ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಉನ್ನತ ಶಿಕ್ಷಣಕ್ಕಿದೆ ವಿಪುಲ ಅವಕಾಶ

ವಿಶ್ವನಾಥ ಆಚಾರ್ಯ
Published : 7 ಜುಲೈ 2024, 7:51 IST
Last Updated : 7 ಜುಲೈ 2024, 7:51 IST
ಫಾಲೋ ಮಾಡಿ
Comments

ಬೈಂದೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಆರಂಭವಾದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ.

ಪ್ರಸ್ತುತ 390 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ಆರಂಭದಲ್ಲಿ ಬೈಂದೂರಿನ ಸರ್ಕಾರಿ ಪದವಿಪೂರ್ವ ಶಿಕ್ಷಣ ಸಂಸ್ಥೆಯ ಪಕ್ಕದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಈಗ ವಿದ್ಯಾನಗರದ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜಿಗೆ ಎಲ್ಲಾ ಸೌಲಭ್ಯವಿರುವ ಸುಸಜ್ಜಿತ ಕಟ್ಟಡವಿದೆ.

1983ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ಭಾಗದ 48 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಕಾಲೇಜು ಈ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಶಾಕಿರಣವಾಗಿದೆ. ಕಾಲೇಜಿನಲ್ಲಿ ಮೊದಲಿಗೆ ಬಿ.ಎ., ಬಿ.ಕಾಂ. ಪದವಿ ಕೋರ್ಸ್‌ಗಳು ಪ್ರಾರಂಭಗೊಂಡಿತ್ತು. ಅನಂತರದಲ್ಲಿ ಬಿ.ಎಸ್ಸಿ. ಬಿ.ಬಿ.ಎ. ಪದವಿ ಕೋರ್ಸ್‌ಗಳು ಆರಂಭವಾದವು. 2023-24 ನೇ ಸಾಲಿನಿಂದ ಬಿ.ಸಿ.ಎ ಪದವಿ ಕೋರ್ಸ್‌ ಕೂಡ ಆಂಭವಾಯಿತು.

ಈ ಸಂಸ್ಥೆಯಲ್ಲಿ ಓದಿರುವ ಸಾವಿರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ, ವಿದೇಶಗಳಲ್ಲಿ ಉನ್ನತ ಉದ್ಯೋಗ  ಪಡೆದುಕೊಂಡಿದ್ದಾರೆ. ಕಾಲೇಜಿನ ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಕಾಲೇಜಿನಲ್ಲಿ 25 ಬೋಧಕರು, 6 ಬೋಧಕೇತರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೋಧಕರಲ್ಲಿ 6 ಮಂದಿ ಪಿಎಚ್.ಡಿ ಪೂರೈಸಿದವರಿದ್ದಾರೆ.

ಕಾಲೇಜಿನಲ್ಲಿ ಸಂಪೂರ್ಣವಾಗಿ ಸ್ಮಾರ್ಟ್ ಕ್ಲಾಸ್ ಶಿಕ್ಷಣ ವ್ಯವಸ್ಥೆ ಅಳವಡಿಸಲಾಗಿದೆ. ಗ್ರಂಥಾಲಯದಲ್ಲಿ 21,000 ಪುಸ್ತಕಗಳು ಇವೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕಗಳು ಕೂಡ ಲಭ್ಯವಿವೆ. 21,000 ಪುಸ್ತಕಗಳು ಡಿಜಿಟಲೀಕರಣಗೊಂಡಿವೆ. ಕಾಲೇಜಿನಲ್ಲಿ ಸುಸಜ್ಜಿತವಾದ 30 ಕಂಪ್ಯೂಟರ್‌ಗಿರುವ ಕಂಪ್ಯೂಟರ್ ಲ್ಯಾಬ್ ಇದೆ. ಸುಮಾರು 300 ವಿದ್ಯಾರ್ಥಿಗಳು ಒಟ್ಟಿಗೆ ಕೂರಬಹುದಾದ ಸಭಾ ಕೊಠಡಿ ಇದ್ದು, ಕಾಲೇಜಿನ ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದೆ.

ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್‌ ರೇಂಜರ್ಸ್‌, ರೆಡ್‌ಕ್ರಾಸ್, ರೆಡ್‌ರಿಬ್ಬನ್ ಘಟಕಗಳಿವೆ. ಕ್ರೀಡೆ, ಸಹಪಠ್ಯ ಚಟುವಟಿಕೆಗಳು ಇದ್ದು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೋಚಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಕಾಲೇಜು ಅಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಈ ಭಾಗದ ಜನರ ಸಹಕಾರ ಉತ್ತಮವಾಗಿದೆ. 2024–25 ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದ್ದು ಅತಿ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಶಿಕ್ಷಣ ಪಡೆಯಲು ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜು ಪ್ರಶಸ್ತವಾದ ಶಿಕ್ಷಣ ಸಂಸ್ಥೆಯಾಗಿದೆ
ನಾಗರಾಜ ಶೆಟ್ಟಿ ಪ್ರಾಂಶುಪಾಲ
ವಿವಿಧ ಬೇಡಿಕೆಗಳು
ಕಾಲೇಜಿನ 12 ಎಕ್ರೆ ಜಾಗಕ್ಕೆ ಆವರಣ ಗೋಡೆ ನಿರ್ಮಿಸಬೇಕು (ಕಾಲೇಜಿನ 25 ಎಕ್ರೆ ಜಾಗದಲ್ಲಿ 10 ಎಕ್ರೆಯನ್ನು ಯುವಜನ ಸೇವಾ ಕ್ರೀಡಾ ಇಲಾಖೆಗೆ ಹಾಗೂ 3 ಎಕ್ರೆಯನ್ನು ಐಟಿಐ ಕಾಲೇಜಿಗೆ ನೀಡಲಾಗಿದೆ) ಸುಮಾರು 500 ವಿದ್ಯಾರ್ಥಿಗಳು ಕುಳಿತುಕೊಂಡು ಕಾಲೇಜಿನ ಕಾರ್ಯಕ್ರಮಗಳನ್ನು ವೀಕ್ಷಿಸಲು ಬೇಕಾದ ಸಭಾಭವನ ಬೇಕು ಸುಸಜ್ಜಿತವಾದ ಕ್ರೀಡಾಂಗಣ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಗ್ರಂಥಾಲಯ ವ್ಯವಸ್ಥೆ ಹಾಗೂ ಕ್ಯಾಂಟೀನ್ ವ್ಯವಸ್ಥೆ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕಾಲೇಜು ಸಮಯಕ್ಕೆ ಸರಿಯಾಗಿ ಇನ್ನೂ ಹೆಚ್ಚಿನ ಬಸ್‌ ವ್ಯವಸ್ಥೆ ಮಾಡಬೇಕೆಂದೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT