ಸವೆದ ಒರಳು ಕಲ್ಲಿಗೆ ‘ಕಲ್ಲುಮುಳ್ಳು’ ಹಾಕಿ ಮೊನಚು ಮಾಡುವ ಇವರ ಬದುಕು ಸವೆದ ಕುಲ ಕಸುಬಿನ ಕೊನೆಯ ಕೊಂಡಿಯಂತೆ ಉಸಿರಾಡುತ್ತಿದೆ. ಕಲ್ಲು ಕುಟುಕರ ವಂಶಪಾರಂಪರ್ಯ ಕಸುಬು ಕೈ ತಪ್ಪಿರುವ ಕಾಲದಲ್ಲಿ ಕಲ್ಲುಮುಳ್ಳು ಹಾಕುವ ಕಸುಬುದಾರರು ಅಪರೂಪಕ್ಕೆ ಕಾಣುತ್ತಾರೆ.

ಬೀಸುವ ಕಲ್ಲುಗಳು ಎಂದೋ ಮಾಯವಾಗಿವೆ. ಗಾಣದ ಕಲ್ಲುಗಳಂತೂ ಎಣ್ಣೆ ನೆನೆದು ಕುಂತಲ್ಲೇ ಮರುಗುತ್ತಿವೆ. ಮನೆಮನೆಗೆ ಮಿಕ್ಸಿ, ಗ್ರೈಂಡರ್‌ಗಳು ಬಂದ ಮೇಲೆ ಒರಳು ಕಲ್ಲು ಬಳಸುವವರೂ ಕಡಿಮೆಯಾಗಿದ್ದಾರೆ.

ಕುಟ್ಟುವುದು, ರುಬ್ಬುವುದು, ಬೀಸುವುದು ಮರೆತೇ ಹೋಗುತ್ತಿದೆ. ಕ್ರಷರ್‌ಗಳು, ಯಂತ್ರಗಳು ಬಂದ ಮೇಲಂತೂ ಕಲ್ಲುಬಂಡೆ ಕೆಲಸದ ಗತಿಯೇ ಬದಲಾಗಿದೆ. ಕಲ್ಲುಕುಟುಕರನ್ನು ದೂರವಿಟ್ಟು ಬಂಡವಾಳಶಾಹಿಗಳೆಲ್ಲಾ ಬಂಡೆಗಳ ಹಿಡಿತ ಹೊಂದಿದ್ದಾರೆ. ಕಾಲ ಬದಲಾದರೂ ‘ಕಲ್ಲುಮುಳ್ಳು’ ಹಾಕುವ ಕೆಲಸವೊಂದು ಗುಟುಕು ಜೀವ ಹಿಡಿದುಕೊಂಡಿದೆ.

ಸವೆದ ಒರಳು ಕಲ್ಲಿಗೆ, ಬೀಸುವ ಕಲ್ಲಿಗೆ ಸಣ್ಣ ಉಳಿಯಿಂದ ಪೆಟ್ಟು ಹಾಕಿಸಿ ಮೊನಚು ಮಾಡಿಸುವುದನ್ನು ‘ಕಲ್ಲುಮುಳ್ಳು’ ಹುಯ್ಯಿಸುವುದು ಎನ್ನುತ್ತಾರೆ. ಹಿಂದೆಲ್ಲಾ ವರ್ಷಕ್ಕೆ ಒಮ್ಮೆಯಾದರೂ ಹೊರಳುಕಲ್ಲಿಗೆ ಕಲ್ಲು ಕುಟುಕರಿಂದ ಕಲ್ಲುಮುಳ್ಳು ಹಾಕಿಸುವ ಪರಿಪಾಠವಿತ್ತು.

ಮಿಕ್ಸಿಗಳು ಬಂದ ಮೇಲೆ ಒರಳು ಕಲ್ಲಿನ ತಿರುವು ಕಡಿಮೆಯಾಗಿ ಸವೆಯುವುದು ನಿಂತಿದೆ. ಹಾಗಾಗಿ ಸುತ್ತಿಗೆ, ಉಳಿ ಹಿಡಿದು ಕೂಗುತ್ತಾ ಹಳ್ಳಿಗಳಲ್ಲಿ ಅಡ್ಡಾಡುತ್ತಿದ್ದ ಕಲ್ಲುಮುಳ್ಳು ಹುಯ್ಯುವವರು ಕಡಿಮೆಯಾಗಿದ್ದಾರೆ. ಕಲ್ಲು ಕಸುಬು ಕಲಿತು ಈಗ ಬೇರೇನೂ ಉದ್ಯೋಗ ಮಾಡಲಾಗದವರು ಮಾತ್ರ ಇದನ್ನೇ ನೆಚ್ಚಿ ಅಲೆದಾಡುತ್ತಿದ್ದಾರೆ.

ಇವರೀಗ ಹಳ್ಳಿಗಳಲ್ಲಿ ಕೆಲಸ ಸಿಗುವುದಕ್ಕಿಂತ ಹೆಚ್ಚಾಗಿ ಪಟ್ಟಣಗಳಲ್ಲಿ ಅಷ್ಟಿಷ್ಟು ಕಾಸು ಹುಟ್ಟುತ್ತಿದೆ. ಏಕೆಂದರೆ ಹೋಟೆಲ್‌ಗಳಲ್ಲಿ ಬಳಸುವ ದೊಡ್ಡದೊಡ್ಡ ಗ್ರೈಂಡರ್‌ಗಳ ಕಲ್ಲುಗಳಿಗೆ ಕಲ್ಲುಮುಳ್ಳು ಹಾಕಲು ಬೇಡಿಕೆ ಇನ್ನೂ ಅಷ್ಟಿಷ್ಟು ಉಳಿದಿದೆ. ಆಧುನಿಕ ಹೊಸ ಯಂತ್ರದಲ್ಲೂ ಗಟ್ಟಿ ಕಲ್ಲು ಬಳಸಿರುವುದರಿಂದ ಹಳೆ ಕಸುಬಿನ ನಂಟು ತಳಕು ಹಾಕಿಕೊಂಡಿದೆ.

ಮನೆಗಳಲ್ಲಿ ಬಳಸುವ ಗ್ರೈಂಡರ್‌ಗಳಿಗೂ ಸಹ ಕಲ್ಲುಮುಳ್ಳು ಹಾಕಿಸುವುದು ಕಸುಬುದಾರರನ್ನು ಅಷ್ಟಿಷ್ಟು ಕೈ ಹಿಡಿದಿದೆ. ತಿಪಟೂರಿನ ಹೋಟೆಲೊಂದರ ಮುಂದೆ ಕಲ್ಲುಮುಳ್ಳು ಹಾಕುತ್ತಿದ್ದ ಅಯ್ಯನಬಾವಿ ಕಾಲೊನಿಯ ಶಂಕರಣ್ಣ ಅವರನ್ನು ಮಾತನಾಡಿಸಿದರೆ, ಮುಖದಲ್ಲಿ ಮಂದಹಾಸವೂ ಇರಲಿಲ್ಲ. ತಾದ್ಯಾತ್ಮದಿಂದ ರುಬ್ಬುಕಲ್ಲಿಗೆ ಉಳಿ ಹಾಕುತ್ತಲೇ ಇದ್ದರು. ದುಡಿಮೆ ಬಗ್ಗೆ ಪ್ರಶ್ನಿಸಿದ್ದಕ್ಕೆ `ಅಯ್ಯೋ..’ ಎಂದಷ್ಟೇ ಹೇಳಿ ನಿಟ್ಟುಸಿರು ಬಿಟ್ಟರು.

ಕಲ್ಲು ಕೆಲಸ ಕಲಿತು ಬಂಡೆಗಳನ್ನೇ ಪುಡಿ ಮಾಡಿ ಎಸೆಯುತ್ತಿದ್ದ ನಮ್ಮ ಪಾಲಿಗೆ ಬಂಡೆಗಳೂ ಉಳಿದಿಲ್ಲ. ಕಷ್ಟಪಟ್ಟು ಬಂಡೆಯಲ್ಲಿ ಕೆಲಸ ಮಾಡಿದರೂ ತಕ್ಕ ದುಡಿಮೆ ಇಲ್ಲ. ಯಾರೋ ಸಾಹುಕಾರರು ದುಡ್ಡು ಮಾಡಿಕೊಳ್ತಾರಷ್ಟೆ. ಆದಷ್ಟು ಆಗಲೆಂದು ಈಗ ಕಲ್ಲುಮುಳ್ಳು ಹುಯ್ದು ಬದುಕು ಸಾಗಿಸುತ್ತಿದ್ದೇನೆ ಎಂದರು.

ನಂಬಿಕೆ: ಪರಿಸ್ಥಿತಿ ಬದಲಾಗಿ ಕಲ್ಲು ಕುಟುಕ ಕಸುಬುದಾರರಿಗೆ ಸಂಕಷ್ಟ ಬಂದಿದ್ದರೂ ಸಂಪ್ರದಾಯದ, ನಂಬಿಕೆ ನೆಪದಲ್ಲಿ ಒರಳು ಕಲ್ಲಿಗೆ ಅಷ್ಟಿಷ್ಟು ಅಸ್ತಿತ್ವ ಉಳಿದಿದೆ. ಶಾಸ್ತ್ರಕ್ಕಾದರೂ ಪೂಜಿಸಲು ಮನೆಯಲ್ಲಿ ಒರಳು ಕಲ್ಲು, ಬೀಸುವ ಕಲ್ಲು ಇರಬೇಕೆಂಬ ನಂಬಿಕೆ ಜನರಲ್ಲಿ ಇನ್ನೂ ಇದೆ. ಹಾಗಾಗಿ ಶಾಸ್ತ್ರಕ್ಕೆಂದು ಅಥವಾ ವಿದ್ಯುತ್ ಇಲ್ಲದಿದ್ದಾಗ ರುಬ್ಬಿಕೊಳ್ಳಲು ಆಗುತ್ತದೆಂದು ಹೊಸ ಮನೆಗಳಿಗೆ ಒರಳುಕಲ್ಲು ಹಾಕಿಸುವವರೂ ಇದ್ದಾರೆ. ಪುಟ್ಟ, ನಾಜೂಕಾದ ಒರಳುಕಲ್ಲುಗಳಿಗೆ ಬೇಡಿಕೆ ಇದೆ. ಎಲ್ಲೋ ಸಿದ್ಧವಾಗಿ ಬಂದ ಕಲ್ಲುಗಳು ಅಂಗಡಿಗಳಲ್ಲೂ ಸಿಗುತ್ತಿವೆ.

ತಿಪಟೂರಿನ ಮುಖ್ಯರಸ್ತೆ ಬದಿ ತಮಿಳುನಾಡಿನ ಕುಟುಂಬವೊಂದು ತಾತ್ಕಾಲಿಕ ಶೆಡ್ ಹಾಕಿಕೊಂಡು ಕಲ್ಲುದಿಮ್ಮಿಗಳಿಂದ ಸ್ಥಳದಲ್ಲೇ ಒರಳು ಕಲ್ಲು ಸಿದ್ಧಪಡಿಸಿ ಮಾರುವ ಕಾಯಕ ಮಾಡುತ್ತಿದೆ. ಮಹಿಳೆಯರೂ ಸುತ್ತಿಗೆ, ಉಳಿ ಹಿಡಿದು ಕಲ್ಲು ಕುಟ್ಟುತ್ತಲೇ ಗ್ರಾಹಕರ ದಾರಿ ಕಾಯುತ್ತಾರೆ. ಸಂಪ್ರದಾಯ, ನಂಬಿಕೆ, ಅನಿವಾರ್ಯದ ಹೆಸರಲ್ಲಾದರೂ ಕುಲಕಸುಬು ಜೀವ ಹಿಡಿದುಕೊಂಡಿರುವ ಲಕ್ಷಣ ಗೋಚರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.