ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಗದ್ದೆಗಿಳಿದ ಅನ್ನದಾತ: ಗರಿಗೆದರಿದ ಕೃಷಿ ಚಟುವಟಿಕೆ

ಭತ್ತದ ಕೃಷಿಗೆ ಜಿಲ್ಲೆಯಾದ್ಯಂತ ಉಳುಮೆ, ಬಿತ್ತನೆ, ನೇಜಿ ನೆಡುವ ಕಾರ್ಯ ಶುರು
Published : 17 ಜೂನ್ 2024, 7:20 IST
Last Updated : 17 ಜೂನ್ 2024, 7:20 IST
ಫಾಲೋ ಮಾಡಿ
Comments

ಉಡುಪಿ: ಮಳೆ-ಬಿಸಿಲಿನ ವಾತಾವರಣ, ಎಂಒ-4 ತಳಿಯ ಭತ್ತದ ಬಿತ್ತನೆ ಬೀಜದ ಅಲಭ್ಯತೆಯ ಆತಂಕ, ಬಿತ್ತನೆ ಬೀಜದ ದರ ಏರಿಕೆಯ ಬಿಸಿ ಇವೆಲ್ಲವುಗಳ ನಡುವೆಯೇ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮುಂಗಾರು ಚುರುಕುಗೊಳ್ಳುತ್ತಿದ್ದಂತೆ ಹೊಲ ಹಸನು ಮಾಡಿಕೊಂಡ ಅನ್ನದಾತರು ಭತ್ತದ ಬೆಳೆಯ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕೆಲವೆಡೆ ನೇಜಿ ನೆಡುವ ಕಾರ್ಯವೂ ಭರದಿಂದ ಸಾಗಿದೆ. ಮಳೆ ಬಿರುಸುಗೊಂಡು ಹಳ್ಳ, ತೋಡುಗಳಲ್ಲಿ ನೀರಿನ ಸೆಲೆಯಾಗಿ, ಗದ್ದೆಗಳಲ್ಲಿ ನೀರು ನಿಂತಾಗ ಪ್ರತಿವರ್ಷ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ.

ಭತ್ತ ಜಿಲ್ಲೆಯ ಪ್ರಮುಖ ಬೆಳೆಯಾಗಿರುವುದರಿಂದ ಇಲ್ಲಿನ ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವ ಎಂಒ–4 ತಳಿಯ ಭತ್ತದ ಬಿತ್ತನೆ ಬೀಜವನ್ನೇ ರೈತರು ನೆಚ್ಚಿಕೊಂಡಿದ್ದಾರೆ.

ಇದರ ಅಲಭ್ಯತೆ ಈ ಬಾರಿ, ಕೃಷಿ ಕಾರ್ಯಕ್ಕೆ ಸಿದ್ಧರಾಗಿದ್ದ ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಕೆಲ ರೈತರು ಪರ್ಯಾಯ ತಳಿಯ ಮೊರೆ ಹೋದರೆ, ಕೃಷಿ ಇಲಾಖೆ ಕೂಡ ಎಂಒ-4 ಬೆಳೆದ ರೈತರನ್ನು ಗುರುತಿಸಿ, ಅವರಲ್ಲಿ ಬಿತ್ತನೆ ಬೀಜ ದಾಸ್ತಾನು ಇರಿಸಿಕೊಂಡವರ ಮಾಹಿತಿ ಪಡೆದು, ಅವರ ಸಂಪರ್ಕ ಸಂಖ್ಯೆ ಹಂಚಿಕೊಂಡಿದೆ.

ಜಿಲ್ಲೆಯಲ್ಲಿ ಕಳೆದ ವರ್ಷದ ಮುಂಗಾರಿನಲ್ಲಿ 16,650 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿತ್ತು, ಆದರೆ 13,476 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕೃಷಿ ಕಾರ್ಯ ನಡೆದಿತ್ತು. ಈ ವರ್ಷ ಜೂನ್‌ ಆರಂಭದಲ್ಲಿ ಕೃಷಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದು, ಅತಿವೃಷ್ಠಿ, ಅನಾವೃಷ್ಠಿ ಕಾಡದಿದ್ದರೆ ಉತ್ತಮ ರೀತಿಯಲ್ಲಿ ಫಸಲು ಕೈಗೆ ಬರಬಹುದೆಂಬುದು ರೈತರ ನಿರೀಕ್ಷೆ.

ಕುಂದಾಪುರ, ಬೈಂದೂರು ತಾಲ್ಲೂಕಿನಲ್ಲಿ ರೈತರು ಉಳುಮೆ ಕಾರ್ಯದಲ್ಲಿ ತೊಡಗುವ ಮೂಲಕ ಮುಂಗಾರು ಬಿತ್ತನೆಗೆ ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಉತ್ತಮ ಮಳೆಯಾಗಿರುವ ಕಾರಣ ರೈತರು ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಬಿರುಸುಗೊಳಿಸಿದ್ದಾರೆ.

ಕಾಪು ತಾಲ್ಲೂಕಿನ ಕಾಪು, ಶಿರ್ವ, ಪಡುಬಿದ್ರಿ ಪ್ರದೇಶದಲ್ಲಿ ಕಳೆದ ಭಾರಿ 2,670 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚುವಟಿಕೆ ನಡೆದಿತ್ತು. ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯಬಹುದೆಂದು ಅಂದಾಜಿಸಲಾಗಿದೆ. ತಾಲ್ಲೂಕಿನ ಶಿರ್ವ, ಬೆಳ್ಳೆ, ಕುತ್ಯಾರು ಭಾಗದಲ್ಲೂ ಕೃಷಿ ಕಾರ್ಯ ಚುರುಕುಗೊಂಡಿದೆ.

‘ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೂ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಇರುವುದು, ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿರುವುದು ಇದಕ್ಕೆ ಕಾರಣ’ ಎನ್ನುತ್ತಾರೆ ಕೃಷಿಕರು.

ಮಳೆ ಕೈಕೊಡುವ ಆತಂಕ: ಹಿರಿಯಡಕ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಪೆರ್ಡೂರು, ಭೈರಂಪಳ್ಳಿ, ಶೀರೂರು, ಆತ್ರಾಡಿ, ಹಿರೇಬೆಟ್ಟು, ಪುತ್ತಿಗೆ ಸೇರಿದಂತೆ ವಿವಿಧ ಭಾಗದ ಕೃಷಿ ಭೂಮಿಗಳಲ್ಲಿ ಭತ್ತದ ಬೆಳೆಗಾಗಿ ರೈತರು ಗದ್ದೆ ಹದ ಮಾಡುವ ಕಾರ್ಯ ನಡೆಸಿದ್ದಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಮಳೆ ಮಾಯವಾಗಿ ಬಿರು ಬಿಸಿಲಿನ ವಾತಾವರಣವಿದೆ. ಹದ ಮಾಡಿದ ಕೃಷಿ ಭೂಮಿಯಲ್ಲಿನ ನೀರು ಬಿಸಿಲಿಗೆ ಒಣಗಿ ಹೋಗಿದ್ದು, ಪಂಪ್‌ಸೆಟ್ ಮೂಲಕ ಗದ್ದೆಗೆ ನೀರು ಹಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ‌.

ಹೆಬ್ರಿ ತಾಲ್ಲೂಕಿನ ಬಹುತೇಕ ಮಂದಿ ಭತ್ತದ ಬೇಸಾಯದ ಗದ್ದೆಯಲ್ಲಿ ಅಡಿಕೆ, ತೆಂಗು ತೋಟ ಮಾಡಿದ್ದಾರೆ. ಅಲ್ಲಲ್ಲಿ ಕೆಲವರು, ಹಿರಿಯರು ಮಾಡಿದ ಗದ್ದೆಯನ್ನು ಹಡಿಲು ಬಿಡಬಾರದು ಎಂದು ಭತ್ತದ ಬೇಸಾಯ ಮಾಡುತ್ತಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಕೊರತೆ, ಹಲವು ಸಮಸ್ಯೆಗಳ ಮಧ್ಯೆಯೇ ಅವರು ಕೃಷಿ ಚಟುವಟಿಕೆಯ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಕಳೆದ ವರ್ಷ ಬೇಸಾಯದಿಂದ ನಷ್ಟ ಅನುಭವಿಸಿದ ರೈತರ ಮುಖದಲ್ಲಿ ಈ ವರ್ಷದ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದು ಖುಷಿ ನೀಡಿದೆ. ತಾಲ್ಲೂಕಿನಾದ್ಯಂತ ಕೃಷಿಗೆ ಪೂರಕ ವಾತಾವರಣ ಇದೆ ಎನ್ನುತ್ತಾರೆ ರೈತರು.

ಹಲವು ಕಡೆ ಗದ್ದೆಗಳಿಗೆ ಹಟ್ಟಿಗೊಬ್ಬರ ಹಾಕಿ ನಾಟಿಗೆ ಸಜ್ಜುಗೊಳಿಸಲು ಕೃಷಿಕರು ಸಿದ್ಧತೆ ನಡೆಸಿದ್ದಾರೆ. ಗದ್ದೆ ಉಳುಮೆಗಾಗಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ದಾವಣಗೆರೆ, ಶಿವಮೊಗ್ಗ, ಹಾಸನ, ಮಂಡ್ಯ ಕಡೆಗಳಿಂದ ಟ್ರ್ಯಾಕ್ಟರ್‌ಗಳು ಹೆಬ್ರಿಗೆ ಬಂದಿವೆ. ಕೋಣ, ಎತ್ತುಗಳ ಮೂಲಕ ಗದ್ದೆ ಉಳುಮೆ ಮಾಡುವುದು ಬಹಳ ಅಪರೂಪವಾಗಿದೆ.

ಕಾರ್ಕಳ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಇನ್ನೂ ಪೂರ್ಣವಾಗಿ ಆರಂಭವಾಗಿಲ್ಲ. ವಾರದಿಂದ ಸುರಿಯುತ್ತಿರುವ ಮಳೆಯ ನೀರು ಬಯಲು ಗದ್ದೆಗಳಿಗಷ್ಟೇ ಕೃಷಿ ಆರಂಭಿಸಲು ಸಾಕಾಗಿದೆ. ಇನ್ನೂ ಒಂದು ವಾರ ಮಳೆ ಚೆನ್ನಾಗಿ ಬಂದರಷ್ಟೇ ಬೆಟ್ಟು ಗದ್ದೆಗಳಲ್ಲಿ ನೀರು ನಿಂತು, ನಾಟಿ ಮಾಡಲು ಅನುಕೂಲವಾಗಲಿದೆ. ಈಗ ನೇರ ಬಿತ್ತನೆಗೆ ತಯಾರಿ ನಡೆಯುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಹಡಿಲು ಭೂಮಿಯಲ್ಲೂ ಕೃಷಿ ಚಟುವಟಿಕೆ: ಕೋವಿಡ್‌ 19 ಬಳಿಕ ಬ್ರಹ್ಮಾವರ, ಕೋಟ ವಲಯದಲ್ಲಿ ಕೃಷಿ ಚಟುವಟಿಕೆ ಹೆಚ್ಚಿದೆ. ಹಡಿಲು ಭೂಮಿಯಲ್ಲೂ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾದರೂ ಕೃಷಿಕರ ಆಸಕ್ತಿ ಕುಂದಿಲ್ಲ‌. ಕೆಲವೆಡೆ ಬಿತ್ತನೆ ಕಾರ್ಯ ನಡೆದು ನಾಟಿ ಕಾರ್ಯ ಆರಂಭವಾಗಿದೆ.

ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಚಾಪೆ ನೇಜಿ, ನೇರ ಬಿತ್ತನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ಈ ಬಾರಿ ಕಂಡು ಬಂದಿದೆ. ಕೆಲವೆಡೆ ದೂರದ ಭದ್ರಾವತಿಯಿಂದ ನಾಟಿ ಕಾರ್ಯಕ್ಕೆ ಕೃಷಿ ಕಾರ್ಮಿಕರನ್ನು ಕರೆತಂದಿರುವುದು ವಿಶೇಷವಾಗಿದೆ.

ಹೊಸತಳಿ ಪ್ರಯೋಗ: ಬ್ರಹ್ಮಾವರ ವ್ಯಾಪ್ತಿಯಲ್ಲಿ ಈ ಬಾರಿ ಕೆಂಪು ಅಕ್ಕಿಯ ಪಂಚಮುಖಿ ತಳಿಯನ್ನು ಪರಿಚಯಿಸಲಾಗಿದ್ದು, ರೈತಾಪಿ ವರ್ಗ ಉತ್ತಮ‌ ಬೆಳೆ ನಿರೀಕ್ಷೆಯಲ್ಲಿದೆ. ನೆರೆಪೀಡಿತ ಪ್ರದೇಶಕ್ಕೆ ಇದು ಸೂಕ್ತವಾಗಿರುವುದರಿಂದ ಇದನ್ನು ಬಳಸುತ್ತಿದ್ದಾರೆ. ಈ ಮೊದಲು ಎಂಒ–4 ತಳಿಯನ್ನೇ ಬಳಸುತ್ತಿದ್ದರು.

ಬೆಟ್ಟು ಗದ್ದೆಗೆ ನೀರಿಲ್ಲ: ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಶಿರ್ವ ವ್ಯಾಪ್ತಿಯಲ್ಲಿ ಬೆಟ್ಟು ಗದ್ದೆಯಲ್ಲಿ ನೀರು ನಿಲ್ಲದೆ, ಕೃಷಿಕರು ಕಂಗಾಲಾಗಿದ್ದಾರೆ. ಮಳೆ ಕಡಿಮೆಯಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ನೀರಿಲ್ಲದ ಗದ್ದೆಗಳಲ್ಲಿ ಬಲಿತ ನೇಜಿಯನ್ನು ಕೀಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಟಿ ಮಾಡಿದ ಗದ್ದೆಗಳಲ್ಲೂ ಸಮರ್ಪಕ ನೀರಿಲ್ಲದೆ ನೇಜಿ ಒಣಗಿ ಹಳದಿ ಬಣ್ಣಕ್ಕೆ ತಿರುಗಲು ಶುರುವಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಬೆಟ್ಟುಗದ್ದೆಗಳಲ್ಲಿ ಕೃಷಿ ಮಾಡದೆ ಹಡಿಲು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೆಲ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಗ್ಗುಸಾಲಿನ ಗದ್ದೆಗಳಲ್ಲಿ ಮೊದಲ‌ ಮಳೆಗೆ ನೀರು ಶೇಖರಣೆಗೊಂಡಿದ್ದು, ಭತ್ತದ ನಾಟಿ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಮಳೆ ಬಾರದಿದ್ದಲ್ಲಿ ಅಲ್ಲೂ ಕೂಡ ಸಮಸ್ಯೆ ಉದ್ಭವಿಸಲಿದೆ. ಕರಾವಳಿಯಲ್ಲಿ ಹೆಚ್ಚಿನ ಕಡೆಗಳಲ್ಲಿ ಭತ್ತ ಕೃಷಿ ಮಾಡಲು ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ. ಮಳೆ ಬಾರದಿದ್ದರೆ ಅವರಿಗೆ ಸಂಕಷ್ಟ ಎದುರಾಗಬಹುದು.

ಪೂರಕ ಮಾಹಿತಿ: ವಾಸುದೇವ್‌ ಭಟ್‌, ಶೇಷಗಿರಿ ಭಟ್‌, ಕೆ.ಸಿ. ರಾಜೇಶ್‌, ಅಬ್ದುಲ್‌ ಹಮೀದ್‌, ಪ್ರಕಾಶ್‌ ಸುವರ್ಣ ಕಟಪಾಡಿ, ಸುಕುಮಾರ್‌ ಮುನಿಯಾಲ್‌, ರಾಘವೇಂದ್ರ ಹಿರಿಯಡಕ, ವಿಶ್ವನಾಥ ಆಚಾರ್ಯ

ಬ್ರಹ್ಮಾವರದಲ್ಲಿ ಚಾಪೆ ನೇಜಿ ಮೂಲಕ ನಾಟಿ ಮಾಡುತ್ತಿರುವುದು
ಬ್ರಹ್ಮಾವರದಲ್ಲಿ ಚಾಪೆ ನೇಜಿ ಮೂಲಕ ನಾಟಿ ಮಾಡುತ್ತಿರುವುದು
ಬೈಂದೂರು ವ್ಯಾಪ್ತಿಯ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ನಡೆಸುತ್ತಿರುವುದು
ಬೈಂದೂರು ವ್ಯಾಪ್ತಿಯ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ನಡೆಸುತ್ತಿರುವುದು
ಜಿಲ್ಲೆಯ ರೈತರ ಬೇಡಿಕೆ ಅಗತ್ಯಗಳಿಗೆ ತಕ್ಕಂತೆ ಭತ್ತದ ಬಿತ್ತನೆ ಬೀಜ ಸರಬರಾಜು ಮಾಡುವ ಕೆಲಸ ಇಲಾಖೆಗಳಿಂದ ನಡೆಯಬೇಕು
ಕೆ. ವಿಕಾಸ್ ಹೆಗ್ಡೆ ವ್ಯವಸಾಯ ಸಹಕಾರಿ ಬ್ಯಾಂಕ್ ಬಸ್ರೂರು ಉಪಾಧ್ಯಕ್ಷ
ಈ ಸಲ ಉತ್ತಮ ಮಳೆಯಾಗಿ ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಅಕಾಲಿಕ ಮಳೆಯಿಂದ ಹಲವಾರು ಸಮಸ್ಯೆ ಎದುರಿಸಿದ್ದೆವು. ಹಲವು ಕಷ್ಟಗಳ ನಡುವೆಯೂ ಕೃಷಿ ಮಾಡುತ್ತೇವೆ
ಗೋಪಾಲ ಕುಲಾಲ್‌ ಮುನಿಯಾಲು ಪ್ರಗತಿಪರ ಕೃಷಿಕ
ಎಂಒ 4 ತಳಿಯ ಭತ್ತದ ಬಿತ್ತನೆ
ಬೀಜ ಸಿಕ್ಕಿಲ್ಲ ಎಂದು ವಿಳಂಬ ಮಾಡದೆ ರೈತರು ಕೆಂಪು ಮುಕ್ತಿ ಜ್ಯೋತಿ ಉಮಾ ಮುಂತಾದ ಪರ್ಯಾಯ ತಳಿಗಳ ಬಿತ್ತನೆ ಬೀಜ ಬಳಸಿ ಕೃಷಿ ಕಾರ್ಯ ನಡೆಸಬೇಕು–ಸೀತಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಎಂಒ 4 ಭತ್ತದ ತಳಿಯ ಬಿತ್ತನೆ ಬೀಜದ ಕೊರತೆ ಉಂಟಾಗಿದೆ. ಕಳೆದ ಬಾರಿಯ ಇಳುವರಿಯಲ್ಲಿಯೇ ಬಿತ್ತನೆ ಬೀಜ ತೆಗೆದು ಇಟ್ಟಿರುವ ಕಾರಣ ನಮಗೆ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ –ಹರೀಶ ಪೂಜಾರಿ ಕಾಡಿಗುಂಡಿ ಪ್ರಗತಿಪರ ಕೃಷಿಕ ಯಡ್ತರೆ ಮಳೆ ಅಭಾವದಿಂದ ನೀರಿನ ಸಮಸ್ಯೆ ಉಂಟಾಗಿದೆ. ಕಳೆದ ವರ್ಷವೂ ಮಳೆಕೊರತೆ ಕಂಡುಬಂದಿತ್ತು. ಈ ಬಾರಿಯೂ ವಿಳಂಬವಾಗಿದೆ. ಕಾರ್ಮಿಕರ ಕೊರತೆ ನೀರಿನ ಅಭಾವದಿಂದ ಸಮಸ್ಯೆ ಆಗುತ್ತಿದೆ –ಸಂತೋಷ್ ಶೆಟ್ಟಿ ಬರ್ಪಾಣಿ ಅದಮಾರು ಆರಂಭದಲ್ಲೇ ಉತ್ತಮ ಮಳೆಯಾಗಿರುವುದರಿಂದ ನೀರಿನ ಮೂಲಗಳಲ್ಲಿ ನೀರಿನ ಹರಿವು ಶುರುವಾಗಿದೆ. ಮಳೆ ಕಡಿಮೆಯಾದ್ದರಿಂದ ಸ್ವಲ್ಪಮಟ್ಟಿಗೆ ತೊಂದರೆಯಾದರೂ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಪಂಪ್‌ಸೆಟ್‌ಗಳ ಮೂಲಕ ಗದ್ದೆ ಒಣಗದಂತೆ ನೀರು ಬಿಡಲಾಗುತ್ತಿದೆ‌ –ಕೃಷ್ಣ ನಾಯಕ್ ರೈತ ಹಿರಿಯಡಕ ಗ್ರಾಮೀಣ ಭಾಗಗಳಲ್ಲಿ ಹಿಂದಿನಂತೆ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಕಾರ್ಮಿಕರ ಬದಲಾಗಿ ಯಂತ್ರಗಳು ಬಂದಿವೆಯಾದರೂ ಎತ್ತರ ಭಾಗದ ಗದ್ದೆಗಳಿಗೆ ಅದನ್ನು ಕೊಂಡೊಯ್ಯುವುದು ದುಸ್ತರ ಕೆಲಸ –ಉಪೇಂದ್ರ ನಾಯಕ್ ಸಾವಯವ ಕೃಷಿಕ ಮರ್ಣೆ ಗ್ರಾಮ ನಾಟಿ ಮಾಡಿದ ಮೇಲೆ ತುಂತುರು ಮಳೆಯಾದರೂ ಕಾಲಕಾಲಕ್ಕೆ ಸುರಿದರೆ ಭತ್ತ ಸಸಿ ಬಲಿತುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬಿಸಿಲಿಗೆ ಸಸಿ ಮುರುಟಿ ಹೋಗುತ್ತದೆ. ಕೃಷಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ಆಧುನಿಕ ಕೃಷಿ ಸಲಕರಣೆಗಳ ಬಾಡಿಗೆಯೂ ವಿಪರೀತವಾಗಿದೆ. ಕೃಷಿ ಇಲಾಖೆಯಿಂದ ಸ್ಯಾಂಪಲ್ ಬಿತ್ತನೆ ಬೀಜ ಲಭ್ಯವಿಲ್ಲ –ರವಿ ಪೂಜಾರಿ ಮೂಡಬೆಟ್ಟು ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT