ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಪರಿಪೂರ್ಣವಾಗಿ ಸಿದ್ಧತೆ ಇನ್ನೂ ಪೂರ್ಣಗೊಳಿಸಿಲ್ಲ. ಜಿಲ್ಲೆಯು ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ, 122 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು, ಹಲವಾರು ಕಡೆ ಮಳೆಗಾಲಕ್ಕೆ ಸಿದ್ಧತೆಯನ್ನೇ ಕೈಗೊಂಡಿಲ್ಲ.

ನಗರ ಪ್ರದೇಶದ ರಾಜಕಾಲುವೆಗಳಲ್ಲಿ ಕಸ ತುಂಬಿದ್ದು, ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯುವುದು ಸಾಮಾನ್ಯವಾಗಿದೆ. ಇನ್ನೂ ಕೆಲವು ಕಡೆ ರಾಜಕಾಲುವೆ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಒತ್ತುವರಿ ತಡೆಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ನಗರದ ಗೋಗಿ ಮೊಹಲ್ಲಾ, ಮದನಪುರ ಸ್ಲಂ, ಅಂಬೇಡ್ಕರ್ ನಗರ, ಕೋಲಿವಾಡ, ಹೊಸಳ್ಳಿ ಕ್ರಾಸ್... ಹೀಗೆ ಹಲವಾರು ಕಡೆ ಚರಂಡಿಗಳು ತುಂಬಿವೆ.

‘ಲೋಕಸಭೆ, ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ನೆಪದಲ್ಲಿ ನಗರಸಭೆ, ಪುರಸಭೆ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛತೆ ಮಾಡಿಲ್ಲ. ಹೀಗಾಗಿ ಮಳೆಗಾಲ ಆರಂಭವಾದರೂ ಚರಂಡಿ ಸ್ವಚ್ಛತೆ ಮಾಡಿಲ್ಲ. ಇದರಿಂದ ಹೂಳು ತುಂಬಿ ಜೋರು ಮಳೆಯಾದರೆ ಚರಂಡಿ ನೀರು ರಸ್ತೆಗೆ ಹರಿಯುವುದು ತಪ್ಪುವುದಿಲ್ಲ’ ಎಂದು ಮುಸ್ಲಿಂಪುರ ನಿವಾಸಿ ಮಲ್ಲಿಕಾರ್ಜುನ ಸಿದ್ದಪ್ಪ ಹೇಳುತ್ತಾರೆ.

‘ನಗರದ ರಾಜಕಾಲುವೆ ಮೇಲೆ ಕೆಲ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿಕೊಂಡು ಪಾನ್‌ಶಾಪ್, ಹೊಟೇಲ್, ಚಹಾದಂಗಡಿ, ಎಳೆನೀರು ಮಾರಾಟ ಮಳಿಗೆ ನಿರ್ಮಿಸಿ ಪ್ರತಿ ತಿಂಗಳು ಅನಧಿಕೃತವಾಗಿ ಬಾಡಿಗೆ ಹಣ ಪಡೆಯುತ್ತಾರೆ. ಮಳಿಗೆ ತೆರವುಗೊಳಿಸಿ ಚರಂಡಿ ಸ್ವಚ್ಛಗೊಳಿಸಲು ಮುಂದಾದರೆ ರಾಜಕೀಯ ಪ್ರಭಾವ ಬಳಸಿಕೊಂಡು ತಡೆವೊಡ್ಡುತ್ತಾರೆ. ಇದರಿಂದ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡು ನಿಲ್ಲುವುದರ ಜತೆಗೆ ರಸ್ತೆ ಮೇಲೆ ನೀರು ಹರಿಯುತ್ತದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಗರಸಭೆ ಸಿಬ್ಬಂದಿಯೊಬ್ಬರು.

‘ಹೆದ್ದಾರಿ ಮೇಲಿರುವ ಮಳಿಗೆಯವರು ಗುಡಿಸಿದ ಕಸವನ್ನು ವಾಹನಕ್ಕೆ ಹಾಕುವುದಿಲ್ಲ. ಚರಂಡಿಯಲ್ಲಿ ಬಿಸಾಡುತ್ತಾರೆ. ಇದರಿಂದ ಚರಂಡಿ ಮುಚ್ಚಿಕೊಳ್ಳುತ್ತದೆ. ಅಲ್ಲದೆ ತರಕಾರಿ ಮಾರಾಟ ಮಳಿಗೆ ಪ್ರದೇಶದಲ್ಲಿಯೂ ಇದೆ ಗೋಳು. ಸಿಕ್ಕಾಪಟ್ಟೆ ತ್ಯಾಜ್ಯ ಎಸೆಯುತ್ತಾರೆ. ಸಾಗಿಸುವುದು ದೊಡ್ಡ ಕೆಲಸವಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿ ಒಬ್ಬರು.

ಪ್ರತಿ ಗ್ರಾಮಗಳ ಜಲ ಮೂಲಗಳಿಂದ ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷಿಸಲಾಗುತ್ತಿದೆ. ಕಳೆದ ಬಾರಿ ಸಂಭವಿಸಿದ ಸಮಸ್ಯೆಗಳು ತಲೆದೋರದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಪಂಚಾಯಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನರಲ್ಲಿ ನೀರನ್ನು ಕಾಯಿಸಿ ಕುಡಿಯುವ ಮತ್ತು ಮಳೆಗಾಲದ ವೇಳೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಸೂಚಿಸಿದ್ದು, ಆರೋಗ್ಯ ಸಮಸ್ಯೆಗಳಿಗೆ ಶೀಘ್ರ ಉಪಚಾರದ ನಿಟ್ಟಿನಲ್ಲಿ ನಮ್ಮಲ್ಲಿನ ಆರೋಗ್ಯ ಕೇಂದ್ರಗಳನ್ನು ಸನ್ನದ್ಧ ಗೊಳಿಸಲಾಗುತ್ತಿದೆ’ ಎಂದು ಟಿಎಚ್‌ಒ ಡಾ.ಹಣಮಂತರೆಡ್ಡಿ ತಿಳಿಸುತ್ತಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್

ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ!

ಶಹಾಪುರ: ನಗರದ 31 ವಾರ್ಡ್‌ಗಳಲ್ಲಿ ಹೆಚ್ಚಿನ ಬಡಾವಣೆಯಲ್ಲಿ ಅಲ್ಲಿನ ನಿವಾಸಿಗರು ಚರಂಡಿಯನ್ನು ಒತ್ತುವರಿ ಮಾಡಿ ಅದರ ಮೇಲೆ ಕಟ್ಟಡ, ಮಳಿಗೆ ನಿರ್ಮಿಸಿದ್ದಾರೆ. ಇದರಿಂದ ಚರಂಡಿ ಸ್ವಚ್ಛಗೊಳಿಸಲು ನಗರಸಭೆ ಪೌರ ಕಾರ್ಮಿಕರಿಗೆ ತಲೆ ನೋವಾಗಿ ಪರಿಣಮಿಸಿದೆ.

‘ನಗರಸಭೆಯ ಕಸ ವಿಲೇವಾರಿಗೆ 18 ವಾಹನಗಳು ಇವೆ. ನಿಗದಿತ ಸಮಯಕ್ಕೆ ದಿನಾಲು ಆಯಾ ಬಡಾವಣೆಗೆ ಬರುವುದಿಲ್ಲ. ಇದರಿಂದ ತ್ಯಾಜ್ಯ ಸಂಗ್ರಹವೂ ಹೆಚ್ಚಾಗಿ ದುರ್ವಾಸನೆ ಬರುತ್ತದೆ. ಮಳೆಗಾಲ ಶುರುವಾಗಿದೆ. ನಿಗದಿಪಡಿಸಿದ ಸಮಯಕ್ಕೆ ವಾಹನ ಬರುವಂತೆ ವ್ಯವಸ್ಥೆ ಮಾಡಬೇಕು’ ಎಂದು ನಗರದ ಜನತೆ ಮನವಿ ಮಾಡಿದ್ದಾರೆ.

ಮಳೆಗಾಲ ಎದುರಿಸಲು ಸಿದ್ಧತೆ

ಸುರಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಬರುತ್ತಿದೆ. ಮಳೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಗರಸಭೆ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಎಲ್ಲ 31 ವಾರ್ಡ್‌ಗಳಲ್ಲಿ ಬರುವ ಚರಂಡಿಗಳನ್ನು ಸ್ವಚ್ಛಗಳಿಸಲಾಗುತ್ತಿದೆ. ಸಮಸ್ಯಾತ್ಮಕ ಸ್ಥಳಗಳಾದ ಕುಂಬಾರಪೇಟೆ, ಹಳೆ ಬಸ್‌ನಿಲ್ದಾಣ, ಖುರೇಶಿ ಮೋಹಲ್ಲಾ, ಮಾರುಕಟ್ಟೆ, ವೆಂಕಟಾಪುರ, ಸತ್ಯಂಪೇಟೆ, ರಂಗಂಪೇಟೆಗಳಲ್ಲಿ ಬರುವ ದೊಡ್ಡ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಮಳೆಗಾಲದಲ್ಲಿ ಈ ಮೇಲ್ಕಂಡ ಸ್ಥಳಗಳಲ್ಲಿ ಬ್ಲಾಕೇಜ್ ಉಂಟಾಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಮತ್ತು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿತ್ತು.

ಕೊಳಗೇರಿ ಪ್ರದೇಶ ವಣಕಿಹಾಳದ ಸುಡುಗಾಡು ಸಿದ್ಧರ ಕಾಲೊನಿ ಹೆಚ್ಚು ಮಳೆ ಬಂದಾಗ ಜಲಾವೃತವಾಗುತ್ತಿತ್ತು. ಕಾಲೊನಿಯ ಸುತ್ತಲೂ ಒಡ್ಡು ಹಾಕುವ ಮೂಲಕ ನೀರು ಒಳಗೆ ನುಸುಳದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಬೀದಿ ದೀಪ ತಂತಿಗಳಿಗೆ ಅಡ್ಡಲಾಗಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಲಾಗುತ್ತಿದೆ. ಮಳೆಗಾಲದಲ್ಲಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ನಗರಸಭೆ ಸಿಬ್ಬಂದಿ ತೆಗೆದುಕೊಳ್ಳುತ್ತಿದೆ.

‘ಮಳೆಗಾಲ ಎದುರಿಸಲು ಅಗತ್ಯ ತಯಾರಿ’

ಹುಣಸಗಿ: ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್ ತೆಲಂಗ ತಿಳಿಸಿದ್ದಾರೆ.

ಈಗಾಗಲೇ ಚರಂಡಿ ಹೂಳು ಸ್ವಚ್ಛಗೊಳಿಸಲಾಗಿದೆ. ಪಟ್ಟಣದಲ್ಲಿರುವ ಹಿರೇಹಳ್ಳದ ಪಕ್ಕದಲ್ಲಿರುವ ಹೂಳನ್ನು ತೆರವುಗೊಳಿಸಲಾಗಿದೆ. ನೀರು ನಿಲ್ಲುವ ಸ್ಥಳ ಗುರುತಿಸಿ ಸ್ವಚ್ಛಗೊಳಿಸಲಾಗಿದೆ ಎಂದು ವಿವರಿಸಿದರು.

ಆದರೆ, ಪಟ್ಟಣದ ಕೆಂಭಾವಿ ಕ್ರಾಸ್‌ನಲ್ಲಿ ಬರುವ ಮಾರ್ಗದಲ್ಲಿರುವ ಕಣಗಾಲ ಬಾವಿಯಿಂದ ಹಿರೇಹಳ್ಳ ಕೂಡುವ ಹಳ್ಳವು ಬಹುತೇಕ ಮುಳ್ಳುಕಂಟಿಗಳಿಂದ ತುಂಬಿಕೊಂಡಿದೆ. ಇದರಿಂದಾಗಿ ಕಲುಷಿತ ನೀರು ನಿಂತು ದುರ್ನಾತ ಬೀರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ನಿವಾಸಿ ಚೆನ್ನಕುಮಾರ್ ದಿಂಡವಾರ ಹೇಳಿದ್ದಾರೆ.

ಆರಂಭವಾದ ಮಳೆಗಾಲ: ಮುಂಜಾಗ್ರತೆಗಳೊಂದಿಗೆ ತಯಾರಿ

ಗುರುಮಠಕಲ್: ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಳ್ಳುತ್ತಿದ್ದು, ಮಳೆಗಾಲದ ವೇಳೆ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವ ಸಮಸ್ಯೆಯೂ ತಲೆದೂರದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಯೆ ಈಗಾಗಲೇ ಬಹುತೇಕ ತಯಾರಿ ನಡೆಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಕಳೆದ ವರ್ಷ ತಾಲ್ಲೂಕು ವ್ಯಪ್ತಿಯಲ್ಲಿ ಅನಪುರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣದಲ್ಲಿ ಪ್ರಾಣಾಪಾಯದ ನಂತರ, ಚಿನ್ನಾಕಾರ, ದಂತಾಪುರ, ಹಿಮಾಲಪುರ, ಗಾಜರಕೋಟ ಗ್ರಾಮಗಳಲ್ಲಿ ವಾಂತಿ-ಭೇದಿ ಸಮಸ್ಯೆ ತಲೆಯೆತ್ತಿದ ಕಾರಣ ಹಲವು ಜನ ಆರೋಗ್ಯ ಸಮಸ್ಯೆಗೆ ಸಿಲುಕಿದ್ದರು. ಅದನ್ನು ಗಮನದಲ್ಲಿರಿಸಿಕೊಂಡು ಮೇಲಾಧಿಕಾರಿಗಳು ಪದೇ-ಪದೇ ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ಎಚ್ಚರಿಕೆ ನೀಡುವ ಜತೆಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಪಿಡಿಒ ಒಬ್ಬರು ಮಾಹಿತಿ ನೀಡಿದರು.

ಕಳೆದ ವರ್ಷ ಸಮಸ್ಯೆಯಾದ ಗ್ರಾಮಗಳಿಗೆ ತಾಲ್ಲೂಕು ಪಂಚಾಯಿತಿ ಇಒ ವಿಲಾಸರಾಜ್, ಟಿಎಚ್‌ಒ ಡಾ.ಹಣಮಂತರೆಡ್ಡಿ ಹಾಗೂ ಗ್ರಾಮೀಣ ನೀರು ಸರಬರಾಜು ಎಇಇ ಬಸವರಾಜ ಐರಡ್ಡಿ ಅವರು ಮಂಗಳವಾರ (ಮೇ 28) ಭೇಟಿ ನೀಡಿ, ಅಲ್ಲಿನ ತಯಾರಿಯನ್ನು ಖುದ್ದು ಪರಿಶೀಲಿಸಿದ್ದಾರೆ. ಜತೆಗೆ ಆಯಾ ಪಂಚಾಯಿತಿ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡಿದ್ದಾರೆ.

‘ಪ್ರತಿ ವರ್ಷವೂ ಹೀಗೆ ಮಾಡುತ್ತಾರೆ. ಆದರೆ, ನಿಜವಾಗಿಯೂ ಮುತುವರ್ಜಿಯಿಂದ ಕೆಲಸಗಳಾಗುತ್ತವೆಯೇ? ಗ್ರಾಮೀಣ ಭಾಗದಲ್ಲಿ ಇನ್ನೂ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಬೇಜವಾಬ್ದಾರಿ ಕಡಿಮೆಯಾಗಿಲ್ಲ. ಸಂಬಂಧಿಸಿದವರು ಮೊದಲು ಗ್ರಾಮೀಣ ಜನತೆಯ ಆಶೋತ್ತರಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಕೆಲಸ ಮಾಡಲಿ’ ಎಂದು ಸಾಮಾಜಿಕ ಕಾರ್ಯಕರ್ತರಾದ ಮಹಾದೇವ ಸಿ.ಎಂ.ವೈ. ಹಾಗೂ ಸಂಜು ಅಳೆಗಾರ ಹೇಳುತ್ತಾರೆ.

ಯಾರು ಏನೆಂದರು?

ನಗರದಲ್ಲಿ ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಚರಂಡಿ ಹೂಳು ತೆಗೆಯಲಾಗುತ್ತಿದೆ. 31 ವಾರ್ಡ್‌ಗಳಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ

ಲಕ್ಷ್ಮೀಕಾಂತ ರೆಡ್ಡಿ, ನಗರಸಭೆ ಪೌರಾಯುಕ್ತ

ಮಳೆಯಿಂದ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಚರಂಡಿಗಳ ತ್ಯಾಜ್ಯ ತೆರವುಗೊಳಿಸಲಾಗಿದೆ. ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಅಲ್ಲಲ್ಲಿ ಬಿದ್ದಿರುವ ತಗ್ಗುಗಳನ್ನು ಮುಚ್ಚಲಾಗಿದೆ

ಹಣಮಂತ ಯಾದವ, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ, ಸುರಪುರ

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಗರಸಭೆ ಕಾಮಗಾರಿ ಮಾಡಬೇಕು. ಕೇವಲ ಮಳೆಗಾಲದಲ್ಲಿ ಎಚ್ಚೆತ್ತುಕೊಂಡು ತಾತ್ಕಾಲಿಕ ವ್ಯವಸ್ಥೆ ನಿರ್ವಹಿಸುವುದು ಸರಿಯಲ್ಲ

ವೆಂಕಟೇಶ ಭಕ್ರಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುರಪುರ

ವಡಗೇರಾ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಟ್ಯಾಂಕ್, ತೆರೆದ ಬಾವಿಗಳನ್ನು ಏಕಕಾಲಕ್ಕೆ ಅಭಿಯಾನದ ರೂಪದಲ್ಲಿ ಈಗಾಗಲೇ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲಾಗಿದೆ

ಮಲ್ಲಿಕಾರ್ಜುನ ಸಂಗ್ವಾರ, ತಾಪಂ ಇಒ, ವಡಗೇರಾ

ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಸಾಗಲು ನಗರ ಪ್ರದೇಶದಲ್ಲಿ ಸ್ವಚ್ಛತೆಯ ಕಾರ್ಯ ನಡೆದಿದೆ. ಚರಂಡಿಯಲ್ಲಿ ತ್ಯಾಜ್ಯ ವಸ್ತು ಮತ್ತು ಪ್ಲಾಸ್ಟಿಕ್ ಎಸೆಯುತ್ತಿರುವುದು ದೊಡ್ಡ ತಲೆನೋವಾಗಿದೆ.

ಹರೀಶ ಸಜ್ಜನಶೆಟ್ಟಿ, ಪರಿಸರ ಎಂಜಿನಿಯರ್, ಶಹಾಪುರ

ನಗರದ ಕೆಲ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಚರಂಡಿ ಜಾಗ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಮಳಿಗೆ ನಿರ್ಮಿಸಿದ್ದಾರೆ. ಚರಂಡಿ ಸ್ವಚ್ಛಗೊಳಿಸಲು ಇದು ಸಾಧ್ಯವಾಗುತ್ತಿಲ್ಲ. ಕಸ ಹೊತ್ತು ಹೋಗುವ ಇನ್ನೂ ಹೆಚ್ಚಿನ ವಾಹನಗಳನ್ನು ಓಡಾಡಿಸಬೇಕು. ನಿಗದಿತ ಸಮಯಕ್ಕೆ ಆಗಮಿಸಬೇಕು

ಮಾನಪ್ಪ ಹಡಪದ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.