ನನ್ನ ಪ್ರಶ್ನಿಸುವ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ: ಪಾಲ್
‘ನಾನು ಜೆಪಿಸಿ ಅಧ್ಯಕ್ಷ. ವಕ್ಪ್‌ನಿಂದ ರೈತರಿಗೆ ಆದ ತೊಂದರೆ ಆಲಿಸಲು ಇಲ್ಲಿ ಬಂದಿದ್ದೇನೆ. ಜೆಪಿಸಿ ದೇಶದ ಯಾವುದೇ ರಾಜ್ಯಕ್ಕೆ ಬೇಕಾದರೂ ಭೇಟಿ ನೀಡಿ ಕಾಯ್ದೆಗೆ ಪೂರಕ ಅಭಿಪ್ರಾಯ ಸಂಗ್ರಹಿಸಬಹುದು ತೊಂದರೆಗೆ ಒಳಗಾದವರ ಅಹವಾಲು ಆಲಿಸಬಹುದು. ಇದನ್ನು ಪ್ರಶ್ನಿಸುವ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ’ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ತಿಳಿಸಿದರು. ಜೆಪಿಸಿ ಭೇಟಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ‘ಕರ್ನಾಟಕಕ್ಕೆ ನಾನು ಭೇಟಿ ನೀಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ನನ್ನನ್ನು ವಿರೋಧಿಸುವ ಬದಲು ರೈತರಿಗೆ ಯಾಕೆ ನೋಟಿಸ್ ನೀಡಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಮೊದಲು ಉತ್ತರಿಸಲಿ’ ಎಂದರು. ‘ಮುಂಬೈ ಅಹಮದಾಬಾದ್ ಹೈದರಾಬಾದ್ ಚೆನ್ನೈಗೆ ಈಗಾಗಲೇ ಭೇಟಿ ನೀಡಿದ್ದು ಗುವಾಹಟಿ ಕೋಲ್ಕತ್ತಾ ಪಟ್ನಾ ಸೇರಿ ವಿವಿಧ ನಗರಗಳಿಗೆ ಭೇಟಿ ನೀಡುತ್ತೇವೆ. ಜನರ ಅಹವಾಲು ಆಲಿಸುವುದರ ಜೊತೆಗೆ ಆಯಾ ರಾಜ್ಯ ಸರ್ಕಾರ ಅಧಿಕಾರಿಗಳು ವಕ್ಫ್ ಮಂಡಳಿ ಸದಸ್ಯರನ್ನೂ ಭೇಟಿ ಆಗುತ್ತೇವೆ. ಕಳೆದ ತಿಂಗಳು ನಾವು ಬೆಂಗಳೂರಿಗೆ ಭೇಟಿ ನೀಡಿದ್ದೆವು. ಒಂದು ತಿಂಗಳಲ್ಲಿ ಇಷ್ಟೊಂದು ಪರಿಸ್ಥಿತಿ ಬಿಗಡಾಯಿಸಿದೆ’ ಎಂದು ಹೇಳಿದರು. ‘ಜೆಪಿಸಿಯನ್ನು ಸ್ಪೀಕರ್ ರಚಿಸಿದ್ದಾರೆ. ಬಿಜೆಪಿ ಅಲ್ಲದೇ ಸಮಾಜವಾದಿ ಪಕ್ಷ ಡಿಎಂಕೆ ಕಾಂಗ್ರೆಸ್ ಒವೈಸಿಯವರೂ ಸೇರಿ ವಿವಿಧ ಪಕ್ಷಗಳ ಸದಸ್ಯರು ಇದರಲ್ಲಿ ಇದ್ದಾರೆ. ಸಭೆಗಳಲ್ಲಿ ಮುಸ್ಲಿಮರು ಅಷ್ಟೇ ಅಲ್ಲ ಎಲ್ಲರೂ ಮನವಿ ಸಲ್ಲಿಸಿದ್ದಾರೆ’ ಎಂದರು.