಾಗಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಈಗ ನೀರು ತುಂಬಿಕೊಂಡ ಟ್ರ್ಯಾಕ್ಟರ್‌ಗಳ ತಿರುಗಾಟ ಸಾಮಾನ್ಯ.

ಕೊಳವೆಬಾವಿಯಲ್ಲೂ ನೀರಿಲ್ಲ: ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಂಡುಬಂದಿರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಕೊರೆಯಿಸಿದ ಒಟ್ಟು ಏಳು ಕೊಳವೆಬಾವಿಗಳಲ್ಲಿ ಜೇನಿ ಮತ್ತು ಮಾರುತೀಪುರ ಗ್ರಾಮದಲ್ಲಿ ಮಾತ್ರ ಯಶಸ್ವಿಯಾಗಿದ್ದು ಬಿಟ್ಟರೆ ಉಳಿದ ಕಡೆ ಕೊಳವೆ ಬಾವಿ ವಿಫಲವಾಗಿವೆ. ನೀರು ಬೀಳದ ಕಾರಣ ಕೊಳವೆಬಾವಿ ಕೊರೆಯಿಸುವ ಕಾಯಕವನ್ನು ತಾಲ್ಲೂಕು ಆಡಳಿತ ಕೈಬಿಟ್ಟಿದೆ.

ನೀರು ಬೇಡುವ ಸ್ಥಿತಿ: ಪಟ್ಟಣದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಪಟ್ಟಣ ಪಂಚಾಯಿತಿ ಎರಡು ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದರೂ ಕೆಲವೆಡೆ ವಾರದಿಂದ ನೀರಿಲ್ಲ ಎಂಬ ಸ್ಥಿತಿ ಇದೆ. ನೀರಿಗಾಗಿ ಕಂಡವರ ಮನೆ ಬಾಗಿಲಿನಲ್ಲಿ ನಿಂತು ಬೇಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಎರಡು-ಮೂರು ದಿನಕ್ಕೊಮ್ಮೆ ನೀರು: ಶಿಕಾರಿಪುರ ತಾಲ್ಲೂಕಿನಲ್ಲೂ ಜಲಾಶಯ ಹಾಗೂ ಕೆರೆಕಟ್ಟೆಗಳು ನೀರಿಲ್ಲದೇ ಬರಿದಾಗಿವೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಂಜನಾಪುರ ಜಲಾಶಯ ಡೆಡ್ ಸ್ಟೋರೆಜ್ ಹಂತ ತಲುಪಿದೆ. ಇದೇ ನೀರನ್ನು ಪುರಸಭೆ ಎರಡು– ಮೂರು ದಿನಗಳಿಗೊಮ್ಮೆ ಪೂರೈಸುತ್ತಿದೆ. ಈ ನೀರನ್ನು ಮುಂದಿನ 15 ದಿನಗಳು ಮಾತ್ರ ಪೂರೈಸಲು ಸಾಧ್ಯವಾಗಲಿದೆ. ಮಳೆಯಾಗದಿದ್ದರೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಕೆಲವು ಬಡಾವಣೆಗಳಿಗೆ ಪುರಸಭೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಟ್ಯಾಂಕರ್ ನೀರು ಸಂಗ್ರಹಿಸಲು ಜನರು ಪೈಪೋಟಿಗಿಳಿದ ದೃಶ್ಯ ಕಾಣಸಿಗುತ್ತಿದೆ.

ಪಟ್ಟಣದಲ್ಲಿ ದಿನಕ್ಕೆ 75 ಲಕ್ಷ ಲೀಟರ್ ಕುಡಿಯುವ ನೀರು ಪುರಸಭೆ ಸರಬರಾಜು ಮಾಡುತ್ತಿತ್ತು. ಈಗ ಅದು ಎರಡು ದಿನಗಳಿಗೊಮ್ಮೆ 50 ಲಕ್ಷ ಲೀಟರ್‌ಗೆ ಇಳಿದಿದೆ. ಉಳಿದಂತೆ 120 ಕೊಳವೆ ಬಾವಿಗಳ ಮೂಲಕ ನೀರು ಪೂರೈಸುತ್ತಿದೆ.

(ಪೂರಕ ಮಾಹಿತಿ: ರವಿ ನಾಗರಕೂಡಿಗೆ, ಎಚ್.ಎಸ್. ರಘು)

ಸಾಗರ ತಾಲ್ಲೂಕಿನ ಮಾಕೋಡು ಗ್ರಾಮಕ್ಕೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಸಾಗರ ತಾಲ್ಲೂಕಿನ ಮಾಕೋಡು ಗ್ರಾಮಕ್ಕೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಶಿಕಾರಿಪುರ ಪಟ್ಟಣದಲ್ಲಿ ಪುರಸಭೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ
ಶಿಕಾರಿಪುರ ಪಟ್ಟಣದಲ್ಲಿ ಪುರಸಭೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ
ತೀರ್ಥಹಳ್ಳಿ ತಾಲ್ಲೂಕಿನ ಬಾಳಗಾರು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ
ತೀರ್ಥಹಳ್ಳಿ ತಾಲ್ಲೂಕಿನ ಬಾಳಗಾರು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ
ಶ್ರೀಕಾಂತ್ ಬಿಳಚಿಕಟ್ಟೆ
ಶ್ರೀಕಾಂತ್ ಬಿಳಚಿಕಟ್ಟೆ
ಶೈಲಾ ಎನ್
ಶೈಲಾ ಎನ್
ಪರಮೇಶ್
ಪರಮೇಶ್
ಮಳೆ ಕೊರತೆಯಿಂದಾಗಿ ಆಗುಂಬೆ ತಪ್ಪಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊರತೆ ಇದೆ. ಟ್ಯಾಂಕರ್‌ ನೀರು ಪ್ರಭಾವಿಗಳ ಮನೆಗೆ ಮಾತ್ರ ಸೇರುತ್ತಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಶ್ರೀಕಾಂತ್‌ ಬಿಳಚಿಕಟ್ಟೆ ಗ್ರಾಮಸ್ಥ
ಸಾಧಾರಣ ಮಳೆ ಬಂದಿದ್ದರಿಂದ ಕುಡಿಯುವ ನೀರಿಗೆ ಬೇಡಿಕೆ ಕಡಿಮೆಯಾಗಿದೆ. 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿದ್ದ ನೀರಿನ ಬೇಡಿಕೆ ಈಗ ನಾಲ್ಕೈದು ಪಂಚಾಯಿತಿಗೆ ಇಳಿದಿದೆ. ಜುಲೈ ಮಧ್ಯ ಭಾಗದವರೆಗೆ ನೀರು ಪೂರೈಕೆಗೆ ತೊಂದರೆ ಇಲ್ಲ.
ಶೈಲಾ ಎನ್‌ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಇಒ
ಜೂನ್ ಕೊನೆಯ ವಾರ ಮುಂಗಾರು ಸ್ವಲ್ಪ ಚುರುಕಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದು ನೀರಿನ ಬರ ತೀರುವ ವಿಶ್ವಾಸವಿದೆ.
ನರೇಂದ್ರ ಕುಮಾರ್ ಹೊಸನಗರ ತಾಲ್ಲೂಕು ಪಂಚಾಯಿತಿ ಇಒ

56 ಗ್ರಾಮಗಳಿಗೆ ಟ್ಯಾಂಕರ್ ನೀರು ಎಂ. ರಾಘವೇಂದ್ರ ಸಾಗರ: ಮುಂಗಾರು ವಿಳಂಬದ ಕಾರಣ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಮೂಲವಾಗಿದ್ದ ತೆರೆದ ಬಾವಿಗಳು ಬತ್ತಿವೆ. ತಾಲ್ಲೂಕು ಆಡಳಿತ ತಾಲ್ಲೂಕಿನ 56 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಜೂನ್ 23ರವರೆಗೆ ಅರಳಗೋಡು ಮತ್ತು ಆನಂದಪುರಂ ಪಂಚಾಯಿತಿ ತಲಾ 4 ಹೆಗ್ಗೋಡು ಪಂಚಾಯಿತಿಯ 14 ಭಾನ್ಕುಳಿ ಪಂಚಾಯಿತಿ 6 ಯಡಜಿಗಳೆಮನೆ ಹಾಗೂ ಖಂಡಿಕಾ ಪಂಚಾಯಿತಿಯ ತಲಾ 5 ಕಲ್ಮನೆ ಪಂಚಾಯಿತಿಯ 4 ತುಮರಿ ಪಂಚಾಯಿತಿಯ 3 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಶನಿವಾರದಿಂದ ತಾಲ್ಲೂಕಿನಲ್ಲಿ ಹದ ಮಳೆ ಆರಂಭವಾಗಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಮಳೆ ಮತ್ತೆ ಕೈಕೊಟ್ಟರೆ ನೀರು ಪೂರೈಕೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೊರಬದಲ್ಲೂ ನೀರಿಗೆ ಹಾಹಾಕಾರ ರಾಘವೇಂದ್ರ ಟಿ. ಸೊರಬ: ಮುಂಗಾರು ದುರ್ಬಲಗೊಂಡಿದ್ದು ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮನವಳ್ಳಿ ಆಶ್ರಯ ಬಡಾವಣೆ ಹಾಗೂ ಹರಿಜನ ಕೇರಿಯಲ್ಲಿ ಕುಡಿಯುವ ನೀರನ್ನು ಎರಡು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಆನವಟ್ಟಿ ಹಾಗೂ ಜಡೆ ಹೋಬಳಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶಕುನವಳ್ಳಿ ತುಯಿಲುಕೊಪ್ಪ ದೇವರ ಹೊಸಕೊಪ್ಪ ತತ್ತೂರು ಕುಪ್ಪಗಡ್ಡೆ ಹೋಬಳಿಯ ಕೊರಕೋಡು ಹಾಗೂ ಜಡೆ ಹೋಬಳಿ ವ್ಯಾಪ್ತಿಯ ಕಾಲಿಗೇರಿ ಗ್ರಾಮದಲ್ಲಿ ಕೊಳವೆ ಬಾವಿಗಳು ಬತ್ತಿವೆ. ಬೇರೆಡೆಯಿಂದ ಕೊಳವೆ ಬಾವಿ ನೀರನ್ನು ಬಾಡಿಗೆ ಪಡೆದು ಸರಬರಾಜು ಮಾಡಲಾಗುತ್ತಿದೆ. ಜೂನ್ ತಿಂಗಳ ಅಂತ್ಯದಲ್ಲೂ ಶೇ 85ರಷ್ಟು ವಾಡಿಕೆ ಮಳೆ ಕೊರತೆಯಾಗಿದೆ. ಇದರಿಂದ ಅಡಿಕೆ ಬಾಳೆ ಹಾಗೂ ಅನಾನಸ್ ತೋಟಗಳು ಒಣಗಿವೆ. ಬಿರು ಬಿಸಿಲಿಗೆ ಕೊಳವೆ ಬಾವಿಗಳಲ್ಲಿ ಅಂರ್ತಜಲ ಬತ್ತಿ ಹೋಗಿದೆ.

ಆಗುಂಬೆ ಹೋಬಳಿಯಲ್ಲೇ ನೀರಿಗೆ ತತ್ವಾರ ನಿರಂಜನ ವಿ‌. ತೀರ್ಥಹಳ್ಳಿ: ಮುಂಗಾರು ಆರಂಭಗೊಂಡಿದ್ದರೂ ಮಲೆನಾಡಿನಲ್ಲಿ ವಾಡಿಕೆ ಮಳೆ ಕೊರತೆಯಾಗಿದೆ. ವಾಡಿಕೆಯಂತೆ ಜೂನ್‌ ತಿಂಗಳಿನಲ್ಲಿ 382 ಮಿ.ಮೀ. ಮಳೆ ಸುರಿಯಬೇಕಿತ್ತು ಆದರೆ 61 ಮಿ.ಮೀ. ಮಾತ್ರ ಮಳೆಯಾಗಿದೆ. ಮಳೆ ಸುರಿದರೂ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗುತ್ತಿದೆ. ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಇರುತ್ತಿದೆ. ಮಳೆ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಅಭಾವ ಇದೆ. ತಾಲ್ಲೂಕು ಆಡಳಿತ 25 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ. ಇಲ್ಲಿಯವರೆಗೂ 1020 ಟ್ಯಾಂಕರ್‌ಗಳ ನೀರು ಪೂರೈಕೆ ಮಾಡಲಾಗಿದೆ. ಇದಕ್ಕಾಗಿ 40 ಖಾಸಗಿ ಕೊಳವೆಬಾವಿ ಬಳಸಿಕೊಳ್ಳಲಾಗಿದೆ. ಆಗುಂಬೆ ಹೆದ್ದೂರು ಬಿದರಗೋಡು ಕುಡುಮಲ್ಲಿಗೆ ಮೇಳಿಗೆ ನಾಲೂರು-ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರ ಕುಡಿಯುವ ನೀರಿಗೆ ಬೇಡಿಕೆ ಇದೆ. ಅರೇಹಳ್ಳಿ ಬಾಂಡ್ಯ-ಕುಕ್ಕೆ ಗುಡ್ಡೇಕೊಪ್ಪ ಹೊದಲ- ಅರಳಾಪುರ ಹೊನ್ನೇತ್ತಾಳು ಕೋಣಂದೂರು ಮಂಡಗದ್ದೆ ಮೇಗರವಳ್ಳಿ ಮೇಲಿನಕುರುವಳ್ಳಿ ಸಾಲ್ಗಡಿ ಸಾಲೂರು ತ್ರಿಯಂಬಕಪುರ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಬವಣೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT