ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಹಿಪ್ಪರಗಿ: ಸರ್ಕಾರಿ ಜಾಗಗಳ ಅತೀಕ್ರಮಣ

ಮೌನ ವಹಿಸಿರುವ ಸ್ಥಳೀಯ ಸಂಸ್ಥೆ ವಿರುದ್ಧ ಸಾರ್ವನಿಕರ ಆಕ್ರೋಶ
Published : 5 ಅಕ್ಟೋಬರ್ 2024, 6:17 IST
Last Updated : 5 ಅಕ್ಟೋಬರ್ 2024, 6:17 IST
ಫಾಲೋ ಮಾಡಿ
Comments

ದೇವರಹಿಪ್ಪರಗಿ: ನೂತನ ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ಸರ್ಕಾರದ ಜಾಗಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದರೂ ಸ್ಥಳೀಯ ಆಡಳಿತ ಹಾಗೂ ತಾಲ್ಲೂಕು ಆಡಳಿತಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ನೂತನ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಜಾಗದ ಮಾಹಿತಿ ಇಲ್ಲ. ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ರೈತ ಸಂಪರ್ಕ ಕೆಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಐಟಿಐಗಳನ್ನು ಹೊರತು ಪಡಿಸಿ ಇನ್ನಾವುದೇ ಶಿಕ್ಷಣ ಸಂಸ್ಥೆ, ಕಚೇರಿಗಳ ಕಟ್ಟಡಗಳಿಗೆ ಸ್ವಂತ ನಿವೇಶನ ಈವರೆಗೆ ಗುರುತಿಸಿಲ್ಲ ಹಾಗೂ ಮೀಸಲಾಗಿಟ್ಟಿಲ್ಲ. ಆದರೆ ಸರ್ಕಾರಿ ಜಾಗಗಳು ಖಾಸಗಿಯವರ ಪಾಲಾಗುತ್ತಿವೆ’ ಎಂದು ಸಾಮಾಜಿಕ ಹೋರಾಟಗಾರ ವಾಸುದೇವ ತೋಳಬಂದಿ ಹೇಳಿದರು.

ನೂತನ ತಾಲ್ಲೂಕು ಘೋಷಣೆಯ ನಂತರ 32 ಕ್ಕೂ ಹೆಚ್ಚಿನ ಇಲಾಖೆಗಳ ಕಚೇರಿಗಳಿಗೆ ಸೂಕ್ತ ನಿವೇಶನ ಇಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರಿ ಜಾಗದ ಲಭ್ಯದ ಕುರಿತು ಕನಿಷ್ಠ ಮಾಹಿತಿಯನ್ನಾದರೂ ತಾಲ್ಲೂಕು ಮತ್ತು ಸ್ಥಳೀಯ ಆಡಳಿತಗಳು ಹೊಂದಿರಬೇಕು. ಸರ್ಕಾರಿ ಜಾಗಗಳಿಗೆ ಫಲಕಗಳನ್ನು ಅಳವಡಿಸಿ ಕಾಪಾಡಿಕೊಳ್ಳಬೇಕಾಗಿತ್ತು.

ಪಟ್ಟಣದ ಇಂಡಿ ರಸ್ತೆಯಲ್ಲಿನ 2 ಎಕರೆ 30 ಗುಂಟೆ ಆಸ್ತಿ ಸಂಖ್ಯೆ 557 ಇದು ಪಿಡಬ್ಲೂಡಿ ಇಲಾಖೆಗೆ ಸೇರಿದ ಜಾಗೆ ಎಂದು ಗುರುತಿಸಲಾಗಿದೆ. ಇಲ್ಲಿ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಸಹ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದರೆ ಈಗ ಏಕಾಏಕಿ ಖಾಸಗಿ ವ್ಯಕ್ತಿ ಶೆಡ್‌ಗಳನ್ನುನಿರ್ಮಿಸಿ ಬೇರೆಯವರಿಗೆ ಬಾಡಿಗೆ ಕೊಡುವುದರ ಜೊತೆಗೆ ತಂತಿ ಬೇಲಿ ಹಾಕಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತದ ಮುಖ್ಯಸ್ಥರು, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮಗೊಳ್ಳದೇ ಮೌನವಾಗಿದ್ದಾರೆ. ಇದು ಕೇವಲ ಸರ್ಕಾರದ ಒಂದು ಮಾತ್ರ ಜಾಗೆಯಲ್ಲ. ಇಂತಹ ಹತ್ತು ಹಲವಾರು ಜಾಗೆಗಳಿದ್ದು, ಕ್ರಮೇಣ ಅನ್ಯರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ಜನರು.

ತಾಲ್ಲೂಕು ಕೇಂದ್ರ ಹಾಗೂ ಪಟ್ಟಣಕ್ಕೆ ಈಗ ಅಗ್ನಿಶಾಮಕ ದಳದ ಅಗತ್ಯತೆ ಹೆಚ್ಚಾಗಿದೆ. ಈ ಇಲಾಖೆಗೆ ಕನಿಷ್ಠ ಜಾಗೆಯಾದರೂ ಸಾಕಾಗಿತ್ತು. ಈಗ ಇಂಡಿ ರಸ್ತೆಯ ಅತಿಕ್ರಮಣಗೊಂಡ ಪಿಡಬ್ಲೂಡಿ ಜಾಗೆ ಅಗ್ನಿಶಾಮಕ ದಳದ ಕಚೇರಿ ಆರಂಭಕ್ಕೆ ಅತ್ಯಂತ ಸೂಕ್ತ. ಇಂಥ ವಿಷಯಗಳ ಬಗ್ಗೆ ಜನಸಾಮಾನ್ಯರೇ ಸಾಕಷ್ಟು ಉತ್ತರಿಸಬಲ್ಲರು. ಆದರೆ ಅಧಿಕಾರಿಗಳಲ್ಲಿ ಮಾತ್ರ ಇಂಥ ಪ್ರಶ್ನೆಗಳಿಗೆ ಯಾಕೆ ಉತ್ತರವಿಲ್ಲ ಎಂಬುವುದೇ ಅರ್ಥವಾಗುತ್ತಿಲ್ಲ.

ಪಟ್ಟಣದ ಸರ್ಕಾರಿ ಜಾಗೆಗಳ ಕುರಿತು ನಮಗೆ ಮಾಹಿತಿಯಿದೆ. ಇಂಡಿ ರಸ್ತೆಯ ಪಿಡಬ್ಲೂಡಿ ಇಲಾಖೆಯ ಜಾಗೆಯ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಆಗಿದೆ. ಅವರು ಅದಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸುತ್ತಾರೆ.
ಪ್ರಕಾಶ ಸಿಂದಗಿ, ದೇವರಹಿಪ್ಪರಗಿ ತಹಶೀಲ್ದಾರ್‌

‘ಏನಾದರೂ ಆಗಲಿ ಪಟ್ಟಣದಲ್ಲಿಯ ಇರುವ ಸರ್ಕಾರಿ ಜಾಗೆಗಳನ್ನು ಗುರುತಿಸಿ ಅಲ್ಲಿಯೇ ವಿವಿಧ ಇಲಾಖೆಗಳ ಕಚೇರಿ ಆರಂಭಕ್ಕೆ ಕ್ರಮ ವಹಿಸಬೇಕು. ಇದರಿಂದ ಸರ್ಕಾರ ಹಾಗೂ ಸಾರ್ವಜನಿಕರಿಗೂ ಅನುಕೂಲಕರ’ ಎನ್ನುತ್ತಾರೆ ಪಟ್ಟಣದ ಬಾಬು ಮೆಟಗಾರ ಹಾಗೂ ನಜೀರ್ ಕಲಕೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT